ನಿರುದ್ಯೋಗ ಭತ್ಯೆಗೆ 250 ಕೋಟಿ ರೂ. ಅನುದಾನ ಹಂಚಿಕೆ
ಬೆಂಗಳೂರು: ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ನಿರುದ್ಯೋಗಿ ಯುವಜನರಿಗೆ ಯುವನಿಧಿ ಯೋಜನೆ ಜಾರಿಗೆ ಮುಂದಾಗಿದ್ದು, ಡಿಸೆಂಬರ್ 26 ರಿಂದ ಫಲಾನುಭವಿಗಳ ನೋಂದಣಿಗೆ ಚಾಲನೆ ನೀಡಲಾಗುವುದು ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಇಲಾಖೆ ಮುಖಾಂತರ ಯುವನಿಧಿ ಯೋಜನೆ ಜಾರಿಗೊಳಿಸಲಾಗುತ್ತಿದೆ, 2023-24ನೇ ಸಾಲಿಗೆ ನಿರುದ್ಯೋಗ ಭತ್ಯೆ ನೀಡಲು 250 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ ಎಂದರು.
ಯೋಜನೆಯಡಿ ರಾಜ್ಯದ ಪದವೀಧರರು/ಸ್ನಾತಕೋತ್ತರ ಪದವೀಧರರು/ಡಿಪ್ಲೋಮಾ ತೇರ್ಗಡೆಯಾದವರು ನಿರುದ್ಯೋಗ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ.
ಪದವೀಧರರಿಗೆ ಮಾಸಿಕ 3,000 ರೂ., ಡಿಪ್ಲೋಮಾದವರಿಗೆ ಮಾಸಿಕ 1,500 ರೂ.
ಪದವೀಧರರಿಗೆ ಮಾಸಿಕ 3,000 ರೂ., ಡಿಪ್ಲೋಮಾ ತೇರ್ಗಡೆಯಾದವರಿಗೆ ಮಾಸಿಕ 1,500 ರೂ. ನಿರುದ್ಯೋಗ ಭತ್ಯೆಯನ್ನು ಅಭ್ಯರ್ಥಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ನೀಡಲು ತೀರ್ಮಾನಿಸಲಾಗಿದೆ.
ಪದವೀಧರರು 4,81,000 ಹಾಗೂ ಡಿಪ್ಲೋಮಾ ತೆರ್ಗಡೆ ಹೊಂದಿದವರು 48,153 ಸೇರಿ ರಾಜ್ಯಾದ್ಯಂತ ಒಟ್ಟು 5,26,153 ಫಲಾನುಭವಿಗಳು ಇದರ ಸದುಪಯೋಗ ಪಡೆಯುವ ವಿಶ್ವಾಸವಿದೆ ಎಂದರು.
ಕನಿಷ್ಠ 6 ವರ್ಷ ಕರ್ನಾಟಕ ರಹವಾಸಿಯಾಗಿ ವ್ಯಾಸಂಗ ಮಾಡಿರಬೇಕು
ಅಭ್ಯರ್ಥಿಗಳು 2022-23 ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿ, 2023 ರಲ್ಲಿ ತೇರ್ಗಡೆ ಹೊಂದಿರಬೇಕು. ಅಭ್ಯರ್ಥಿಗಳು ಕನಿಷ್ಠ 6 ವರ್ಷಗಳ ಕಾಲ ಕರ್ನಾಟಕದ ರಹವಾಸಿಯಾಗಿ ವ್ಯಾಸಂಗ ಮಾಡಿರಬೇಕು.
ಸಂಬಧಪಟ್ಟ ಶೈಕ್ಷಣಿಕ ಫಲಿತಾಂಶ ಪ್ರಕಟವಾದ 180 ದಿನಗಳು ಪೂರ್ಣಗೊಂಡ ನಂತರವೂ ನಿರುದ್ಯೋಗಿಯಾಗಿರುವ ಪದವೀಧರ ಅಭ್ಯರ್ಥಿ ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆಯನ್ನು2 ವರ್ಷದವರೆಗೆ ಅಥವಾ ಉದ್ಯೋಗ ದೊರಕುವವರೆಗೆ, ಯಾವುದು ಮೊದಲೋ ಅಲ್ಲಿಯವರೆಗೆ ಪಡೆಯಲು ಅರ್ಹರಾಗಿರುತ್ತಾರೆ ಎಂದರು.
ಸೇವಾಸಿಂಧು ಜಾಲತಾಣಕ್ಕೆ ಲಾಗಿನ್ ಆಗಿ ಅರ್ಜಿ ಸಲ್ಲಿಸಬೇಕು
ಆಸಕ್ತರು ಸೇವಾಸಿಂಧು ಜಾಲತಾಣಕ್ಕೆ ಲಾಗಿನ್ ಆಗಿ ಅರ್ಜಿ ಸಲ್ಲಿಸಬೇಕು, ಈಗಾಗಲೇ ಪದವಿ/ ಡಿಪ್ಲೋಮಾ ತೇರ್ಗಡೆಯಾದ ಅಭ್ಯರ್ಥಿಗಳ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಖಚಿತಪಡಿಸಿಕೊಳ್ಳಲು ಪದವಿ/ಡಿಪ್ಲೋಮಾ ಪ್ರಮಾಣಪತ್ರದಲ್ಲಿ ನೀಡಿರುವ ನೊಂದಣಿ ಸಂಖ್ಯೆಯನ್ನು ದಾಖಲಿಸಿ ಪರಿಶೀಲಿಸಿಕೊಳ್ಳಬಹುದು. ಇದಕ್ಕೆ ಪೂರಕವಾಗಿ ಸೇವಾಸಿಂಧು ಮುಖಪುಟದಲ್ಲಿ ಲಿಂಕ್ ನೀಡಲಾಗಿದೆ.
ಯುವನಿಧಿ ಯೋಜನೆಗೆ ಅರ್ಜಿಗಳನ್ನು ಕರ್ನಾಟಕ-ಓನ್, ಬಾಪೂಜಿ ಸೇವಾ ಕೇಂದ್ರಗಳು, ಗ್ರಾಮ-ಓನ್ ಕೇಂದ್ರಗಳಲ್ಲಿ ಸಲ್ಲಿಸಬಹುದಾಗಿದೆ.
ಅರ್ಜಿ ಸಮರ್ಪಕವಾಗಿ ಸಲ್ಲಿಸಿದ ನಂತರ ಅಭ್ಯರ್ಥಿಯ ಮೊಬೈಲ್ ಸಂಖ್ಯೆಗೆ ಅರ್ಜಿ ಸ್ವೀಕೃತವಾದ ಬಗ್ಗೆ ಸಂದೇಶ ಬರುತ್ತದೆ ಎಂದರು.