ರಾಜ್ಯದಲ್ಲಿನ ಬೆಳವಣಿಗೆ ಬಗ್ಗೆ ಪ್ರಧಾನಿಗೆ ಮಾಹಿತಿ
ಬೆಂಗಳೂರು:ಕರ್ನಾಟಕ ಕಾಂಗ್ರೆಸ್‌ನಲ್ಲಿರುವ ಒಡಕು, ಸಿದ್ದರಾಮಯ್ಯ ಸರ್ಕಾರದಲ್ಲಿನ ಭ್ರಷ್ಟಾಚಾರ ಮತ್ತು ತಾರತಮ್ಯ ಆಡಳಿತದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿಂದು ತಮ್ಮ ತಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಜೊತೆಗೂಡಿ, ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ರಾಜ್ಯದ ಆಡಳಿತ ಮತ್ತು ರಾಜಕೀಯ ಸೇರಿದಂತೆ ಮುಂಬರುವ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಹಾಗೂ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಚರ್ಚೆ ನಡೆಸಿದರು.
ಪ್ರಧಾನಿ ಅವರ ಜೊತೆ ಸುಮಾರು 50 ನಿಮಿಷಗಳ ಕಾಲ ಚರ್ಚೆ ನಡೆಸಿದ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ವಿಚಾರವೇ ಕೇಂದ್ರ ಬಿಂದುವಾಗಿತ್ತು.
ಕಾಂಗ್ರೆಸ್ ಮತ್ತು ಆಡಳಿತದಲ್ಲಿ ಇರುವ ಭಿನ್ನಾಭಿಪ್ರಾಯ
ರಾಜ್ಯ ಕಾಂಗ್ರೆಸ್ ಮತ್ತು ಆಡಳಿತದಲ್ಲಿ ಇರುವ ಭಿನ್ನಾಭಿಪ್ರಾಯವನ್ನು ಮಾತುಕತೆ ಸಂದರ್ಭದಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟ ಕುಮಾರಸ್ವಾಮಿ ಅವರು, ಕರ್ನಾಟಕಲ್ಲಿನ ಏಕನಾಥ್ ಸಿಂಧೆ ಇಲ್ಲವೆ ಅಜಿತ್ ಪವಾರ್ ಪಾತ್ರಧಾರಿಗಳಲ್ಲಿ ಯಾರನ್ನು ಬೆಂಬಲಿಸಿ ಹೊರತರಬೇಕು ಎಂಬ ಬಗ್ಗೆಯೂ ಚರ್ಚೆಯಾಗಿದೆ.
ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ನಡೆದಿದೆ ಎಂಬ ಹಗರಣಗಳ ಬಗ್ಗೆಯೂ ದಾಖಲೆ ಸಹಿತ ಪ್ರಧಾನಿ ಅವರಿಗೆ ಮಾಹಿತಿ ನೀಡಿ ಚುನಾವಣೆಯಲ್ಲಿ ಈ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳುವ ಕುರಿತಂತೆ ಚರ್ಚೆಯಾಗಿದೆ.
ಮುಂಬರುವ ಲೋಕಸಭೆ ಚುನಾವಣೆಯನ್ನು ಕರ್ನಾಟಕದ ಮಟ್ಟಿಗೆ ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಿನಿಂದ ಹೋರಾಟ ನಡೆಸಿ 20ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಸಂಬಂಧ ಪ್ರಧಾನಿ ಅವರು ಕೆಲವು ಕಿವಿಮಾತುಗಳನ್ನು ಕುಮಾರಸ್ವಾಮಿ ಅವರಿಗೆ ನೀಡಿದ್ದಲ್ಲದೆ, ಆ ಪಕ್ಷ ಮತ್ತು ಸರ್ಕಾರ ವಿರುದ್ಧ ಹೋರಾಟ ನಡೆಸಿ, ನಿಮ್ಮ ಹಿಂದೆ ನಾವು ಮತ್ತು ಪಕ್ಷ ಇರಲಿದೆ ಎಂಬ ಅಭಯ ನೀಡಿದ್ದಾರೆ.
ಜೆಡಿಎಸ್ ಕರ್ನಾಟಕದಲ್ಲಿ 4 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿರುವುದರಿಂದ ಮಹತ್ವದ ಚರ್ಚೆಯಾಗಿಲ್ಲ. ಆದರೆ, ಕ್ಷೇತ್ರ ಮತ್ತು ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ಪ್ರಧಾನಿಗೆ ಮಾಹಿತಿ ನೀಡಿದ್ದಾರೆ.
ಕುಮಾರಸ್ವಾಮಿ ಹಾಗೂ ಪ್ರಧಾನಿ ಹೆಚ್ಚು ಚರ್ಚೆ
ಈ ಸಂದರ್ಭದಲ್ಲಿ ದೇವೇಗೌಡರು ಚುನಾವಣೆಗೆ ಸಂಬಂಧಿಸಿದಂತೆ ಕೆಲವು ಸಲಹೆಗಳನ್ನು ನೀಡಿದ್ದನ್ನು ಹೊರತುಪಡಿಸಿದರೆ, ಉಳಿದೆಲ್ಲಾ ವಿಚಾರಗಳ ಬಗ್ಗೆ ಕುಮಾರಸ್ವಾಮಿ ಹಾಗೂ ಪ್ರಧಾನಿ ಅವರೇ ಹೆಚ್ಚು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.
ಪ್ರಧಾನಿಯವರ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯ ರಾಜಕೀಯ ಪರಿಸ್ಥಿತಿಯ ಜತೆಗೆ ಕೊಬ್ಬರಿ ಖರೀದಿ, ಕಾಡುಗೊಲ್ಲ ಜಾತಿಗೆ ಮೀಸಲಾತಿ ಸೌಲಭ್ಯ ಹಾಗೂ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಮಾಜಿ ಪ್ರಧಾನಿಗಳು, ಮೋದಿ ಅವರ ಜತೆ ಚರ್ಚೆ ನಡೆಸಿದರು.
ನಮ್ಮ ಕುಟುಂಬದ ವತಿಯಿಂದ ಲೋಕಸಭಾ ಚುನಾವಣಾ ಕಣಕ್ಕೆ ಇಳಿಯಬಾರದು ಎಂಬ ನಿಲುವು ತೆಗೆದುಕೊಂಡಿದ್ದೇವೆ. ನಾನಂತು ರಾಜ್ಯ ರಾಜಕೀಯದಲ್ಲೇ ಇರುತ್ತೇನೆ. ನನ್ನ ಪುತ್ರ ನಿಖಿಲ್ ಕುಮಾರಸ್ವಾಮಿ ಎರಡು ಬಾರಿ ಸೋತಿದ್ದಾರೆ. ಮತ್ತೆ ಸ್ಪರ್ಧಿಸಲು ಅವರಿಗೆ ಆಸಕ್ತಿ ಇಲ್ಲ. ಆದರೆ, ಮಂಡ್ಯದ ಮುಖಂಡರು ಹಾಗೂ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ ಎಂದರು.
ಜೆಡಿಎಸ್ ಮತ್ತು ಬಿಜೆಪಿ ನಡುವೆ ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಯಾವುದೇ ಸಮಸ್ಯೆ, ಗೊಂದಲ ಇಲ್ಲ. ಯಾವ ಯಾವ ಕ್ಷೇತ್ರದಲ್ಲಿ ಯಾರು ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವುದನ್ನು ನಾವೇ ಪರಸ್ಪರ ಕೂತು ಅಂತಿಮಗೊಳಿಸುತ್ತೇವೆ.
ಒಂದು ಕ್ಷೇತ್ರ ಹೆಚ್ಚೂ ಕಡಿಮೆ ಆಗಬಹುದು ಅಷ್ಟೇ. ಅದರಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಮುಖ್ಯವಾಗಿ ಪರಸ್ಪರ ವಿಶ್ವಾಸ ಬೇಕು ಅಷ್ಟೇ, ಅದನ್ನು ನಾವು ಉಳಿಸಿಕೊಳ್ಳಬೇಕು. ಅದಕ್ಕೆ ಏನೆಲ್ಲಾ ಮಾಡಬೇಕೋ ಅದನ್ನು ಮಾಡುತ್ತೇನೆ. ಜನವರಿ ಅಂತ್ಯದ ಒಳಗೆ ನಾವು ಎಲ್ಲಾ ನಿರ್ಧಾರ ಮಾಡುತ್ತೇವೆ ಎಂದರು.
ಎಲ್ಲೆಲ್ಲಿ ಗೆಲ್ಲುತ್ತೇವೆ ಅಂತ ನಮ್ಮ ಬಳಿ ರಿಪೋರ್ಟ್ ಇದೆ
ನಾವು ಎಷ್ಟು ಗೆಲ್ಲುತ್ತೇವೆ ಎನ್ನುವ ಕಡೆಯಷ್ಟೇ ನಾವು ಕೇಳುತ್ತೇವೆ. ನಾವು ಎಲ್ಲೆಲ್ಲಿ ಗೆಲ್ಲುತ್ತೇವೆ ಅಂತ ನಮ್ಮ ಬಳಿ ರಿಪೋರ್ಟ್ ಇದೆ. ಆ ರಿಪೋರ್ಟ್ ಪ್ರಕಾರ ನಾವು ಕೆಲಸ ಮಾಡುತ್ತೇವೆ.
ಇಲ್ಲಿ ಸೀಟ್ ಹಂಚಿಕೆ ಒಂದೇ ಪ್ರಮುಖ ಅಲ್ಲ, ನಾವು ಪರಸ್ಪರ ವಿಶ್ವಾಸ, ನಂಬಿಕೆಯಿಂದ ಕೆಲಸ ಮಾಡುತ್ತೇವೆ. ಮೂರನೇ ಅವಧಿಗೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ಲೋಕಸಭೆ ಚುನಾವಣೆಯ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಉರುಳುತ್ತಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟದ ರಾಜಕೀಯದಲ್ಲಿ ಶಿಂಧೆಯೂ ಇದ್ದಾರೆ, ಅಜಿತ್ ಪವಾರ್ ಸಹ ಇದ್ದಾರೆ. ಯಾರು ಮೊದಲು ಮುಂದೆ ಬರುತ್ತಾರೋ ಕಾದು ನೋಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಏನು ಬೇಕಾದರೂ ಆಗಬಹುದು ಎಂದು ಮಾರ್ಮಿಕವಾಗಿ ಉತ್ತರ ಕೊಟ್ಟರು.
ಸಂಸತ್ ಕಲಾಪ ಹಾಳು ಮಾಡುತ್ತಿರುವುದು ಸರಿಯಲ್ಲ
ಸಂಸತ್ ಭವನದಲ್ಲಿ ಯುವಕರು ಹೊಗೆ ಬಾಂಬ್ ಸಿಡಿಸಿದ ಪ್ರಕರಣವನ್ನೇ ದೊಡ್ಡದು ಮಾಡಿ ಕಾಂಗ್ರೆಸ್ ಪಕ್ಷ ಸಂಸತ್ ಕಲಾಪವನ್ನು ಹಾಳು ಮಾಡುತ್ತಿರುವುದು ಸರಿಯಲ್ಲ. ಈ ವಿಚಾರದಲ್ಲಿ ವಿಪಕ್ಷಗಳ ನಡೆ ಸರಿ ಇಲ್ಲ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅವರಿಗೆ ನಾನು ಕೇಳಬಯಸುತ್ತೇನೆ, ಸಂಸತ್ ಘಟನೆಯನ್ನೇ ಭದ್ರತಾ ವೈಫಲ್ಯ ಅನ್ನುವುದಾದರೆ ವಿಧಾನಸಭೆಯ ಅಧಿವೇಶನದ ವೇಳೆ ಒಬ್ಬ ವ್ಯಕ್ತಿ ಸದನದ ಒಳಕ್ಕೆ ಬಂದು ಒಂದೂವರೆ ಗಂಟೆ ಕಲಾಪದಲ್ಲಿ ಭಾಗಿಯಾಗಿದ್ದ. ಅದನ್ನು ಏನೆಂದು ಕರೆಯಬೇಕು ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ಕುಮಾರಸ್ವಾಮಿ ಅವರು ಸೆಂಟ್ರಲ್ ಮಿನಿಸ್ಟರ್ ಆಗ್ತಾರಾ ಎನ್ನುವ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ ಕುಮಾರಸ್ವಾಮಿ, ಯಾರ ಹಣೆಯ ಮೇಲೆ ಏನ್ ಬರೆದಿದೆಯೋ ಅಂತ ಗೊತ್ತಿಲ್ಲಾ, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಕಾದು ನೋಡೋಣ, ಮುಂದೆ ಏನೇನು ನಡೆಯುತ್ತೋ ಎಂದರು.