ಧರ್ಮಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಖಂಡನೀಯ
ನವದೆಹಲಿ: ಹಿಜಾಬ್‌ಗೆ ಮತ್ತೆ ಅವಕಾಶ ಮಾಡಿಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಮೂಲಕ ಸಮಾಜಗಳನ್ನು ಒಡೆಯುವ ಮತ್ತು ಧರ್ಮಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಚಾರದಲ್ಲಿ ಮುಖ್ಯಮಂತ್ರಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದು, ಕನಿಷ್ಠ ಶಾಲಾ-ಕಾಲೇಜು ಮಕ್ಕಳನ್ನಾದರೂ ರಾಜಕೀಯದಿಂದ ದೂರ ಇಡುವ ಕೆಲಸ ಮಾಡಬೇಕಿತ್ತು ಎಂದರು.
ಅಧಿಕಾರದಲ್ಲಿದ್ದಾಗ ತಲೆತಗ್ಗಿಸುವ ಕೆಲಸ
ಹಿಜಾಬ್‌ಗೆ ಅವಕಾಶ ಮಾಡಿಕೊಡುವುದಾಗಿ ಹೇಳುವ ಸರ್ಕಾರ ಈ ಹಿಂದೆ ಅಧಿಕಾರದಲ್ಲಿದ್ದಾಗ ಪರೀಕ್ಷಾ ಕೊಠಡಿ ಪ್ರವೇಶಿಸುವ ಮುನ್ನ ವಿದ್ಯಾರ್ಥಿನಿಯರು ಹಾಗೂ ತಾಯಂದಿರು ತಾಳಿ, ಕಾಲುಂಗುರ ತೆಗೆದಿಟ್ಟು ಹೋಗುವಂತೆ ಸೂಚಿಸಿತ್ತು, ಇಂತಹ ನಡವಳಿಕೆ ತಲೆತಗ್ಗಿಸುವಂಥದ್ದು, ಬಿಜೆಪಿ ಇದನ್ನು ಬಲವಾಗಿ ಖಂಡಿಸುತ್ತದೆ.
ಕಾಂಗ್ರೆಸ್ ತುಷ್ಟೀಕರಣ ನೀತಿ ಅನುಸರಿಸುತ್ತಿದೆ, ಸ್ವಾತಂತ್ರ್ಯಾ ನಂತರ 60 ವರ್ಷಗಳ ಕಾಲ ದೇಶ ಹಾಗೂ ರಾಜ್ಯ ಆಳಿದರೂ, ಶೇ. 50ರಷ್ಟು ಅಲ್ಪಸಂಖ್ಯಾತರು ಶಿಕ್ಷಣದಿಂದ ವಂಚಿತರಾಗಿದ್ದಾರೆ.
ಶೇ.60ಕ್ಕಿಂತ ಹೆಚ್ಚು ಅಲ್ಪಸಂಖ್ಯಾತ ಬಂಧುಗಳು ಇಂದಿಗೂ ರಾಜ್ಯ ಮತ್ತು ದೇಶದಲ್ಲಿ ನಿರುದ್ಯೋಗಿಗಳಾಗಿರುವುದಕ್ಕೆ ಹೊಣೆ ಯಾರು.
ಅಲ್ಪಸಂಖ್ಯಾತರನ್ನು ಮತ ಬ್ಯಾಂಕ್ ಆಗಿ ಕಾಂಗ್ರೆಸ್ ದುರುಪಯೋಗ ಪಡಿಸಿಕೊಂಡಿದೆಯೇ ಹೊರತು, ಅವರ ಶಿಕ್ಷಣಕ್ಕೆ ಒತ್ತು ಕೊಟ್ಟು ಆರ್ಥಿಕವಾಗಿ ಮೇಲೆತ್ತುವ ಕಾರ್ಯ ಮಾಡಲೇ ಇಲ್ಲ.
ಅಲ್ಪಸಂಖ್ಯಾತರ ಕುರಿತು ಕೇವಲ ಭಾಷಣ ಮಾಡುತ್ತೀರಿ, ಅವರಿಗಾಗಿ ಯೋಜನೆ ರೂಪಿಸುವ ಮೂಲಕ ಮೇಲೆತ್ತಿದ್ದೀರಾ ಎಂದು ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದ್ದಾರೆ.
ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ
ರಾಜ್ಯದಲ್ಲಿ ಭೀಕರ ಬರಗಾಲವಿದೆ, ರೈತರ ಸಂಕಷ್ಟಕ್ಕೆ ಸ್ಪಂದಿಸದೆ, ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಕ್ಷೇತ್ರ ಗೆಲ್ಲುವ ಕನಸು ಕಾಣುತ್ತಿದೆ ಎಂದರು.
ಪ್ರಧಾನಿ ತ್ರಿವಳಿ ತಲಾಖ್ ರದ್ದು ಮಾಡಿದರು
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬ ಅಲ್ಪಸಂಖ್ಯಾತ ಮಹಿಳೆ ಗೌರವ, ಸ್ವಾಭಿಮಾನದಿಂದ ಬದುಕಬೇಕೆಂಬ ದೃಷ್ಟಿಕೋನದಿಂದ ತ್ರಿವಳಿ ತಲಾಖ್ ರದ್ದು ಮಾಡಿದರು.
ಪಂಚರಾಜ್ಯಗಳ ಚುನಾವಣೆ ಫಲಿತಾಂಶ ದೇಶದ ಪ್ರಜ್ಞಾವಂತ ಮತದಾರರು, ಕಾಂಗ್ರೆಸ್‌ನ ಗ್ಯಾರಂಟಿ ನಂಬದೆ ಮೋದಿ ಅವರ ಮೇಲೆ ವಿಶ್ವಾಸ ಇಟ್ಟಿರುವುದು ರುಜುವಾತಾಗಿದೆ.
ಈ ಹತಾಶೆಯಿಂದ ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಕಲುಷಿತಗೊಳಿಸುವ ಕೆಲಸಕ್ಕೆ ಕೈಹಾಕಿರುವುದು ನಾಡಿನ ದುರದೃಷ್ಟ ಮತ್ತು ಖಂಡನೀಯ ಎಂದರು.
2 comments
[…] ರಾಜ್ಯ […]
[…] ರಾಜ್ಯ […]