ಹೆಚ್.ಡಿ.ಕುಮಾರಸ್ವಾಮಿ ನಿಂದನೆಯೇ ಕಾಂಗ್ರೆಸ್ಸಿಗೆ ಅಂಟಿದ ಬೇನೆ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಲ್ಲಡ್ಕ ಪ್ರಭಾಕರ್ ಭಟ್ ಅವರ ಶಾಲೆಗೆ ಭೇಟಿ ನೀಡಿದ್ದ ಘಟನೆಯನ್ನೇ ವಿರೂಪವಾಗಿ ಚಿತ್ರಿಸಲು ಯತ್ನಿಸಿದ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ತಿರುಗೇಟು ಕೊಟ್ಟಿದೆ.
ಜಾಲತಾಣ ಎಕ್ಸ್ ನಲ್ಲಿ ಕಾಂಗ್ರೆಸ್ ಮಾಡಿದ್ದ ಟೀಕೆಗೆ ಪ್ರತ್ಯುತ್ತರ ನೀಡಿರುವ ಪಕ್ಷವು, ಆ ಪಕ್ಷವನ್ನು ಕಲುಷಿತ ಕಾಂಗ್ರೆಸ್ ಎಂದು ಕಿಡಿಕಾರಿದೆ.
ಕಲುಷಿತ ಮನಸ್ಸಿನ ಕಾಂಗ್ರೆಸ್ ಕಣ್ಣಿಗೆ ಸದಾ ಕಾಮಾಲೆಯೇ. ಹೆಚ್.ಡಿ.ಕುಮಾರಸ್ವಾಮಿ ಅವರ ನಿಂದನೆಯೇ ಅದಕ್ಕೆ ಅಂಟಿದ ಬೇನೆ. ದೇಶವನ್ನೇ ಒಡೆದ ಪಕ್ಷಕ್ಕೆ ಹಿಂದುತ್ವವೂ ರುಚಿಸುವುದಿಲ್ಲ, ನಮ್ಮ ಆದರ್ಶ ಪರಂಪರೆಯೂ ಆಗುವುದಿಲ್ಲಎಂದು ಟೀಕಿಸಿದೆ.
ಅಷ್ಟೇ ಏಕೆ, ಭಾರತವೂ ಸಹ್ಯವಲ್ಲ; ಅದರ , ವಿದೇಶಿ ಜೀನ್ಸ್ ಎಂದೂ ಭಾರತೀಯತೆಯನ್ನು ಒಪ್ಪುದೇ ಇಲ್ಲ. ಇದೇನು ಹೊಸತಲ್ಲ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಕಲ್ಲಡ್ಕ ಪ್ರಭಾಕರ ಭಟ್ಟರ ಶ್ರೀರಾಮ ವಿದ್ಯಾಕೇಂದ್ರಕ್ಕೆ ಕುಮಾರಸ್ವಾಮಿ ಅವರು ಮುಕ್ತ ಮನಸ್ಸಿನಿಂದ ಭೇಟಿ ನೀಡಿದ್ದರು, ಹೌದು. ಅಲ್ಲಿನ ಶೈಕ್ಷಣಿಕ ವಾತಾವರಣ, ಮಕ್ಕಳ ಶಿಸ್ತು, ದೇಶಪ್ರೇಮವನ್ನು ಕಣ್ಣಾರೆ ಕಂಡ ಅವರ ಮನಸ್ಸಿನಲ್ಲಿ ಪರಿವರ್ತನೆ ಆಗಿದ್ದರೆ, ಅದೇನು ಮಹಾ ಅಪರಾಧವೇ? ಎಂದು ಜೆಡಿಎಸ್ ಪ್ರಶ್ನಿಸಿದೆ.
ಹುಳುಕು ಹುಡುಕುವುದೇ ಚಟ
ಪರಿವರ್ತನೆಯೇ ಜಗದ ನಿಯಮ, ಪ್ರತಿಗಾಮಿತನವೇ ಮಾರಣಹೋಮ. ತುಷ್ಠೀಕರಣದ ಅಂಟುವ್ಯಾಧಿಯಿಂದ ಬಳಲುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮಾರಣಹೋಮದಲ್ಲಿಯೇ ನಂಬಿಕೆ ಎಂದು ಜೆಡಿಎಸ್ ಆಪಾದಿಸಿದೆ.
ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಜತೆ ರಾಜ್ಯದ ಅಭಿವೃದ್ಧಿಯ ಬಗ್ಗೆಯೇ ಕುಮಾರಸ್ವಾಮಿ ಅವರು ಚರ್ಚಿಸಿದ್ದಾರೆ. ಸಂಶಯ ಪಿಶಾಚಿ ಕಾಂಗ್ರೆಸ್ಸಿಗೆ ಹುಳುಕು ಹುಡುಕುವುದೇ ಚಟ.
ಜಾತಿ, ಧರ್ಮಗಳನ್ನು ಒಡೆದು ದೇಶಕ್ಕೆ ಶಾಪವಾಗಿ, ಬೆದರಿಕೆಯಾಗಿರುವ ಪ್ರತಿಗಾಮಿ ಪಕ್ಷಕ್ಕೆ ಶಾಂತಿ, ಸೌಹಾರ್ದತೆ ಎಂದರೇನೇ ಅಪಥ್ಯ ಎಂದು ಹೇಳಿದೆ ಜೆಡಿಎಸ್.