ಕಾಂಗ್ರೆಸ್ ವರಿಷ್ಠರ ಮೇಲೆ ಮತ್ತೆ ಒತ್ತಡ
ಬೆಂಗಳೂರು: ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ ಸಂಪುಟವನ್ನು ಪುನರ್ ರಚಿಸಿ ಹೊಸದಾಗಿ ಮೂವರು ಉಪಮುಖ್ಯಮಂತ್ರಿಗಳಿಗೆ ಅವಕಾಶ ಮಾಡಿಕೊಡುವಂತೆ ಕಾಂಗ್ರೆಸ್ ವರಿಷ್ಠರ ಮೇಲೆ ಮತ್ತೆ ಒತ್ತಡ ಹಾಕಲಾಗುತ್ತಿದೆ.
ಚುನಾವಣೆ ಸಮಯದಲ್ಲಿ ಮೌನವಾಗಿದ್ದ ಕೆಲವು ಮುಖಂಡರು ಮತ್ತೆ ಉಪಮಖ್ಯಮಂತ್ರಿ ನೇಮಕಾತಿಯನ್ನು ಮುನ್ನೆಲೆಗೆ ತಂದಿದ್ದಾರೆ.
ಸತೀಶ್ ಜಾರಕಿಹೊಳಿ ವರಿಷ್ಠರ ಮೇಲೆ ಒತ್ತಡ
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ನಿಲುವನ್ನು ಮುಂದಿಟ್ಟುಕೊಂಡು ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದು ಇದಕ್ಕೆ ಕಾಂಗ್ರೆಸ್‌ನ ಕೆಲವು ಶಾಸಕರು ಬೆನ್ನೆಲುಬಾಗಿ ನಿಂತಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪರಿಶಿಷ್ಟ ಜಾತಿ, ವರ್ಗ ಹಾಗೂ ವೀರಶೈವ ಸಮುದಾಯದ ತಲಾ ಒಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ಎಂದು ವರಿಷ್ಠರ ಮೇಲೆ ಸತೀಶ್ ಒತ್ತಡ ಹೇರಿದ್ದಾರೆ.
ಸಚಿವ ಸ್ಥಾನದಿಂದ ಬಡ್ತಿಗೆ ಮನವಿ
ತಮ್ಮ ಆಪ್ತರ ಜೊತೆಗೂಡಿ ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ಬಿಡಾರ ಹೂಡಿದ್ದ ಸತೀಶ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಕೆಲವು ಮುಖಂಡರನ್ನು ಭೇಟಿ ಮಾಡಿ ತಮಗೆ ಸಚಿವ ಸ್ಥಾನದಿಂದ ಬಡ್ತಿ ನೀಡುವಂತೆ ಮನವಿ ಮಾಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ನೀವು ನೀಡಿರುವ ಗುರಿ ಮುಟ್ಟಲು ಕರ್ನಾಟಕದಲ್ಲಿ ಜಾತಿ ಸಮೀಕರಣ ಅಗತ್ಯವಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳ ಭರವಸೆ ಜೊತೆಗೆ ಜಾತಿಗಳ ಸಮೀಕರಣದಿಂದ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದ್ದೇವೆ.
ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಬೇಕಾದರೆ ಈ ಮೂರು ವರ್ಗಗಳಿಗೆ ಸೇರಿದ ಹಿರಿಯ ಶಾಸಕರಲ್ಲಿ ತಲಾ ಒಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ.
ಕನಿಷ್ಠ 20 ಸ್ಥಾನ ಗೆಲ್ಲಲು ಸಾಧ್ಯ
ಇದರಿಂದ ನಮಗೆ ಮತ ಗಳಿಕೆ ಹೆಚ್ಚಿ 28 ರಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಸದಾ ಕತ್ತಿ ಮಸೆಯುತ್ತಿರುವ ಜಾರಕಿಹೊಳಿ ಕುಟುಂಬ ಇದೀಗ ಸಿದ್ದರಾಮಯ್ಯ ಸಂಪುಟದಲ್ಲಿ ಅವರ ಬಲವನ್ನು ಕುಗ್ಗಿಸಲು ಹೊರಟಿದೆ.
ಸರ್ಕಾರದಲ್ಲಿ ಶಿವಕುಮಾರ್ ಪ್ರಾಬಲ್ಯ ಸಾಧಿಸಿ ಮುಖ್ಯಮಂತ್ರಿ ಅವರ ಮೇಲೆಯೇ ಹಿಡಿತ ಸಾಧಿಸಲು ಹೊರಟಿರುವುದು ಜಾರಕಿಹೊಳಿ ಕುಟುಂಬಕ್ಕೆ ಸಹಿಸಲಾಗುತ್ತಿಲ್ಲ.
ಶಿವಕುಮಾರ್ ಅಧಿಕಾರ ಕುಗ್ಗಿಸುವ ಉದ್ದೇಶ
ಶಿವಕುಮಾರ್ ಅಧಿಕಾರವನ್ನು ಕುಗ್ಗಿಸುವ ಉದ್ದೇಶದಿಂದ ಹೆಚ್ಚುವರಿಯಾಗಿ ಮೂರು ಉಪಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಠಿಸಿ ಎಂದು ಜಾರಕಿಹೊಳಿ ರಾಜಕೀಯ ದಾಳ ಹಾಕಿದ್ದಾರೆ.
ಸತೀಶ್ ಹಿಂದೆ ಸರ್ಕಾರದಲ್ಲಿರುವ ಮತ್ತು ರಾಜ್ಯ ಕಾಂಗ್ರೆಸ್ ಪ್ರಭಾವಿಗಳು ಬೆನ್ನೆಲುಬಾಗಿ ನಿಂತಿರುವುದು ವರಿಷ್ಠರಿಗೆ ನುಂಗಲಾರದ ತುತ್ತಾಗಿದೆ.
ಸತೀಶ್ ದೆಹಲಿಗೆ ತೆರಳುವುದಕ್ಕೂ ಮುನ್ನ ಪರಿಶಿಷ್ಟ ಜಾತಿ ಹಾಗೂ ವರ್ಗದ ಪಕ್ಷದ ಶಾಸಕರ ಜೊತೆ ಮತ್ತು ತಮ್ಮ ಹೋರಾಟಕ್ಕೆ ತೆರೆಮರೆಯಲ್ಲಿ ಬೆಂಬಲವಾಗಿ ನಿಂತವರ ಜೊತೆಯಲ್ಲೂ ಸಭೆಗಳನ್ನು ನಡೆಸಿದ್ದರು ಎನ್ನಲಾಗಿದೆ.
ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಎಐಸಿಸಿ, ಸತೀಶ್ ದಾಳವನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.