ಜೆಎನ್.1 ಹೆಚ್ಚುತ್ತಿರುವ ಹಿನ್ನೆಲೆ ಈ ನಿರ್ಣಯ
ಬೆಂಗಳೂರು: ಕೋವಿಡ್ ಸೋಂಕಿಗೆ ಒಳಗಾದವರಿಗೆ ಸರ್ಕಾರ ಏಳು ದಿನ ಹೋಂ ಐಸೋಲೇಷನ್ ಕಡ್ಡಾಯ ಮಾಡಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ರೂಪಾಂತರ ತಳಿ ಜೆಎನ್.1 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಣಯ ಕೈಗೊಂಡಿದೆ.
ಸಚಿವ ಸಂಪುಟ ಉಪಸಮಿತಿ ಮಹತ್ವದ ತೀರ್ಮಾನ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಉಪಸಮಿತಿ ಸಭೆ ಈ ಮಹತ್ವದ ತೀರ್ಮಾನ ಕೈಗೊಂಡಿರುವುದಲ್ಲದೆ, ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ನಿರ್ಬಂಧ ಇರುವುದಿಲ್ಲ ಎಂದಿದೆ.
ಆದರೆ, ಗುಂಪು ಸೇರುವುದಕ್ಕೂ ಮುನ್ನ ಸಾರ್ವಜನಿಕರು ಹೆಚ್ಚು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಕೇಂದ್ರ ಸರ್ಕಾರ ರೂಪಾಂತರಿ ತಳಿ ಬಗ್ಗೆ ನೀಡಿರುವ ಮಾಹಿತಿ ಆಧರಿಸಿ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಆರೋಗ್ಯ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಕೆಲವು ಸಲಹೆ-ಸೂಚನೆಗಳನ್ನು ನೀಡಿದೆ.
ರೂಪಾಂತರ ತಳಿ ತೀರಾ ಪ್ರಾಣಾಪಾಯವಲ್ಲ
ರೂಪಾಂತರ ತಳಿ ತೀರಾ ಪ್ರಾಣಾಪಾಯವಲ್ಲ, ಇದನ್ನು ಔಷಧಗಳಿಂದ ಗುಣಪಡಿಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ, ಆದಾಗ್ಯೂ, ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದೆ.
ಕೆಮ್ಮು, ಜ್ವರ, ಶೀತ, ಗಂಟಲು ನೋವು ಬಂದರೆ ಮನೆಯಲ್ಲೇ ಉಳಿದುಕೊಳ್ಳಿ ಎಂದು ಸರ್ಕಾರ ಸಲಹೆ ಮಾಡಿದೆ. ಇಂತಹ ಸಮಸ್ಯೆಗಳೂ ಸೇರಿದಂತೆ ಕೋವಿಡ್ ಸೋಂಕು ತಗುಲಿದವರಿಗೆ ಖಾಸಗಿ ಸಂಸ್ಥೆಗಳು ಕಡ್ಡಾಯವಾಗಿ ರಜೆ ನೀಡಬೇಕು.
ಮಕ್ಕಳಲ್ಲಿ ಇಂತಹ ಯಾವುದೇ ಲಕ್ಷಣ ಕಂಡುಬಂದರೆ ಶಾಲೆಗಳಿಗೆ ಕಳುಹಿಸಬೇಡಿ ಎಂದು ಪೋಷಕರಿಗೆ ಸಲಹೆ ಮಾಡಿರುವ ಸರ್ಕಾರ ತಕ್ಷಣ ವೈದ್ಯರ ಸಲಹೆ ಪಡೆದು ಚಿಕಿತ್ಸೆ ನೀಡಿ, ಹೊರಗೆ ಓಡಾಡುವುದು ಅನಿವಾರ್ಯ ಎಂದಾದರೆ ಮಾಸ್ಕ್ ಕಡ್ಡಾಯವಾಗಿ ಧರಿಸಿ ಎಂದು ತಿಳಿಸಿದೆ.
ಕೋವಿಡ್ ವೈರಸ್ ರೂಪಾಂತರಗೊಳ್ಳುತ್ತಲೇ ಇರುತ್ತವೆ
ಸಭೆಯಲ್ಲಿ ಭಾಗವಹಿಸಿದ್ದ ತಜ್ಞರು, ಕೋವಿಡ್ ವೈರಸ್ ರೂಪಾಂತರಗೊಳ್ಳುತ್ತಲೇ ಇರುತ್ತದೆ, ಜನರು ಆತಂಕಗೊಳ್ಳುವುದು ಬೇಡ, ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಸರ್ಕಾರ ಸಲಹೆ ಮಾಡಿದೆ.
ಸಾಂಕ್ರಾಮಿಕ ಹಂತವನ್ನು ದಾಟಿದ್ದೇವೆ, ಸ್ಥಳೀಯ ಹಂತಕ್ಕೆ ತಲುಪಿದ್ದೇವೆ, ಈ ಸಮಯದಲ್ಲಿ ಮುಂಜಾಗ್ರತೆ ವಹಿಸುವ ಹಾಗೂ ಲಸಿಕೆ ಪಡೆಯುವ ಮೂಲಕ ಈ ಮಹಾಮಾರಿಯನ್ನು ಎದುರಿಸಬಹುದಾಗಿದೆ.
ಕಾಲಾನಂತರದಲ್ಲಿ ಶಕ್ತಿಹೀನವಾಗುತ್ತಾ ಹೋಗುತ್ತವೆ
ಜೆಎನ್.1 ನಂತರ ಮತ್ತಷ್ಟು ರೂಪಾಂತರಿಗಳು ಸೃಷ್ಠಿಯಾಗುವ ಸಾಧ್ಯತೆಯೂ ಇದೆ, ಇವುಗಳು ಕಾಲಾನಂತರದಲ್ಲಿ ಶಕ್ತಿಹೀನವಾಗುತ್ತಾ ಹೋಗುವುದರಿಂದ ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ ಎಂದಿದೆ.
ಈಗಿರುವ ಸೋಂಕಿಗೆ ಒಳಗಾದವರು ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು, ಗರ್ಭಿಣಿಯರು, 60 ವರ್ಷ ಮೇಲ್ಪಟ್ಟವರು, ದೀರ್ಘಕಾಲಿಕ ಖಾಯಿಲೆಗಳಿಂದ ಬಳಲುತ್ತಿರುವವರು ಗಾಳಿ-ಬೆಳಕು ಕಡಿಮೆ ಮತ್ತು ಜನ ದಟ್ಟಣೆ ಪ್ರದೇಶಗಳಿಗೆ ಭೇಟಿ ನೀಡುವುದನ್ನು ತಪ್ಪಿಸುವಂತೆ ಸಲಹೆ ಮಾಡಿದೆ.
1 comment
[…] ರಾಜ್ಯ […]