ರಾಜ್ಯದಲ್ಲಿ ಕೋವಿಡ್ ತಳಿ ಜೆಎನ್.1 ಸೋಂಕು ಹೆಚ್ಚಳ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ರೂಪಾಂತರಿ ಜೆಎನ್.1 ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜನವರಿ 2ರಿಂದ ಲಸಿಕೆ ಅಭಿಯಾನ ಆರಂಭಗೊಳ್ಳಲಿದೆ.
ದಿನದಿಂದ ದಿನಕ್ಕೆ ಸೋಂಕಿನ ಪ್ರಮಾಣ ಹೆಚ್ಚಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಲಸಿಕೆ ಅಭಿಯಾನಕ್ಕೆ ಮತ್ತೆ ಚಾಲನೆ ನೀಡಲಾಗುತ್ತಿದೆ.
ಕೇಂದ್ರ ಮಾರ್ಗದರ್ಶನದಲ್ಲಿ ಲಸಿಕೆ
ಕೋರ್ಬಿ ವ್ಯಾಕ್ಸ್ ಲಸಿಕೆಯನ್ನು ಕೇಂದ್ರ ಸರ್ಕಾರದ ಮಾರ್ಗದರ್ಶನದಲ್ಲಿ ನೀಡಲು ಸರ್ಕಾರ ಮುಂದಾಗಿದೆ.
ಕರ್ನಾಟಕದಲ್ಲಿ ಶೇಕಡ 27ರಷ್ಟು ಮಂದಿ ಮಾತ್ರ ಕೋವಿಡ್ ಲಸಿಕೆಯ ಎಲ್ಲಾ ಮೂರು ಡೋಸ್‌ಗಳನ್ನು ಪಡೆದಿದ್ದಾರೆ.
1.5 ಕೋಟಿಗೂ ಅಧಿಕ ಜನರಿಗೆ ಮುನ್ನೆಚ್ಚರಿಕಾ ಲಸಿಕೆ ಬಾಕಿ
ರಾಜ್ಯದಲ್ಲಿ ಇನ್ನೂ 1.5 ಕೋಟಿಗೂ ಅಧಿಕ ಜನರು ಮುನ್ನೆಚ್ಚರಿಕಾ ಲಸಿಕೆ ಪಡೆಯುವುದು ಬಾಕಿ ಇದೆ, ಇಂತಹವರು ಸೋಂಕು ತಡೆ ದೃಷ್ಟಿಯಿಂದ ಲಸಿಕೆ ಪಡೆಯುವುದು ಅನಿವಾರ್ಯ ಎಂದು ಸರ್ಕಾರ ತಿಳಿಸಿದೆ.
ಮೊದಲ ಹಂತದಲ್ಲಿ 30,000 ಕೋರ್ಬಿ ವ್ಯಾಕ್ಸ್ ಲಸಿಕೆ ಖರೀದಿಸಿದ್ದು, ಈ ಡೋಸ್ ಅನ್ನು ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ನೀಡಲಾಗುವುದು.
2019ರಲ್ಲಿ ವಿಶ್ವಾದ್ಯಂತ ಸೋಂಕು ಕಾಣಿಸಿಕೊಂಡು ತಲ್ಲಣ ಉಂಟು ಮಾಡಿತ್ತು, ಸೋಂಕಿಗೆ ಲಕ್ಷಾಂತರ ಜೀವಗಳು ಬಲಿಯಾಗಿದ್ದವು.
ಅನೇಕ ರಾಷ್ಟ್ರಗಳು ಸೋಂಕು ತಡೆಗೆ ಸಂಶೋಧನೆಗಳನ್ನು ನಡೆಸಿ ಲಸಿಕೆಗಳನ್ನು ಕಂಡು ಹಿಡಿದವು. ಇಂಗ್ಲೆಂಡ್ ಸಹಯೋಗದೊಂದಿಗೆ ಭಾರತ ಕೋವಿಶೀಲ್ಡ್ ಲಸಿಕೆ ಯಶಸ್ವಿಯಾಗಿ ತಯಾರಿಸಿ ಸೋಂಕು ಹತ್ತಿಕ್ಕುವಲ್ಲಿ ಮುನ್ನುಡಿ ಬರೆಯಿತು.
ಕೋವಿಶೀಲ್ಡ್ ಜೊತೆಗೆ ಕೋವ್ಯಾಕ್ಸಿನ್ ಲಸಿಕೆಯೂ ಯಶಸ್ವಿಯಾಗಿ ರಾಷ್ಟ್ರದಲ್ಲಿ ಮಹಾಮಾರಿಯನ್ನು ಹತ್ತಿಕ್ಕಲು ಸಾಧ್ಯವಾಯಿತು. ಕೋವಿಡ್-19 ನಂತರ ಇದರ ಅನೇಕ ರೂಪಾಂತರಿಗಳು ಹುಟ್ಟಿಕೊಂಡವು, ಎರಡನೇ ರೂಪಾಂತರಿ ನಂತರದ ತಳಿಗಳು ಹೆಚ್ಚು ಪ್ರಾಣಾಂತಿಕವಾಗಲಿಲ್ಲ.
ಆದರೆ, ಲಸಿಕೆ ಪಡೆಯದವರು ಮತ್ತು ತೀವ್ರತರ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ರೂಪಾಂತರಿ ತಳಿಗಳು ಪ್ರಾಣಾಂತಿಕವಾಗಿ ಸಾವು-ನೋವುಗಳು ಸಂಭವಿಸಿದವು.
ದಿನೇ ದಿನೇ ಸೋಂಕು ಹೆಚ್ಚಳ
ಇತ್ತೀಚಿನ ತಳಿ ಜೆಎನ್.1 ತೀವ್ರ ಅಪಾಯಕಾರಿ ಅಲ್ಲ ಎಂದು ವೈದ್ಯಕೀಯ ತಜ್ಞರು ಹೇಳುತ್ತಿರುವವರಾದರೂ, ಸೋಂಕು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೋರ್ಬಿ ವ್ಯಾಕ್ಸ್ ನೀಡಲು ಮುಂದಾಗಿದೆ.
ಆಸ್ಪತ್ರೆಗಳಲ್ಲಿ ವಿಶೇಷ ವಾರ್ಡ್‌ಗಳನ್ನು ಮೀಸಲಿರಿಸಿದ್ದು, ಕರ್ನಾಟಕದಲ್ಲಿ ಈಗಾಗಲೇ ಐದು ಮಂದಿ ಕೋವಿಡ್ ಹೊಸ ರೂಪಾಂತರಿಗೆ ಬಲಿಯಾಗಿದ್ದಾರೆ, ಸೋಂಕಿತರ ಸಂಖ್ಯೆ ಸಾವಿರ ದಾಟಿದೆ.
2 comments
[…] ರಾಜ್ಯ […]
[…] ರಾಜ್ಯ […]