ಕಾಂಗ್ರೆಸ್‌ನಲ್ಲಿ ಗರಿಗೆದರಿದ ಚಟುವಟಿಕೆ
ಬೆಂಗಳೂರು:ಎಐಸಿಸಿ ಅಧಿಕಾರ ಸೂತ್ರದಂತೆ ಸಿದ್ದರಾಮಯ್ಯ ಅವರು ಅಧಿಕಾರದಿಂದ ಕೆಳಗಿಯುತ್ತಿದ್ದಂತೆ ಆ ಜಾಗಕ್ಕೆ ಡಾ.ಜಿ. ಪರಮೇಶ್ವರ್ ತರಲು ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೇರಿದ ಸಚಿವರು ತೀರ್ಮಾನಿಸಿದ್ದಾರೆ.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆರ್ಭಟಕ್ಕೆ ಕಡಿವಾಣ ಹಾಕಲು ಮೂವರು ಉಪಮುಖ್ಯಮಂತ್ರಿಗಳನ್ನು ತಕ್ಷಣವೇ ನೇಮಿಸುವಂತೆ ವರಿಷ್ಠರಿಗೆ ಮನವಿ ಮಾಡಲು ಈ ವರ್ಗದ ಸಚಿವರು ನಿರ್ಧರಿಸಿದ್ದಾರೆ.
ಮುಖ್ಯಮಂತ್ರಿ ಅವರು ದೆಹಲಿ ಪ್ರವಾಸದಲ್ಲಿದ್ದಾಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಿನ್ನೆ ರಾತ್ರಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಸಚಿವರು ಸಭೆ ನಡೆಸಿ ಇದು ಸೇರಿದಂತೆ ಕೆಲವು ನಿರ್ಣಯಗಳನ್ನು ಕೈಗೊಂಡಿದ್ದಾರೆ.
ಜಾರಕಿಹೊಳಿ ಸಭೆಗೆ ಸಚಿವರು
ಜಾರಕಿಹೊಳಿ ಅವರು ಕರೆದಿದ್ದ ಸಭೆಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಮಹದೇವಪ್ಪ, ಸಹಕಾರಿ ಸಚಿವ ರಾಜಣ್ಣ ಸೇರಿದಂತೆ ಇನ್ನು ಕೆಲವು ಸಚಿವರು ಭಾಗವಹಿಸಿದ್ದರು. ತದನಂತರ ಶಾಸಕರು ಪಂಚತಾರಾ ಹೋಟೆಲ್‌ನಲ್ಲಿ ನಡೆದ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.
ಬೆಳಗಾವಿ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಬದಲಾವಣೆ, ಅಲ್ಲಿನ ಡಿಸಿಸಿ ಬ್ಯಾಂಕ್ ವಿಚಾರ ಸೇರಿದಂತೆ ರಾಜ್ಯದ ವಿವಿಧೆಡೆ ಶಿವಕುಮಾರ್ ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆಯೂ ಪ್ರಸ್ತಾಪಗೊಂಡಿತು.
ಶಿವಕುಮಾರ್ ಓಟಕ್ಕೆ ಕಡಿವಾಣ
ಶಿವಕುಮಾರ್ ಓಟಕ್ಕೆ ಕಡಿವಾಣ ಹಾಕಲು ಲೋಕಸಭಾ ಚುನಾವಣೆಗೂ ಮುನ್ನ ವೀರಶೈವ, ಪರಿಶಿಷ್ಟ ಜಾತಿ ಹಾಗೂ ವರ್ಗಕ್ಕೆ ಸೇರಿದ ಹಿರಿಯ ಸಚಿವರಿಗೆ ಬಡ್ತಿ ನೀಡಿ ಮೂವರು ಉಪಮುಖ್ಯಮಂತ್ರಿ ಸ್ಥಾನ ಕಲ್ಪಿಸಬೇಕು.
ಈ ಸಮುಯದಾಯಕ್ಕೆ ಸೇರಿದವರನ್ನು ಉಪಮುಖ್ಯಮಂತ್ರಿ ಮಾಡುವುದರಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗಳಿಸಲು ಸಾಧ್ಯವಾಗುತ್ತದೆ. ಇದನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಡಲು, ದೆಹಲಿಗೆ ಹೋಗಲು ಸಭೆ ತೀರ್ಮಾನಿಸಿದೆ.
ಪರಮೇಶ್ವರ್ ಬಿಂಬಿಸಲು ಕಸರತ್ತು
ಅಲ್ಲದೆ, ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಬಿಂಬಿಸಲು ಈಗಿನಿಂದಲೇ ಕಸರತ್ತು ಆರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಹಕಾರಿ ಸಚಿವ ರಾಜಣ್ಣ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು ಹೆಚ್ಚು ಸ್ಥಾನ ಗಳಿಸಬೇಕೆಂದರೆ ಮೂವರು ಉಪಮುಖ್ಯಮಂತ್ರಿಗಳ ಸ್ಥಾನ ಕಲ್ಪಿಸುವ ಅಗತ್ಯವಿದೆ.
ದೆಹಲಿಗೆ ತೆರಳಿ ಮನವರಿಕೆ ಮಾಡುತ್ತೇವೆ
ರಾಜ್ಯದ ಉಸ್ತುವಾರಿ ಹೊಣೆ ಹೊತ್ತ ರಣದೀಪ್ ಸಿಂಗ್ ಸುರ್ಜೇವಾಲ ವಿದೇಶ ಪ್ರವಾಸದಲ್ಲಿದ್ದು, ಅವರು ಹಿಂತಿರುಗುತ್ತಿದ್ದಂತೆ ನಾವು ದೆಹಲಿಗೆ ತೆರಳಿ ಈ ವಿಷಯ ಮನವರಿಕೆ ಮತ್ತು ಒತ್ತಾಯ ಮಾಡುತ್ತೇವೆ ಎಂದರು.
ನಿನ್ನೆ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸೇರಿದ ಸಚಿವರು ಮತ್ತು ಶಾಸಕರು ಊಟಕ್ಕೆ ಸೇರಿದ್ದೆವು, ಅಲ್ಲಿ ರಾಜಕೀಯವೂ ಚರ್ಚೆ ಆಯಿತು.
ಕೆಲವು ಹೇಳುವಂತಹ ವಿಚಾರವೂ ಇವೆ, ಕೆಲವು ಹೇಳಲಾಗದ್ದು ಇವೆ, ಸೂಕ್ತ ಕಾಲದಲ್ಲಿ ಹೇಳಲಾಗದ ರಾಜಕಾರಣ ವಿಚಾರ ತಿಳಿಸುವುದಾಗಿ ಮಾರ್ಮಿಕವಾಗಿ ನುಡಿದರು.
ಉಪಮುಖ್ಯಮಂತ್ರಿ ಆಯ್ಕೆಗೆ ವರಿಷ್ಠರನ್ನು ಭೇಟಿ ಮಾಡಿ ನಮ್ಮ ಅಭಿಪ್ರಾಯ ಹೇಳುವ ತೀರ್ಮಾನ ಕೈಗೊಂಡಿದ್ದೇವೆ.
ಡಿಸಿಎಂಗಳ ಸೃಷ್ಟಿ ಕಾಂಗ್ರೆಸ್‌ಗೆ ಲಾಭ
ಡಿಸಿಎಂಗಳ ಸೃಷ್ಟಿಯಿಂದ ಕಾಂಗ್ರೆಸ್‌ಗೆ ಲಾಭ ಆಗುತ್ತದೆ, ಎಸ್‌ಸಿ ಮತ್ತು ಎಸ್‌ಟಿ ಸಮಯದಾಯವನ್ನು ನಮ್ಮ ಬಳಿಯೇ ಉಳಿಸಿಕೊಳ್ಳಲು ಈ ಸೂತ್ರ ಅನಿವಾರ್ಯ.
ಒಂದೇ ಡಿಸಿಎಂ ಹುದ್ದೆ ಇರಬೇಕು ಎಂಬುದು ಶಿವಕುಮಾರ್ ಅಭಿಪ್ರಾಯ ಇರಬಹುದು, ಆದರೆ, ಎಲ್ಲರ ಅಭಿಪ್ರಾಯ ಪಡೆದುಕೊಂಡು ಮಾಡಬೇಕಾಗುತ್ತದೆ.
ಹೆಚ್ಚು ಸ್ಥಾನ ಗೆಲ್ಲಬೇಕು ಎನ್ನುವ ಕಾರಣಕ್ಕೆ ಲೋಕಸಭಾ ಚುನಾವಣೆಗೆ ಸಚಿವರನ್ನು ಕಣಕ್ಕಿಳಿಸುವ ನಿರ್ಧಾರಕ್ಕೆ ವರಿಷ್ಠರು ಬಂದರೆ ಅದಕ್ಕೆ ಎಲ್ಲರೂ ತಲೆಬಾಗಬೇಕಾಗುತ್ತದೆ ಎಂದರು.