ಚುನಾವಣೆಗಾಗಿ ಒಂದುಗೂಡಿದ ಬದ್ಧ ವೈರಿಗಳು
ಬೆಂಗಳೂರು:ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ವೈರಿಗಳಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಹಾಗೂ ಗಣಿ ಧಣಿ ಜನಾರ್ದನ ರೆಡ್ಡಿ ಕೈಜೋಡಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯ ಎದ್ದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿ ಹೈದರಾಬಾದ್ ಕರ್ನಾಟಕದಲ್ಲಿ 50 ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಕಣಕ್ಕಿಳಿದು ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಲು ಜನಾರ್ದನ ರೆಡ್ಡಿ ಅವಕಾಶ ಮಾಡಿಕೊಟ್ಟರು.
ಗಂಗಾವತಿ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದರೆ ಪಕ್ಷದ ಉಳಿದೆಲ್ಲಾ ಅಭ್ಯರ್ಥಿಗಳು ಪರಾಭವಗೊಂಡು ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣರಾದರು.
ಕುಮಾರಸ್ವಾಮಿ ಮಧ್ಯೆ ಪ್ರವೇಶ
ಲೋಕಸಭಾ ಚುನಾವಣೆಯಲ್ಲೂ ಆರು ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ರೆಡ್ಡಿ ಚಿಂತನೆ ನಡೆಸಿದ ಬೆನ್ನಲ್ಲೇ ದೆಹಲಿ ಬಿಜೆಪಿ ವರಿಷ್ಠರು ಎಚ್ಚೆತ್ತು, ಕುಮಾರಸ್ವಾಮಿ ಮಧ್ಯೆ ಪ್ರವೇಶಿಸುವಂತೆ ಸಲಹೆ ಮಾಡಿದರು.
ದೆಹಲಿಯ ಯಾವ ಬಿಜೆಪಿ ನಾಯಕರು ಕುಮಾರಸ್ವಾಮಿ ಅವರಿಗೆ ಸಮಸ್ಯೆಗಳನ್ನು ಪರಿಹರಿಸಲು ಸೂಚಿಸಿದರೋ ತಿಳಿಯದು, ಆದರೆ, ಮಿತ್ರ ಪಕ್ಷದ ಮುಖಂಡರ ಸಲಹೆಯಂತೆ, ಕಮಲದಿಂದ ದೂರ ಉಳಿದು ಬಂಡಾಯ ಏಳಲು ಮುಂದಾಗಿದ್ದವರ ಜೊತೆ ಮಾತುಕತೆ ಮೂಲಕ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ.
ಸುದೀರ್ಘ ಚರ್ಚೆ
ಕುಮಾರಸ್ವಾಮಿ ಅವರ ಚಹಾ ಆಹ್ವಾನ ಸ್ವೀಕರಿಸಿ ಕಳೆದ ಮೂರು ದಿನಗಳ ಹಿಂದೆ ಬಿಡದಿ ತೋಟಕ್ಕೆ ಆಗಮಿಸಿ, ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸುದೀರ್ಘವಾಗಿ ಮಾತನಾಡಿದ್ದಾರೆ.
ಲೋಕಸಭಾ ಚುನಾವಣೆಗೆ ನೀವು ಕಣಕ್ಕಿಳಿಯುವುದರಿಂದ ಬಿಜೆಪಿ ಮತಗಳು ವಿಭಜನೆಯಾಗಿ ಕಾಂಗ್ರೆಸ್‌ಗೆ ಲಾಭವಾಗಲಿದೆ, ಇದನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ಎಂದು ಕುಮಾರಸ್ವಾಮಿ ಸಲಹೆ ಮಾಡಿದರು.
ನಿಮ್ಮ ಸಮಸ್ಯೆಗಳು ಬಗೆಹರಿಯಲಿವೆ, ನಿಮಗೆ ಹಣಕಾಸಿನ ತೊಂದರೆಯಿಲ್ಲ, ಐದಾರು ಕ್ಷೇತ್ರಗಳಲ್ಲಿ ಕಣಕ್ಕಿಳಿಯುವುದರಿಂದ ಬಿಜೆಪಿ ಅಭ್ಯರ್ಥಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ, ನಿಮ್ಮ ನಿಲುವಿನಿಂದ ಹಿಂದೆ ಸರಿಯಿರಿ.
ನಾನು ನಿಮ್ಮ ಜೊತೆ ಇರುತ್ತೇನೆ, ಬಿಜೆಪಿ ಸೇರಿದಂತೆ ಇತರ ವಿಷಯಗಳಲ್ಲಿ ನಿಮಗಾಗಿರುವ ನೋವುಗಳನ್ನು ಬಗೆಹರಿಸಲು ದೊಡ್ಡವರ ಬಳಿ ಮಾತನಾಡುತ್ತೇನೆ ಎಂದು ರೆಡ್ಡಿ ಅವರಿಗೆ ಕುಮಾರಸ್ವಾಮಿ ತಿಳಿ ಹೇಳಿದ್ದಾರೆ.
ಸಂಧಾನ ಯಶಸ್ವೀ
ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಉಭಯ ನಾಯಕರು ಚರ್ಚೆ ನಡೆಸಿದ್ದು ರೆಡ್ಡಿ ಚುನಾವಣಾ ವೇಳೆಗೆ ಹಿಂದೆ ಸರಿಯುವ ಲಕ್ಷಣಗಳು ಗೋಚರಿಸುತ್ತಿವೆ.
ಈ ಬೆಳವಣಿಗೆ ನಂತರ, ಬಳ್ಳಾರಿ, ಕೊಪ್ಪಳ ಮತ್ತು ಬೀದರ್ ಜಿಲ್ಲೆಯ ಕೆಲವು ಬಿಜೆಪಿ ಮುಖಂಡರು ರೆಡ್ಡಿ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.
ಯಡಿಯೂರಪ್ಪ ಮತ್ತು ಅವರ ಪುತ್ರನ ವಿರುದ್ಧ ಬಂಡಾಯ ಎದ್ದಿದ್ದ ಸೋಮಣ್ಣ ಅವರೊಂದಿಗೂ ದೇವೇಗೌಡ ಅವರ ಜೊತೆಗೂಡಿ ಮಾತನಾಡಿ, ಸಮಸ್ಯೆ ಪರಿಹರಿಸಿದ್ದಾರೆ.
ತದನಂತರ ಬಿಜೆಪಿ ಹಿರಿಯ ನಾಯಕ ಸಿ.ಟಿ.ರವಿ ಸೇರಿದಂತೆ ಕೆಲವು ಮುಖಂಡರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಆಂತರಿಕ ಸಮಸ್ಯೆಗಳನ್ನು ಬಗೆ ಹರಿಸಿಕೊಂಡಿದ್ದಾರೆ ಎನ್ನಲಾಗಿದೆ.
