2 ಕೋಟಿ ರೂ. ಮೌಲ್ಯದ ಸರಕು ವಶ
ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸೋಪ್ಸ್ ಮತ್ತು ಮಾರ್ಜಕ ಸಂಸ್ಥೆ- ಕೆಎಸ್‌ಡಿಎಲ್‌ನ ಮೈಸೂರು ಸ್ಯಾಂಡಲ್ ಸೋಪ್ ಹೆಸರಿನಲ್ಲಿ ನಕಲಿ ಸೋಪ್‌ಗಳನ್ನು ತಯಾರಿಸಿ, ಮಾರಾಟ ಮಾಡುತ್ತಿದ್ದ ಜಾಲವನ್ನು ಹೈದರಾಬಾದ್‌ನಲ್ಲಿ ಪತ್ತೆ ಹಚ್ಚಿ, 2 ಕೋಟಿ ರೂ. ಮೌಲ್ಯದ ಸರಕನ್ನು ವಶಪಡಿಸಿಕೊಳ್ಳಲಾಗಿದೆ.
ನಕಲಿ ಉತ್ಪನ್ನಗಳ ಪ್ಯಾಕಿಂಗ್‌ಗೆ ಬಳಸುತ್ತಿದ್ದ ಕಾರ್ಟನ್ ಬಾಕ್ಸ್‌ಗಳನ್ನು ವಶಕ್ಕೆ ಪಡೆದಿದ್ದು, ನಕಲಿ ಸೋಪ್ ಉತ್ಪಾದಿಸಿದ ಆರೋಪದ ಮೇಲೆ ಹೈದರಾಬಾದ್‌ನ ರಾಕೇಶ್ ಜೈನ್ ಮತ್ತು ಮಹಾವೀರ್ ಜೈನ್ ಎಂಬುವವರನ್ನು ಬಂಧಿಸಲಾಗಿದೆ.
ಹೈದರಾಬಾದ್‌ನ ಮಾಲಕಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ.
ಎಂ.ಬಿ ಪಾಟೀಲ್‌ಗೆ ಅನಾಮಧೇಯ ಕರೆ
ಮೈಸೂರ್ ಸ್ಯಾಂಡಲ್ ಸಾಬೂನು ಹೆಸರಿನಲ್ಲಿ ನಕಲಿ ಉತ್ಪನ್ನಗಳು ಹೈದರಾಬಾದ್ ಮಾರುಕಟ್ಟೆಗೆ ಪೂರೈಕೆಯಾಗುತ್ತಿರುವ ಕುರಿತು ಕೆಎಸ್‌ಡಿಎಲ್ ಅಧ್ಯಕ್ಷರೂ ಆಗಿರುವ ಸಚಿವ ಎಂ.ಬಿ ಪಾಟೀಲ್ ಅವರಿಗೆ ಅನಾಮಧೇಯ ಕರೆ ಬಂದ ಹಿನ್ನೆಲೆಯಲ್ಲಿ ಕಾರ್ಖಾನೆ ವ್ಯವಸ್ಥಾಪಕ-ನಿರ್ದೇಶಕ ಡಾ.ಪ್ರಶಾಂತ್ ಅವರಿಗೆ ನಿಗಾ ವಹಿಸಲು ಸೂಚಿಸಲಾಗಿತ್ತು.
ಸಂಸ್ಥೆಯ ಸಿಕಂದರಾಬಾದ್‌ನಲ್ಲಿನ ಅಧಿಕೃತ ಮಾರಾಟ ಕಚೇರಿ ಸಿಬ್ಬಂದಿ ಸುಳಿವಿನ ಜಾಡು ಹಿಡಿದು, ಹೈದರಾಬಾದ್‌ನ ಕೆಲವು ಪ್ರದೇಶಗಳಲ್ಲಿ ನಕಲಿ ಸಾಬೂನು ಮಾರಾಟವಾಗುತ್ತಿರುವುದನ್ನು ಪತ್ತೆ ಹಚ್ಚಿದ್ದರು.
ನಕಲಿ ಮಾಲು ಪೂರೈಕೆದಾರರ ಪತ್ತೆಗೆ ಕೆಎಸ್‌ಡಿಎಲ್ ಸಿಬ್ಬಂದಿ ಸ್ವತಃ ಒಂದು ಲಕ್ಷ ರೂ. ಮೌಲ್ಯದ ಉತ್ಪನ್ನ ಖರೀದಿಸಿ, ಅದರ ಮೂಲ ಪತ್ತೆಗೆ ಕಾಣರಾದರು.
ಭಾರೀ ಸರಕು ಖರೀದಿಸುವ ನಾಟಕ
ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಮೈಸೂರು ಸ್ಯಾಂಡಲ್ ಸೋಪ್‌ಗೆ ಹೆಚ್ಚಿನ ಬೇಡಿಕೆ ಇದ್ದು 25 ಲಕ್ಷ ರೂ. ಮೌಲ್ಯದ ಸೋಪ್ ಖರೀದಿಗೆ ಆರ್ಡರ್ ಕೊಟ್ಟಿದ್ದಲ್ಲದೆ, ಸರಕನ್ನು ಸ್ವತಃ ತಾವೇ ವಾಹನದಲ್ಲಿ ತೆಗೆದುಕೊಂಡು ಹೋಗುವ ನೆಪದಲ್ಲಿ ಉತ್ಪಾದನೆ ಮಾಡುತ್ತಿದ್ದ ಸ್ಥಳಕ್ಕೆ ತೆರಳಿ, ಕಾರ್ಯಾಚರಣೆ ನಡೆಸಿದಾಗ ನಕಲಿ ಉತ್ಪಾದನಾ ಘಟಕ ಪತ್ತೆಯಾಯಿತು ಎಂದು ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ತಪ್ಪಿತಸ್ಥರಿಗೆ ಕಾನೂನು ರೀತ್ಯ ಶಿಕ್ಷೆಯಾಗುವಂತೆ ಕ್ರಮ ವಹಿಸಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲರು ತಿಳಿಸಿದ್ದಾರೆ.