ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶ ಸೃಷ್ಟಿ
ದಾವೋಸ್: ಸ್ವಿಟ್ಜರ್ಲೆಂಡಿನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಸಮಾವೇಶದಲ್ಲಿ ಕರ್ನಾಟಕ ಸರ್ಕಾರ ವಿವಿಧ ಕಂಪನಿಗಳೊಂದಿಗೆ 22 ಸಾವಿರ ಕೋಟಿ ರೂ. ಹೂಡಿಕೆ ಪ್ರಸ್ತಾವನೆಗಳಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಚಿವರು, ವೆಬ್‌ವರ್ಕ್ಸ್ ಕಂಪನಿ ಬೆಂಗಳೂರಿನಲ್ಲಿ ಸ್ಥಾಪಿಸಲಿರುವ 100 ಮೆಗಾವ್ಯಾಟ್ ಸಾಮರ್ಥ್ಯದ 20 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯ ಡೇಟಾ ಸೆಂಟರ್ ಪಾರ್ಕ್ ಯೋಜನೆ ಸೇರಿದೆ ಎಂದಿದ್ದಾರೆ.
ವಿವಿಧ ಕಂಪನಿಗಳೊಂದಿಗೆ ಹೂಡಿಕೆಯ ತಿಳಿವಳಿಕೆ ಪತ್ರಗಳಿಗೆ ಸಹಿ
ಇದಲ್ಲದೆ ಮೈಕ್ರೋಸಾಫ್ಟ್, ಹಿಟಾಚಿ, ಲುಲು ಗ್ರೂಪ್, ಹ್ಯೂಲೆಟ್ ಪೆಕಾರ್ಡ್ (ಎಚ್.ಪಿ), ಹನಿವೆಲ್, ಐನಾಕ್ಸ್, ವೋಲ್ವೋ, ನೆಸ್ಲೆ, ಕಾಯಿನ್ ಬೇಸ್, ಟಕೇಡಾ ಫಾರ್ಮಾ, ಬಿಎಲ್ ಆಗ್ರೋ ಸೇರಿದಂತೆ ವಿವಿಧ ಕಂಪನಿಗಳೊಂದಿಗೆ ಹೂಡಿಕೆಯ ತಿಳಿವಳಿಕೆ ಪತ್ರಗಳಿಗೆ ಸಹಿ ಹಾಕಲಾಗಿದೆ.
ಮೈಕ್ರೋಸಾಫ್ಟ್ ಕಂಪನಿ ಕೌಶಲ್ಯಾಭಿವೃದ್ಧಿ ಮತ್ತು ಸುಗಮ ಆಡಳಿತ ಉಪಕ್ರಮಗಳ ತರಬೇತಿ ಕೊಡಲಿದೆ, ಹಿಟಾಚಿ ಕಂಪನಿ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸೇವೆ, ಶಿಕ್ಷಣ ಮತ್ತು ಇ-ಗವರ್ನೆನ್ಸ್ ಕ್ಷೇತ್ರಗಳಲ್ಲಿ ಬಂಡವಾಳ ತೊಡಗಿಸಲಿದ್ದು, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ, ಲುಲು ಸಮೂಹ ಸಂಸ್ಥೆ ಹಣ್ಣು ಮತ್ತು ತರಕಾರಿ ಸಂಸ್ಕರಣೆ ಕ್ಷೇತ್ರದಲ್ಲಿ ಹೂಡಿಕೆಗೆ ಉತ್ಸುಕವಾಗಿದೆ.
ಉತ್ತರ ಕರ್ನಾಟಕದ ಹಲವು ಭಾಗಗಳು ಮುಂಚೂಣಿಗೆ
ಈ ಹೂಡಿಕೆಗಳಿಂದ ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ ಸೇರಿದಂತೆ ಹಲವು ಭಾಗಗಳು ಮುಂಚೂಣಿಗೆ ಬರಲಿದ್ದು, ಯೋಜನೆಗಳಿಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದಿದ್ದಾರೆ.
ಮೈಕ್ರೋಸಾಫ್ಟ್ ಕಂಪನಿಯು ಡಿಜಿಟಲ್ ಉತ್ಪಾದಕತೆ, ಉದ್ಯಮಶೀಲತೆ ಮತ್ತು ಸಂವಹನಕ್ಕೆ ಸಂಬಂಧಿಸಿದಂತೆ ‘ಮೈಕ್ರೋಸಾಫ್ಟ್ ರೈಸ್’ ಡಿಜಿಟಲ್ ಸ್ಕಿಲ್ಲಿಂಗ್ ಸೌಲಭ್ಯ ಮೂಲಕ 70 ಗಂಟೆಗಳ ವರ್ಚುಯಲ್ ತರಬೇತಿ ನೀಡಲಿದೆ. ಅಲ್ಲದೆ, ಅಭ್ಯರ್ಥಿಗಳಿಗೆ ಮೈಕ್ರೋಸಾಫ್ಟ್ ಟ್ರೈನಿಂಗ್ ಪ್ಲಾಟ್ ಫಾರಂ ಮೂಲಕ 150 ಗಂಟೆಗಳ ಹೆಚ್ಚುವರಿ ಕೌಶಲ್ಯಾಭಿವೃದ್ಧಿ ಪಠ್ಯ ಸಾಮಗ್ರಿ ಲಭಿಸಲಿದ್ದು, ರಾಜ್ಯದ ಯುವಜನರಿಗೆ ಕ್ಲೌಡ್, ಎಐ, ಸೈಬರ್ ಸೆಕ್ಯುರಿಟಿ ಕ್ಷೇತ್ರಗಳಲ್ಲಿ ಅವಕಾಶಗಳು ಸಿಗಲಿವೆ.
ಹನಿವೆಲ್ ಕಂಪನಿಯು ಐಒಟಿ (ಇಂಟರ್ನೆಟ್ ಆಫ್ ಥಿಂಗ್ಸ್) ಮೂಲಕ ಸಂಚಾರ ನಿರ್ವಹಣೆ, ತ್ಯಾಜ್ಯ ನಿರ್ವಹಣೆ ಮುಂತಾದವುಗಳನ್ನು ನಿಭಾಯಿಸಲಿದೆ. ಲುಲು ಸಮೂಹ 300 ಕೋಟಿ ರೂ. ಹೂಡಿಕೆಯೊಂದಿಗೆ ವಿಜಯಪುರ ಜಿಲ್ಲೆಯಲ್ಲಿ ಆಹಾರ ಸಂಸ್ಕರಣೆ, ಟಕೇಡಾ ಫಾರ್ಮಾ ಬೆಂಗಳೂರಿನಲ್ಲಿ ಗ್ಲೋಬಲ್ ಕೆಪಾಸಿಟಿ ಸೆಂಟರ್ ತೆರೆಯಲು ಮುಂದೆ ಬಂದಿದೆ ಎಂದು ಪಾಟೀಲ್ ತಿಳಿಸಿದ್ದಾರೆ.
3 comments
[…] ಉದ್ಯೋಗ […]
[…] ಉದ್ಯೋಗ […]
[…] ಉದ್ಯೋಗ […]