ಫೆಬ್ರವರಿ 8ರ ಇಡೀ ದಿನ ಸಾರ್ವಜನಿಕರ ಅಹವಾಲು ಆಲಿಕೆ
ಬೆಂಗಳೂರು:ಜನರ ಸಮಸ್ಯೆ ಆಲಿಸಿ ಪರಿಹಾರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ಜನತಾದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಇದುವರೆಗೂ ಅಧಿಕಾರದಲ್ಲಿದ್ದವರು, ತಮ್ಮ ಗೃಹ ಕಚೇರಿ ಕೃಷ್ಣಾ ಇಲ್ಲವೇ ಜಿಲ್ಲಾಧಿಕಾರಿಗಳ ಕಚೇರಿ ಅಥವಾ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಜನತಾದರ್ಶನ ನಡೆಸುತ್ತಿದ್ದರು.
ಜನರ ಮನೆ ಬಾಗಿಲಿಗೆ ಸರ್ಕಾರ
ಜನರ ಮನೆ ಬಾಗಿಲಿಗೆ ಸರ್ಕಾರ ಎಂಬುದನ್ನು ಸಾಭೀತುಪಡಿಸುವ ಉದ್ದೇಶದಿಂದ ಈ ಬಾರಿ ಮುಖ್ಯಮಂತ್ರಿ ಅವರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಜನತಾದರ್ಶನ ನಡೆಸುತ್ತಿದ್ದಾರೆ.
ಫೆಬ್ರವರಿ 8ರಂದು ಇಡೀ ದಿನ ಜನತಾದರ್ಶನ ನಡೆಯಲಿದ್ದು, ಅಂದು ಸರ್ಕಾರದ ಮುಖ್ಯಕಾಯದರ್ಶಿ ಸೇರಿದಂತೆ ಇಲಾಖೆಯ ಮುಖ್ಯಸ್ಥರು ಹಾಗೂ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿರಬೇಕು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಅವರು, ಹಿಂದಿನ ಜನತಾದರ್ಶನ ಕಾರ್ಯಕ್ರಮಗಳಲ್ಲಿ ಆಗಿರುವ ಪ್ರಗತಿ ಸೇರಿದಂತೆ ಉಳಿದ ವಿಚಾರಗಳ ಬಗ್ಗೆ ಮಾಹಿತಿ ಪಡೆಯಲು ಜನವರಿ 31ರಂದು ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತ ಇಲಾಖಾ ಪ್ರಧಾನ ಕಾರ್ಯದರ್ಶಿಗಳ ಸಭೆ ಕರೆದಿದ್ದಾರೆ.
ಅಧಿಕಾರಿಗಳಿಗೆ ಐದು ಪ್ರಶ್ನಾವಳಿ
ಸಭೆಗೆ ಬರುವುದಕ್ಕೂ ಮುನ್ನ ತಮ್ಮ ಕಚೇರಿಯಿಂದ ಕಳುಹಿಸಿರುವ ಐದು ಪ್ರಶ್ನಾವಳಿಗಳಿಗೆ ಸಂಬಂಧಿಸಿದಂತೆ ಮಾಹಿತಿ ಮತ್ತು ಕಡತಗಳನ್ನು ಕಡ್ಡಾಯವಾಗಿ ತರುವಂತೆ ಮುಖ್ಯಮಂತ್ರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ನಂತರ ನೀವು ಎಷ್ಟು ಬಾರಿ ಆ ಜಿಲ್ಲೆಗೆ ತೆರಳಿದ್ದೀರಿ, ಜಿಲ್ಲೆಯಲ್ಲಿನ ಪ್ರಗತಿ ಪರಿಶೀಲನೆಗೆ ಎಷ್ಟು ಕಚೇರಿ ಮತ್ತು ಸಂಸ್ಥೆಗಳಿಗೆ ಭೇಟಿ ನೀಡಿದ್ದೀರಿ, ಜಿಲ್ಲೆಯಲ್ಲಿ ಯಾವ ಐದು ಇಲಾಖೆಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆ, ಯಾವ ಐದು ಇಲಾಖೆಗಳು ಕಳಪೆ ಕೆಲಸ ಮಾಡಿವೆ ಎಂಬ ಮಾಹಿತಿ ನೀಡಿ.
ಸರ್ಕಾರದ ಐದು ಪ್ರತಿಷ್ಠಿತ ಗ್ಯಾರಂಟಿ ಯೋಜನೆಗಳು ಯಾವ ಮಟ್ಟಕ್ಕೆ ಜನರನ್ನು ತಲುಪಿವೆ, ಇದರಿಂದ ಬಡವರಿಗೆ ಯಾವ ರೀತಿ ಸಹಕಾರಿಯಾಗಿದೆ, ಎಲ್ಲಿ ಇನ್ನೂ ಯೋಜನೆಗಳು ತಲುಪಿಲ್ಲ, ಏತಕ್ಕೆ ಎಂಬ ಮಾಹಿತಿ ನೀಡುವಂತೆ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳಿಗೆ ಪಂಚ ಪ್ರಶ್ನೆಗಳನ್ನು ಇಟ್ಟಿದ್ದಾರೆ.
ಇದೆಲ್ಲದಕ್ಕೂ ಮಿಗಿಲಾಗಿ ಜನರ ಸಮಸ್ಯೆಯನ್ನು ಆಲಿಸಿ, ಅದಕ್ಕೆ ಪರಿಹಾರ ಕಂಡುಕೊಳ್ಳಲು ನಿಮ್ಮ ಬಳಿಗೆ ಬಂದ ಪತ್ರಗಳಿಗೆ ಯಾವ ರೀತಿ ಸ್ಪಂದನೆ ದೊರೆತಿದೆ ಎಂಬ ಮಾಹಿತಿ ಇಟ್ಟುಕೊಂಡು ಸಭೆಗೆ ಬರುವಂತೆ ಮುಖ್ಯಮಂತ್ರಿ ಅವರು ಆದೇಶಿಸಿದ್ದಾರೆ.
ಎರಡನೇ ಬೃಹತ್ ಜನತಾದರ್ಶನ
ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ನಂತರ ಎರಡನೇ ಬಾರಿಗೆ ಬೃಹತ್ ಜನತಾದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಂದು ಸಾರ್ವಜನಿಕರು ನೀಡುವ ಅಹವಾಲುಗಳಿಗೆ ಸ್ಥಳದಲ್ಲಿಯೇ ಸ್ಪಂದಿಸಲು ಹತ್ತು ಹಲವು ಕಾರ್ಯಕ್ರಮಗಳನ್ನೂ ರೂಪಿಸಿದ್ದಾರೆ. ವಿಧಾನಸೌಧದ ಮೆಟ್ಟಿಲುಗಳ ಮುಂಭಾಗದ ಇಡೀ ಆವರಣ ಸಾರ್ವಜನಿಕರ ಪ್ರವೇಶಕ್ಕೆ ಅಂದು ಮುಕ್ತವಾಗಿರಲಿದೆ.
ದೇವೇಗೌಡರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಜನತಾದರ್ಶನವನ್ನು ಜಿಲ್ಲಾ ಮಟ್ಟಗಳಲ್ಲಿ ನಡೆಸಿದರು, ಅದು ಭಾರೀ ಯಶಸ್ಸು ಕಂಡಿತ್ತು, ಶೇಕಡ 90ರಷ್ಟು ಪರಿಹಾರವನ್ನೂ ಕಂಡುಕೊಳ್ಳಲಾಗಿತ್ತು. ತದನಂತರ ಬಂದ ಮುಖ್ಯಮಂತ್ರಿಗಳು ಗೃಹ ಕಚೇರಿ ಕೃಷ್ಣಾಕ್ಕೆ ಸೀಮಿತವಾಗಿ ಜನತಾದರ್ಶನ ನಡೆಸಿದರು.
22 ಸಾವಿರ ಕೋಟಿ ರೂ. ಪ್ರಸ್ತಾವನೆಗೆ ಅಂಕಿತ
ಒಂದು ಹೆಜ್ಜೆ ಮುಂದೆ ಹೋದ ಕುಮಾರಸ್ವಾಮಿ ಗ್ರಾಮೀಣ ಭಾಗದಲ್ಲಿ ತಂಗಿ ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದರು, ಅಲ್ಲದೆ, ರಾಜಧಾನಿಯಲ್ಲಿ ತಡರಾತ್ರಿವರೆಗೂ ಜನತಾದರ್ಶನ ನಡೆಸಿದ್ದುಂಟು.
ಹಾಲಿ ಮುಖ್ಯಮಂತ್ರಿ ಅವರು ತಮ್ಮ ಮೊದಲ ಜನತಾದರ್ಶನಕ್ಕೆ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕರು ಅರ್ಜಿ ಹಿಡಿದುಬಂದ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚು ಸ್ಥಳಾವಕಾಶ ಇರುವ ವಿಧಾನಸೌಧದ ಮೆಟ್ಟಿಲ ಮೇಲೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
2 comments
[…] ರಾಜಕೀಯ […]
[…] Special Story […]