ಸಂವಿಧಾನ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು
ಬೆಂಗಳೂರು: ಪರಿಶಿಷ್ಟರಿಗೆ ಒಳಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಹಾಗೂ ಸಂಸತ್ತಿಗೆ ಶಿಫಾರಸ್ಸು ಮಾಡುವ ಮಹತ್ವ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ಸಭೆ ಇಂದಿಲ್ಲಿ ಕೈಗೊಂಡಿದೆ.
ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ101 ಜಾತಿಗಳಿಗೆ ಸಂವಿಧಾನ ಅನುಚ್ಛೇಧ 15 ಮತ್ತು 16 ರಂತೆ ಮೀಸಲಾತಿ ಮತ್ತು ಇತರ ಸೌಲಭ್ಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವಂತೆ ಇಂದಿಲ್ಲಿ ಸೇರಿದ್ದ ರಾಜ್ಯ ಸಂಪುಟ ತೀರ್ಮಾನಿಸಿದೆ.
ಜನಸಂಖ್ಯೆ ಆಧಾರದ ಮೇಲೆ ವರ್ಗೀಕರಣ ಸೂಕ್ತವೆಂದು ಭಾವಿಸಿರುವ ಸಂಪುಟ ಭಾರತ ಸಂವಿಧಾನದ ಅನುಚ್ಛೇಧ 341 ಕ್ಕೆ ಹೊಸದಾಗಿ ಉಪನಿಯಮ (3)ನ್ನು ಸೇರ್ಪಡೆ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಲು ಸಭೆ ತೀರ್ಮಾನಿಸಿತು.
ಆ ನಂತರ ಜನಸಂಖ್ಯೆ ಆಧಾರದ ಮೇಲೆ ಪರಿಶಿಷ್ಟ ಸಮುದಾಯದವರಿಗೆ ಒಳ ಮೀಸಲಾತಿ ವರ್ಗೀಕರಣ ಮಾಡಲು ಅವಕಾಶ ದೊರೆಯಲಿದೆ ಎಂದು ನಿರ್ಣಯಿಸಿದೆ.
ಕರ್ನಾಟಕ ಸರ್ಕಾರ ತೆಗೆದುಕೊಂಡಿರುವ ಈ ತೀರ್ಮಾನದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಬೊಕ್ಕಸದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ, ಅಲ್ಲದೆ, ವಿವಿಧ ಇಲಾಖೆಗಳೊಂದಿಗೂ ಸಮಾಲೋಚನೆ ಮಾಡುವ ಅಗತ್ಯವಿಲ್ಲ.
ಈ ಎಲ್ಲವನ್ನೂ ಗಮನಕ್ಕೆ ತೆಗೆದುಕೊಂಡು ಕರ್ನಾಟಕ ಸರ್ಕಾರ ನಿಯಮಗಳು 1977ರ, ಶೆಡ್ಯೂಲ್‌ನ ಅಂಶ 28ರನ್ವಯ ಕೆಲವು ಪ್ರಸ್ತಾವನೆಗಳಿಗೆ ಸಂಪುಟ ಅನುಮೋದನೆ ನೀಡಿದೆ.
ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಆಗಬೇಕು
ಕರ್ನಾಟಕದಲ್ಲಿನ ಪರಿಶಿಷ್ಟ ಜಾತಿಗಳ ಉಪಪಂಗಡಗಳನ್ನು ನಾಲ್ಕು ಗುಂಪುಗಳಾಗಿ ಅವುಗಳ ಜನಸಂಖ್ಯಾ ಆಧಾರದ ಮೇಲೆ ಹಾಗೂ ಅವುಗಳ ಮೀಸಲಾತಿ ಪ್ರಮಾಣದೊಂದಿಗೆ ಉಪವರ್ಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸಂಪುಟ ನಿರ್ಣಯ ಕೈಗೊಂಡಿದೆ.
ಕರ್ನಾಟಕದಲ್ಲಿನ ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಬೋವಿ, ಬಂಜಾರ, ಕೊರಚ, ಕೊರಮ ಜಾತಿಗಳನ್ನು ಕೈಬಿಡುವ ಪ್ರಸ್ತಾವನೆ ಇಲ್ಲ ಎಂದು ಶಿಫಾರಸ್ಸಿನಲ್ಲಿ ಸ್ಪಷ್ಟಪಡಿಸಲಾಗಿದೆ.
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ ಪರಿಸ್ಥಿತಿಯನ್ನು ಅವಲೋಕಿಸಲು ನ್ಯಾ. ಎ.ಜೆ. ಸದಾಶಿವ ಆಯೋಗವನ್ನು ರಚಿಸಲಾಗಿತ್ತು, ಅದರಂತೆ ಆಯೋಗವು ಪರಿಶಿಷ್ಟರ ಸ್ಥಿತಿಗತಿಗಳ ಬಗ್ಗೆ ಅವಲೋಕಿಸಿದ್ದು, ಸಚಿವ ಸಂಪುಟ ಉಪಸಮಿತಿಯ ಶಿಫಾರಸುಗಳನ್ನು ಸಂಪುಟ ಸಭೆ ಅಂಗೀಕರಿಸಿ, ಕೇಂದ್ರಕ್ಕೆ ಶಿಫಾರಸು ಮಾಡಿದೆ. ನ್ಯಾ. ಸದಾಶಿವ ಆಯೋಗದ ವರದಿಯನ್ನು ಮುಕ್ತಾಯಗೊಳಿಸುತ್ತಿರುವುದಾಗಿ ಹಿಂದಿನ ಸರ್ಕಾರದ ಸಂಪುಟ ಸಭೆ ಕೈಗೊಂಡಿತ್ತು.
ಲೋಕಸಭೆ ಹೊಸ್ತಿಲಲ್ಲಿ ಒಳ ಮೀಸಲು ಅಸ್ತ್ರ
ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿಯನ್ನು ಸುದೀರ್ಘವಾಗಿ ಪರಿಶೀಲಿಸಿ ಸಂಪುಟದಲ್ಲಿ ಚರ್ಚಿಸಿ, ಪರಿಶಿಷ್ಟ ಸಮಯದಾಯಕ್ಕೆ ಸೇರಿದ ಉಪಪಂಗಡಗಳಿಗೆ ನ್ಯಾಯ ದೊರೆಕಿಸುವ ಹೊಣೆಗಾರಿಕೆಯನ್ನು ಕೇಂದ್ರದ ಹೆಗಲಿಗೆ ಹಾಕಿದೆ.
ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಒಳ ಮೀಸಲಾತಿ ವರ್ಗೀಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಹೊರಟಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪರಿಶಿಷ್ಟರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಮತ್ತು ಅವರಿಗೆ ಧಕ್ಕಬೇಕಾದ ಹಕ್ಕನ್ನು ಒದಗಿಸಿ ಎಂದು ಕೇಂದ್ರದ ಜವಾಬ್ದಾರಿಗೆ ಬಿಟ್ಟಿದೆ.
ಕರ್ನಾಟಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ101 ಜಾತಿಗಳಿದ್ದು, ಕಳೆದ ಜನಗಣತಿಯಂತೆ ೧.೦೫ ಕೋಟಿ ಜನಸಂಖ್ಯೆ ಇರುತ್ತದೆ. ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ 17.15 ರಷ್ಟು ಈ ಸಮುದಾಯವಿದ್ದು ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಕಲ್ಪಿಸಲು ಸಂವಿಧಾನ ತಿದ್ದುಪಡಿ ಮಾಡುವಂತೆ ಸಂಸತ್ತಿಗೆ ಶಿಫಾರಸ್ಸು ಮಾಡಲು ಸಂಪುಟ ಸಭೆ ತೀರ್ಮಾನಿಸಿದೆ.
1 comment
[…] Special Story […]