ವ್ಯಾಸಂಗದ ವಿವರಗಳು ಅದಲು-ಬದಲಾಗುವುದಿಲ್ಲ
ಬೆಂಗಳೂರು:ಪ್ರಸ್ತುತ ವರ್ಷದ ಸಿಇಟಿ ಪರೀಕ್ಷೆಗೆ ಸಲ್ಲಿಸಿರುವ ಅಭ್ಯರ್ಥಿಗಳ ಅರ್ಜಿಗಳಲ್ಲಿ ತಾವು ಓದಿದ ಶಾಲಾ ಶಿಕ್ಷಣ ಮಂಡಳಿಗಳಿಗೆ ಸಂಬಂಧಿಸಿದಂತೆ ತಪ್ಪಾಗಿದ್ದರೂ ಅರ್ಜಿ ಸ್ವೀಕೃತವಾಗಲಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ, ಅರ್ಜಿಗಳಲ್ಲಿನ ಮಾಹಿತಿ ತಪ್ಪಾಗಿದ್ದರೂ ಯಾರೂ ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿದ್ಯಾರ್ಥಿಗಳ 12ನೇ ತರಗತಿ ಅಥವಾ ದ್ವಿತೀಯ ಪಿಯುಸಿ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಪ್ರಾಧಿಕಾರವು ಅಂಕಗಳ ವಿವರಗಳನ್ನು ಪಡೆದುಕೊಳ್ಳಲಿದೆ.
ವಿದ್ಯಾರ್ಥಿಗಳು ಒಂದೇ ಶಾಲಾ ಶಿಕ್ಷಣ ಮಂಡಳಿಯಲ್ಲಿ ಓದಿರಲಿ ಅಥವಾ ಹಲವು ಶಾಲಾ ಶಿಕ್ಷಣ ಮಂಡಳಿಗಳಲ್ಲಿ ಓದಿರಲಿ, ಅದರಿಂದೇನೂ ತೊಂದರೆ ಇಲ್ಲ ಎಂದಿದ್ದಾರೆ.
ಜೊತೆಗೆ ಅಭ್ಯರ್ಥಿಗಳ ‘ಸ್ಯಾಟ್ಸ್’ ಡೇಟಾದಲ್ಲಿ ‘ಸಿಐಎಸ್ಸಿಇ’ ಎಂದಿರಬೇಕಾದ ಕಡೆ ‘ಸಿಬಿಎಸ್‌ಇ’ ಎಂದು ತೋರಿಸುತ್ತಿದ್ದರೆ ಅಥವಾ ಇದಕ್ಕೆ ತದ್ವಿರುದ್ಧವಾಗಿ ತೋರಿಸುತ್ತಿದ್ದರೂ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಬೇಕಾಗಿಲ್ಲ.
ಅವರ ವ್ಯಾಸಂಗದ ವಿವರಗಳೇನೂ ಅದಲು-ಬದಲಾಗುವುದಿಲ್ಲ, ಅಲ್ಲದೆ, ಶಾಲೆಗಳಲ್ಲಿ ಸ್ಯಾಟ್ಸ್ ಡೇಟಾ ಅಲಭ್ಯತೆ, ವ್ಯಾಸಂಗ ಮಾಡಿದ ವರ್ಷಗಳ ಅಪೂರ್ಣ ಮಾಹಿತಿ ಮತ್ತು ಹಲವು ಶಿಕ್ಷಣ ಮಂಡಳಿಗಳಲ್ಲಿ ಓದಿದ್ದರೂ ಒಂದೇ ಒಂದು ಮಂಡಳಿಯ ನಮೂದು ಇತ್ಯಾದಿಗಳಿಂದ ಚಿಂತಿತರಾಗಬೇಕಾಗಿಲ್ಲ.
ಮಿಗಿಲಾಗಿ, 2016-17ಕ್ಕಿಂತ ಮೊದಲು ಯಾವುದೇ ಶಿಕ್ಷಣ ಮಂಡಳಿಯಡಿ 10ನೇ ತರಗತಿ ತೇರ್ಗಡೆಯಾಗಿದ್ದು, ಸ್ಯಾಟ್ಸ್ ನಂಬರ್ ಹೊಂದಿಲ್ಲದೆ ಇರುವ ವಿದ್ಯಾರ್ಥಿಗಳು ಕೂಡ ನಿರಾತಂಕವಾಗಿ, ಸ್ಯಾಟ್ಸ್ ಸಂಖ್ಯೆಯೊಂದನ್ನು ಖಾಲಿ ಬಿಟ್ಟು, ಸಿಇಟಿ ಅರ್ಜಿಯನ್ನು ತುಂಬಬಹುದು ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

1 comment
[…] ರಾಜ್ಯ […]