ಬೆಂಗಳೂರು: ಜಯದೇವ ಹೃದ್ರೋಗ ಸಂಸ್ಥೆಗೆ ಮತ್ತೆ ನಿರ್ದೇಶಕರಾಗಿ ಡಾ.ಮಂಜುನಾಥ್ ಅವರನ್ನು ರಾತ್ರೋರಾತ್ರಿ ಸರ್ಕಾರ ನೇಮಿಸಿತ್ತು.ಸರ್ಕಾರದ ಮನವಿಯನ್ನು ನಯವಾಗಿ ತಿರಸ್ಕರಿಸಿರುವ ಡಾ.ಮಂಜುನಾಥ್, ಕೇವಲ ಹೃದಯ ತಜ್ಞರಾಗಿಯೇ ಮುಂದುವರೆಯುವುದಾಗಿ ತಿಳಿಸಿದ್ದಾರೆ.
ಹಠಾತ್ ಬೆಳವಣಿಗೆಯೊಂದರಲ್ಲಿ ರಾತ್ರಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಅವರ ಬಳಿ ತೆರಳಿ ಜಯದೇವ ಸಂಸ್ಥೆಗೆ ಡಾ.ಮಂಜುನಾಥ್ ಅವರನ್ನು ಮುಂದುವರೆಸಬೇಕೆಂದು ಮಾಡಿದ ಮನವಿಗೆ ಸ್ಪಂದಿಸಿ ತೀರ್ಮಾನ ಕೈಗೊಂಡಿದ್ದರು.
ಸಿಬ್ಬಂದಿ ಮತ್ತು ಇತರ ಸಂಸ್ಥೆಗಳಿಂದ ಬೀಳ್ಕೊಡುಗೆ ನಂತರ ನಿರ್ದೇಶಕ ಸ್ಥಾನದಲ್ಲಿ ಮುಂದುವರೆಯಲು ತಮಗೆ ಇಚ್ಛೆ ಇಲ್ಲ ಎಂದು ಡಾ.ಮುಂಜುನಾಥ್ ತಿಳಿಸಿದ್ದಾರೆ.
ಡಾ.ಮಂಜುನಾಥ್ ಅವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಇಲ್ಲವೇ ಬೆಂಗಳೂರು ಗ್ರಾಮಾಂತರದಿಂದ ಕಣಕ್ಕಿಳಿಸಲು ಬಿಜೆಪಿ-ಜೆಡಿಎಸ್ ಕಾತುರದಲ್ಲಿವೆ.
ಉಭಯ ಪಕ್ಷಗಳ ನಾಯಕರ ಚರ್ಚೆ
ಗ್ರಾಮಾಂತರದಿಂದಾದರೆ ಬಿಜೆಪಿ ಚಿನ್ಹೆ ಅಡಿ, ಹಾಸನದಿಂದಾದರೆ ಜೆಡಿಎಸ್ ಚಿನ್ಹೆ ಅಡಿ ಕಣಕ್ಕಿಳಿಸುವ ಮಾತುಗಳು ಉಭಯ ಪಕ್ಷಗಳ ನಾಯಕರಲ್ಲಿ ಚರ್ಚೆಯಾಗಿವೆ. ಶಿವಕುಮಾರ್ ಸಹೋದರ ಹಾಗೂ ಹಾಲಿ ಸಂಸದ ಡಿ.ಕೆ.ಸುರೇಶ್ ಗ್ರಾಮಾಂತರದಿಂದ ಸತತವಾಗಿ ಲೋಕಸಭೆ ಪ್ರವೇಶಿಸುತ್ತಿದ್ದಾರೆ.
ಮಂಜುನಾಥ್ ಕಣಕ್ಕಿಳಿದರೆ ಸಹೋದರನಿಗೆ ಚುನಾವಣೆಯಲ್ಲಿ ಕಠಿಣ ಸವಾಲು ಎದುರಿಸಬೇಕಾಗಬಹುದೆಂಬ ರಾಜಕೀಯ ದೂರದೃಷ್ಟಿಯಿಂದ ಉಪಮುಖ್ಯಮಂತ್ರಿ ಅವರು ಇಂತಹ ಪ್ರಯತ್ನ ಮಾಡಿರಬಹುದು ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಈ ಮಧ್ಯೆ ಸಮಾರಂಭವೊಂದರ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ್, ರಾಜಕೀಯ ಪ್ರವೇಶ ಮಾಡುವ ಆಲೋಚನೆ ಇಲ್ಲ, ನಾನು ವೈದ್ಯಕೀಯ ವೃತ್ತಿಯಲ್ಲೇ ಮುಂದುವರೆಯುತ್ತೇನೆ, ನಾನು ಲೋಕಸಭಾ ಚುನಾವಣಾ ಕಣಕ್ಕಿಳಿಯುವ ವಿಚಾರ ಭಾರೀ ಚರ್ಚೆಯಲ್ಲಿದೆ, ಇದೆಲ್ಲಾ ಊಹಾಪೋಹ ಎಂದರು.
ಡಾ.ಮಂಜುನಾಥ್ ಅವರಿಗೆ
ರಾಜ್ಯ ಒಕ್ಕಲಿಗರ ಸಂಘದ ಸನ್ಮಾನ
ರಾಜ್ಯ ಒಕ್ಕಲಿಗರ ಸಂಘದ ಗೌರವಪೂರ್ವಕ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಮಾಡಬೇಕು, ಸೇವೆಯು ಪ್ರದರ್ಶನವಾಗದೆ ಆದರ್ಶವಾಗಿರಬೇಕು ಎಂದು ತಿಳಿಸಿದರು.
ಸೇವೆಯು ಕರುಣೆ, ಮಾನವೀಯತೆ, ಬದ್ಧತೆಯಿಂದ ಕೂಡಿರಬೇಕು, ಆಗ ನಿವೃತ್ತಿಯ ನಂತರವು ಸಮಾಜ ಗೌರವಿಸುತ್ತದೆ ಎಂದರು.
ಪ್ರತಿಯೊಬ್ಬರಿಗೂ ಯಾವುದೇ ಪದವಿಯಿಂದ ನಿವೃತ್ತಿ ಅನಿವಾರ್ಯ. ಆದರೆ ನೆನಪುಗಳು ಮಾತ್ರ ಅಮರವಾಗಿರುತ್ತದೆ. ಆಸ್ಪತ್ರೆ ದೇವಾಲಯವಿದ್ದಂತೆ. ಆಸ್ಪತ್ರೆಯ ಗೋಡೆಗಳಿಗೆ ದೇವಾಲಯಕ್ಕಿಂತಲೂ ಹೆಚ್ಚಿನ ಪ್ರಾರ್ಥನೆ ಸಲ್ಲಿಸಿರುತ್ತಾರೆ.
ಅನುದಾನಕ್ಕಿಂತ ಅನುಷ್ಠಾನ ಮುಖ್ಯ
ಬಡ ರೋಗಿಗಳ ಕಣ್ಣೀರು ಶೇ.1ರಷ್ಟಿದ್ದರೆ ಅದರ ಹಿಂದಿನ ನೋವು 99ರಷ್ಟು ಇರುತ್ತದೆ. ಹೀಗಾಗಿ ಕರುಣೆ, ಹೃದಯವಂತಿಕೆ, ಮಾನವೀಯತೆ, ದೂರದೃಷ್ಟಿಯಿಂದ ಕೆಲಸ ಮಾಡಬೇಕು. ಕೆಲಸ ಮಾಡುವ ಸ್ಥಳದಲ್ಲಿ ಉತ್ತಮ ವಾತಾವರಣವಿದ್ದು, ಪರಸ್ಪರ ಉತ್ತಮ ಸಂಬಂಧವಿರಬೇಕು. ಅನುದಾನಕ್ಕಿಂತ ಅನುಷ್ಠಾನ ಮುಖ್ಯ. ಸಹಾಯ ಮಾಡುವುದೇ ಧರ್ಮ ಎಂದು ಹೇಳಿದರು.
ಸೇವೆ ಸಲ್ಲಿಸುವಾಗ ಅನುಮಾನ, ಅಹಂಕಾರ ಇರಬಾರದು. ಮಾಡುವ ಸಾಧನೆ ಸಾಮಾನ್ಯ ಜನರಿಗೆ ತಲುಪಿದಾಗ ಗೌರವ ಭಾವನೆ ತನ್ನಿಂದ ತಾನೆ ಬರುತ್ತದೆ ಎಂದು ಹೇಳಿದರು.
17-18 ವರ್ಷಗಳ ಕಾಲ ಜಯದೇವ ಆಸ್ಪತ್ರೆಯಲ್ಲಿ 75 ಲಕ್ಷ ಹೊರ ರೋಗಿಗಳಿಗೆ ಚಿಕಿತ್ಸೆ, 8 ಲಕ್ಷ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಎಷ್ಟು ಪಾರಿತೋಷಕ ಪಡೆದೆ ಎನ್ನುವುದಕ್ಕಿಂತ ಎಷ್ಟು ಜನರ ಮನೆಯಲ್ಲಿ ಬೆಳಕು, ರೋಗಿಗಳ ಮುಖದಲ್ಲಿ ನಗುವನ್ನು ತಂದಿದ್ದೇವೆ ಎಂಬುದು ಮುಖ್ಯ ಎಂದರು.
ಖಾಸಗಿ ಪಂಚತಾರಾ ಆಸ್ಪತ್ರೆಯಲ್ಲಿ ಶ್ರೀಮಂತರಿಗೆ ಸಿಗುವ ಮಾದರಿಯಲ್ಲೇ ಜಯದೇವ ಆಸ್ಪತ್ರೆಯಲ್ಲಿ ಬಡವರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ನಾವು ಸ್ವೀಕರಿಸುವ ಪ್ರಮಾಣವಚನದಂತೆ ನಡೆದುಕೊಂಡರೆ ದೇಶ ಮುಂದುವರೆಯಲಿದೆ. ರಾಷ್ಟ್ರಕವಿ ಕುವೆಂಪು ಹೇಳುವಂತೆ ನಾವು ಹುಟ್ಟುವಾಗಲು ವಿಶ್ವಮಾನವರು, ಹೋಗುವಾಗಲು ವಿಶ್ವಮಾನವರು. ನಡುವೆಯೂ ವಿಶ್ವಮಾನವರೆನಿಸಿಕೊಳ್ಳಬೇಕು ಎಂದರು.
ಒಕ್ಕಲಿಗರ ಸಂಘವು ಉತ್ತಮ ಕೆಲಸ ಮಾಡುತ್ತಿದೆ. ಬೆಂಗಳೂರಿನ ಹೃದಯ ಭಾಗದಲ್ಲಿದ್ದು, ಸಂಘ ಮತ್ತು ಸಂಸ್ಥೆಗಳು ನಮ್ಮದು ಎಂಬ ಮನೋಭಾವನೆ ಮೂಡಿಬಂದರೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲಿದೆ ಎಂದರು.