ಅನುದಾನಕ್ಕಾಗಿ ದೆಹಲಿಯಲ್ಲಿ ಇಡೀ ಕರ್ನಾಟಕ ಸರ್ಕಾರದ ಪ್ರತಿಭಟನೆ
ನವದೆಹಲಿ: ಕೇಂದ್ರ ಸರ್ಕಾರದ ತಾರತಮ್ಯ ನೀತಿ ಮತ್ತು ಮಲತಾಯಿ ಧೋರಣೆ ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಇಂದಿಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ರಣ ಕಹಳೆ ಮೊಳಗಿಸಿತು.
ಕರ್ನಾಟಕಕ್ಕೆ ಬರಬೇಕಿರುವ 62,098 ಕೋಟಿ ರೂ.ಗಾಗಿ ಕೇಂದ್ರದ ಕಣ್ಣು ತೆರೆಸಿ, ರಾಷ್ಟ್ರದ ಗಮನ ಸೆಳೆಯಲು ಸಿದ್ದರಾಮಯ್ಯ ತಮ್ಮ ಇಡೀ ಸರ್ಕಾರವನ್ನೇ ಕೊಂಡೊಯ್ದು ಕೆಂಪು ಕೋಟೆ ಸನಿಹದಲ್ಲೇ ಕನ್ನಡಿಗರ ಧ್ವನಿ ಮೊಳಗಿಸಿ ರಾಜ್ಯದ ಪಾಲು ಕೊಡುವಂತೆ ಆಗ್ರಹಿಸಿದರು. ಸಚಿವರು, ಶಾಸಕರು ಹಾಗೂ ಪಕ್ಷದ ಮುಖಂಡರೊಂದಿಗೆ ಜಂತರ್ ಮಂತರ್‌ನಲ್ಲಿ ವಿನೂತನ ಧರಣಿ ಮತ್ತು ಪ್ರತಿಭಟನೆ ನಡೆಸಿ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ರಾಷ್ಟ್ರದ ಮುಂದಿಟ್ಟರು.
ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಕೇಂದ್ರದ ಮಲತಾಯಿ ಧೋರಣೆಯನ್ನು ಅಂಕಿ, ಸಂಖ್ಯೆಗಳ ಸಮೇತ ತೆರೆದಿಟ್ಟು, ಚಿನ್ನದ ಮೊಟ್ಟೆ ಕೊಡುವ ಕೋಳಿ ಕೊಯ್ದು, ಹಾಲಿನ ಕೆಚ್ಚಲು ಕೊಯ್ದು ನೀವು ಏನು ಮಾಡುತ್ತೀರಿ ಎಂದು ಪ್ರಧಾನಿ ಅವರನ್ನು ಪ್ರಶ್ನಿಸಿದರು.
ಇದು ಬಿಜೆಪಿ ಅಥವಾ ಇನ್ನಾವುದೇ ಪಕ್ಷಗಳ ವಿರುದ್ಧದ ಚಳವಳಿ ಅಲ್ಲ, ಕಳೆದ ಐದು ವರ್ಷಗಳಲ್ಲಿ 1,87,000 ಕೋಟಿ ರೂ.ಗಳಷ್ಟು ನ್ಯಾಯಯುತವಾಗಿ ಬರಬೇಕಿದ್ದ ಅನುದಾನವನ್ನು ರಾಜ್ಯಕ್ಕೆ ನೀಡಿಲ್ಲ, ಅದಕ್ಕಾಗಿ ಚಳವಳಿ ಎಂದರು.
ಅನ್ಯಾಯದ ವಿರುದ್ಧ ಹೋರಾಟ
ಈ ಅನ್ಯಾಯದ ವಿರುದ್ಧ ನಾವು ಹೋರಾಟ ನಡೆಸುತ್ತಿದ್ದೇವೆಯೇ ಹೊರತು ಯಾವುದೇ ರಾಜಕೀಯ ದೃಷ್ಟಿಯಿಂದಲ್ಲ ಎಂದು ಸ್ಪಷ್ಟಪಡಿಸಿದರು. ನಿಮ್ಮ ವಿರುದ್ಧ ನಾವು ನಡೆಸುತ್ತಿರುವುದು ಐಸಿಹಾಸಿಕ ಪ್ರತಿಭಟನೆ, 14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ತೆರಿಗೆ ಪಾಲು ಶೇ.4.71 ರಷ್ಟಿತ್ತು, 15ನೇ ಹಣಕಾಸು ಆಯೋಗದಲ್ಲಿ ಶೇ. 3.64 ಕ್ಕೆ ಇಳಿಯಿತು. ಇದರಿಂದ ರಾಜ್ಯಕ್ಕೆ ಬರುವ ತೆರಿಗೆಯಲ್ಲಿ ಶೇ. 40 ರಿಂದ 45 ರಷ್ಟು ಕಡಿತವಾಗಿದೆ.
ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿಗೆ ಅನುದಾನ ಕೊಡುವ ಬಗ್ಗೆ ನಮಗೆ ತಕರಾರುಗಳಿಲ್ಲ. ಆದರೆ ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಬೇಡಿ ಎನ್ನುವುದು ನಮ್ಮ ಆಗ್ರಹ. ಕೇಂದ್ರ ಸರ್ಕಾರದ ಅಂಕಿ-ಅಂಶಗಳೇ ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಹೇಳುತ್ತಿವೆ. ದೇಶದಲ್ಲಿ ಎರಡನೇ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ಕರ್ನಾಟಕ. ನಮಗೇ ಏಕೆ ಈ ಮಟ್ಟದ ಅನ್ಯಾಯ ಎಂದು ಪ್ರಶ್ನಿಸಿದರು.
ನಾವು ಕನ್ನಡಿಗರು 4,30,000 ಕೋಟಿ ರೂ. ತೆರಿಗೆ ಕಟ್ಟುತ್ತೇವೆ, ನಮಗೆ ವಾಪಾಸ್ ಬರುವುದು ಕೇವಲ 50,000 ಕೋಟಿ ರೂ. ಮಾತ್ರ. ಅಂದರೆ ನಾವು ಕೊಡುವ ಪ್ರತಿ 100 ರೂ.ನಲ್ಲಿ 13 ರೂ. ಮಾತ್ರ ನಮಗೆ ವಾಪಾಸ್ ಬರುತ್ತದೆ, ಇದಕ್ಕಿಂತ ಭೀಕರ ಅನ್ಯಾಯ ಏನಿದೆ, ಈ ಅನ್ಯಾಯವನ್ನು ನಾವು ಸಹಿಸಬೇಕಾ ಎಂದರು.
15ನೇ ಹಣಕಾಸು ಆಯೋಗದಿಂದಾಗಿ ನಮಗೆ 62.098 ಕೋಟಿ ರೂ. ತೆರಿಗೆಯೊಂದರಲ್ಲೇ ಅನ್ಯಾಯ ಆಗಿದೆ. ಇದನ್ನು ನಾವು ಪ್ರಶ್ನಿಸಬಾರದಾ. ಈ ಕಾರಣಗಳಿಗೇ ನಾವು ಪ್ರತಿಭಟನೆ ಮಾಡುತ್ತಿದ್ದೇವೆ.
ಬಿಜೆಪಿ ನಿರಂತರ ಸುಳ್ಳುಗಳ ಮೂಲಕ ತಮ್ಮ ದ್ರೋಹವನ್ನು ಮರೆಮಾಚಲು ನೋಡುತ್ತಿದೆ, ಕೇಂದ್ರದ ಬಜೆಟ್ ಗಾತ್ರ ಹೆಚ್ಚಾದ ಹಾಗೇ, ರಾಜ್ಯದ ತೆರಿಗೆ ಪಾಲು ಹೆಚ್ಚಾಗಬೇಕಿತ್ತು, ಆದರೆ ಈ ಪ್ರಮಾಣದಲ್ಲೂ ನಮಗೆ ಹಂಚಿಕೆ ಆಗಿಲ್ಲ, ಇದನ್ನು ಕೇಂದ್ರದ ಅಂಕಿ-ಅಂಶಗಳೇ ಹೇಳುತ್ತಿವೆ. ಕಳೆದ 10 ವರ್ಷಗಳಿಂದ ಹಂತ ಹಂತವಾಗಿ ರಾಜ್ಯದ ಪಾಲಿನ ತೆರಿಗೆ ಪಾಲು, ಕೇಂದ್ರದ ಅನುದಾನದ ಪಾಲು ನಿರಂತರವಾಗಿ ಕಡಿಮೆ ಆಗುತ್ತಿರುವುದನ್ನು ಪ್ರತೀ ವರ್ಷದ ಅಂಕಿ-ಅಂಶಗಳೊಂದಿಗೆ ಮುಖ್ಯಮಂತ್ರಿ ವಿವರಿಸಿದರು.
ರಾಜ್ಯದ ಪಾಲಿನ ತೆರಿಗೆ ಅರ್ಧಕ್ಕಿಂತ ಕಡಿಮೆ ಆಗಿದೆ
ಕೇಂದ್ರದ ಬಜೆಟ್ ಗಾತ್ರ ದುಪ್ಪಟ್ಟಾಗಿದೆ, ಆದರೆ ರಾಜ್ಯದ ಪಾಲಿನ ತೆರಿಗೆ ಅರ್ಧಕ್ಕಿಂತ ಕಡಿಮೆ ಆಗಿದೆ, ನಮ್ಮ ಪಾಲು ದುಪ್ಪಟ್ಟಾಗಬೇಕಾದ ಜಾಗದಲ್ಲಿ ಅರ್ಧಕ್ಕಿಂತ ಕಡಿಮೆ ಆಗಿರುವುದು ಅನ್ಯಾಯ ಅಲ್ಲವೇ.
ಜಿಎಸ್‌ಟಿಯಲ್ಲಿ ನಮ್ಮ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಇನ್ನೂ ಬೃಹತ್ತಾಗಿದೆ. ಜಿಎಸ್‌ಟಿಯಲ್ಲಿ ಆಗುವ ಅನ್ಯಾಯವನ್ನು ವಿಶೇಷ ಪರಿಹಾರ ಕೊಟ್ಟು ಸರಿದೂಗಿಸುವುದಾಗಿ ಹೇಳಿದ್ದರು, ಈಗ ಪರಿಹಾರ ಕೊಡುತ್ತಿಲ್ಲ, ಇದರಿಂದ 59,000 ಕೋಟಿ ರೂ.ಗೂ ಅಧಿಕ ಅನ್ಯಾಯ, ವಂಚನೆ ಆಗಿದೆ.
ಕೇಂದ್ರದ ನಿರಂತರ ದ್ರೋಹ, ವಂಚನೆಯಿಂದ ರಾಜ್ಯದ ತೆರಿಗೆ ಸಂಗ್ರಹ ಪ್ರಮಾಣ ಶೇ.15 ರಿಂದ ಕೆಳಗೆ ಜಾರಿ ಶೇ.೯ಕ್ಕೆ ಕುಸಿದಿದೆ. ಇದಕ್ಕೆ ಕೇಂದ್ರದ ಮಲತಾಯಿ ಧೋರಣೆ ಮತ್ತು ವಂಚನೆಯೇ ಕಾರಣ.
ರಾಜ್ಯದಿಂದ ಆಯ್ಕೆ ಆಗಿರುವ ಬಿಜೆಪಿ ಸಂಸದರು ಕೋಲೆ ಬಸವನ ರೀತಿಯಲ್ಲಿ ಮೋದಿ ಅವರ ಎದುರಿಗೆ ತಲೆ ಅಲ್ಲಾಡಿಸುವುದು ಬಿಟ್ಟರೆ ರಾಜ್ಯದ ಪಾಲನ್ನು ಬಾಯಿ ಬಿಟ್ಟು ಕೇಳಲೇ ಇಲ್ಲ. ವಿಧಾನಸಭಾ ಅಧಿವೇಶನದಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಅವರಿಗೆ ಕೇಂದ್ರದ ಮುಂದೆ ರಾಜ್ಯದ ಹಕ್ಕು ಮಂಡಿಸಿ ಎಂದು ಆಗ್ರಹಿಸಿದೆ, ಅವರು ಕೇಳಲಿಲ್ಲ, ಇವರು ಕೊಡಲಿಲ್ಲ.
ನಿರ್ಮಲಾ ಸೀತಾರಾಮನ್ ಸುಳ್ಳು
ನಮಗೆ ಅನ್ಯಾಯ ಸರಿಪಡಿಸಲು ವಿಶೇಷ ಅನುದಾನವಾಗಿ 11,495 ಕೋಟಿ ರೂ. ಕೊಡ್ತೀವಿ ಎಂದು ಘೋಷಿಸಿದರು, ಆದರೆ ಈ ಹಣ ಕೊಡಬೇಡಿ ಎಂದು ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ತಡೆ ಹಿಡಿದರು, ಈಗೇಕೆ ಸುಳ್ಳು ಹೇಳ್ತಿದ್ದೀರಿ ಮೇಡಂ ಎಂದು ವ್ಯಂಗ್ಯವಾಡಿದರು.
ರಾಜ್ಯದಿಂದ ಆಯ್ಕೆ ಆದ ನಿರ್ಮಲಾ ಸೀತಾರಾಮನ್ ಅವರೇ ಈ ಮಟ್ಟದ ದ್ರೋಹ ಮಾಡಿದ ಬಳಿಕವೂ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಮೋದಿ ಅವರ ಕೇಂದ್ರ ಸರ್ಕಾರ ರಚಿಸಿದ 15ನೇ ಹಣಕಾಸು ಆಯೋಗದಲ್ಲಿ ದಕ್ಷಿಣ ಭಾರತ ರಾಜ್ಯಗಳಿಂದ ಒಬ್ಬ ಸದಸ್ಯನೂ ಇರಲಿಲ್ಲ, ಇದರಿಂದ ನಮ್ಮ ರಾಜ್ಯಗಳಿಗೆ ಅನ್ಯಾಯ ಆಗಿದೆ, ಇದಕ್ಕೆ ಮೋದಿಯವರೇ ಕಾರಣ ಎಂದರು.
ಸತ್ಯ ಮುಚ್ಚಿ ಹಾಕಲು ಸಾಧ್ಯವಿಲ್ಲ
ನೀವು ಎಷ್ಟೇ ಸುಳ್ಳುಗಳನ್ನು ಹೇಳಿದರೂ ಸತ್ಯ ಮುಚ್ಚಿ ಹಾಕಲು ಸಾಧ್ಯವಿಲ್ಲ, ಯಡಿಯೂರಪ್ಪ, ಬೊಮ್ಮಾಯಿ, ಮೋದಿಯವರೇ. ಕೇಂದ್ರ ಸರ್ಕಾರದ ಬಜೆಟ್ ದಾಖಲೆಗಳನ್ನೇ ಪರಿಶೀಲಿಸಿ ನೋಡಿ, ನಮಗಾಗಿರುವ ವಂಚನೆಯ ಪ್ರಮಾಣ ಅದರಲ್ಲಿ ದಾಖಲಾಗಿದೆ. 15ನೇ ಹಣಕಾಸು ಆಯೋಗ ಒಂದರಿಂದಲೇ ಇದುವರೆಗೂ 1,87,000 ಕೋಟಿ ರೂ.ಗೂ ಹೆಚ್ಚು ರಾಜ್ಯಕ್ಕೆ ಅನ್ಯಾಯ ಆಗಿದೆ.
ರಾಜ್ಯಕ್ಕೆ ಭೀಕರ ಬರಗಾಲ ಬಂದಿದೆ, ಸೆಪ್ಟೆಂಬರ್‌ನಿಂದ ರಾಜ್ಯದ ಪಾಲಿನ ಬರ ಪರಿಹಾರ ಕೊಡಿ ಎಂದು ನಿರಂತರವಾಗಿ ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೆ ಇದುವರೆಗೂ ಒಂದೇ ಒಂದು ರೂ. ಬರಪರಿಹಾರ ಕೊಟ್ಟಿಲ್ಲ. ಪ್ರಧಾನಿ ಮೋದಿಜೀ ಮತ್ತು ಅಮಿತ್ ಷಾ ಅವರನ್ನು ಖುದ್ದಾಗಿ ಭೇಟಿ ಮಾಡಿ ವಿನಂತಿಸಿದೆ, ಆದರೂ ಇವತ್ತಿಗೂ ಒಂದು ಪೈಸೆ ಬಂದಿಲ್ಲ. ಈ ಬಗ್ಗೆ ನೆಪಕ್ಕೂ ಒಂದೂ ಸಭೆಯನ್ನೂ ಕರೆದಿಲ್ಲ.
ಆದರೂ ಬರದಿಂದ ರಾಜ್ಯದ ಜನತೆ ಕಂಗಾಲಾಗದಂತೆ ರಾಜ್ಯ ಸರ್ಕಾರವೇ ಪರಿಹಾರ ನೀಡಿದೆ, 31 ಲಕ್ಷ ರೈತರಿಗೆ 650 ಕೋಟಿ ರೂ. ಬರ ಪರಿಹಾರವನ್ನು ರಾಜ್ಯದ ಬೊಕ್ಕಸದಿಂದಲೇ ಕೊಟ್ಟಿದ್ದೇವೆ. ಲಕ್ಷ ಲಕ್ಷ ರೈತರಿಗೆ ಪರಿಹಾರ ಕೊಡುವವರಿದ್ದೇವೆ.
ಕೇಂದ್ರ ಕೈಯಿಂದ ಪರಿಹಾರ ಕೊಡುವುದಲ್ಲ
ಕೇಂದ್ರ ತನ್ನ ಕೈಯಿಂದ ಪರಿಹಾರ ಕೊಡುವುದಲ್ಲ, ನಮ್ಮ ಹಣ ಅವರ ಬಳಿ ಇದೆ, ಅದರಲ್ಲಿ ರಾಜ್ಯದ ಪಾಲನ್ನು ವಾಪಾಸ್ ಕೊಡಬೇಕಿತ್ತು, ಒಂದೇ ಒಂದು ರೂಪಾಯಿ ಕೊಡಲಿಲ್ಲ, ನಾವು ಇನ್ನೂ ಎನ್‌ಡಿಆರ್‌ಎಫ್ ನಿಧಿಗಾಗಿ ಕಾಯುತ್ತಲೇ ಇದ್ದೇವೆ. ಈ ಹಣ ಕೊಡಿಸಿ ಯಡಿಯೂರಪ್ಪ, ಅಶೋಕ್, ನಿರ್ಮಲಾ ಸೀತಾರಾಮನ್ ಅವರೇ ಎಂದು ಕೇಳಿದರು. ಸಂಸತ್ತಿನಲ್ಲಿ ರಾಜ್ಯದ ಪರವಾಗಿ ಬಾಯಿ ಬಿಡಲು ರಾಜ್ಯದಿಂದ ಆಯ್ಕೆ ಆಗಿರುವ ಬಿಜೆಪಿ ಸಂಸದರಿಗೆ ಭಯ.
ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಕೊಡುವುದಾಗಿ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲೇ ಘೋಷಿಸಿದರು. ಒಂದು ರೂಪಾಯಿ ಕೂಡ ಬಂದಿಲ್ಲ. ಮಹದಾಯಿ ಯೋಜನೆಗೆ ಇವತ್ತಿನವರೆಗೂ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿಲ್ಲ, ಕೃಷ್ಣಾ ಮೇಲ್ದಂಡೆ ಬಗ್ಗೆ ಇವತ್ತಿನವರೆಗೂ ಗೆಜೆಟ್ ನೋಟಿಫಿಕೇಷನ್ ಆಗಿಲ್ಲ. ಇನ್ನೂ ಕೆಲಸವೇ ಆರಂಭವಾಗಿಲ್ಲ.
ಮೋದಿಯವರನ್ನು ಮಾಜಿ ಪ್ರಧಾನಿ ದೇವೇಗೌಡರು ಹೊಗಳುತ್ತಾ ಕುಳಿತಿದ್ದಾರೆ, ಮೇಕೆದಾಟು, ಕೃಷ್ಣ ಮೇಲ್ದಂಡೆಗೆ ಅನುಮತಿ ಕೊಡಿಸಲಿ, ರಾಜ್ಯಕ್ಕೆ ಬರಬೇಕಾದ ಹಣ ವಾಪಾಸ್ ಕೊಡಿಸಲಿ ಎಂದರು.
ರಾಯಚೂರಿಗೆ ಏಮ್ಸ್ ಕೊಡ್ತೀವಿ ಅಂದರು, ಮೂರು ಪತ್ರ ಬರೆದೆ, ಇವತ್ತಿನವರೆಗೂ ಏಮ್ಸ್ ಬರಲಿಲ್ಲ. ಪತ್ರಗಳಿಗೆ ಉತ್ತರವೂ ಬರಲಿಲ್ಲ. ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರಿಗೆ ಅನ್ನಭಾಗ್ಯ ಯೋಜನೆ ಜಾರಿ ಮಾಡಿದೆವು, ದುಡ್ಡು ಕೊಡ್ತೀವಿ, ಅಕ್ಕಿ ಕೊಡಿ ಎಂದರೂ ಅಕ್ಕಿ ಕೊಡಲಿಲ್ಲ, ನಾವು ನೇರವಾಗಿ ಜನರಿಗೇ ಹಣ ಕೊಟ್ಟೆವು.
ರಾಜ್ಯದ ಜನರಿಗೆ ದ್ರೋಹ ಮಾಡಿ, ನಮ್ಮ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎನ್ನುತ್ತಿದ್ದಾರೆ. ಬಡವರು, ಮಧ್ಯಮ ವರ್ಗದವರಿಗೆ ನೆರವು ನೀಡುವುದು ಬಿಟ್ಟಿ ಭಾಗ್ಯವೇ ಎಂದರು. ನರೇಂದ್ರ ಮೋದಿ ಅವರು ಗ್ಯಾರಂಟಿಗಳು ಜಾರಿಯಾದರೆ ರಾಜ್ಯ ಆರ್ಥಿಕ ದಿವಾಳಿಯಾಗಿ ಬಿಡುತ್ತದೆ ಎಂದರು. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯಾಗಿ, ರಾಜ್ಯ ಆರ್ಥಿಕವಾಗಿ ಸದೃಢವಾಗಿದೆ, ಮೋದಿ ಅವರ ಮಾತುಗಳು ಪರಮ ಸುಳ್ಳು ಎನ್ನುವುದು ಸಾಬೀತಾಗಿದೆ ಎಂದರು.
ಸ್ವಾತಂತ್ರ ಬಂದಾಗಿನಿಂದ ದೇಶದ ಸಾಲ 2014ರ ವರೆಗೂ 54 ಲಕ್ಷ ಕೋಟಿ ರೂ. ಮಾತ್ರ ಇತ್ತು. ಈಗ 180 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಮೋದಿ ಅವಧಿಯಲ್ಲೇ 130 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. 130 ಕೋಟಿ ರೂ. ಸಾಲ ಒಬ್ಬರೇ ಮಾಡಿದ್ದಾರಲ್ಲಾ ಇದು ಸಾಧನೆಯಾ ಎಂದು ಪ್ರಶ್ನಿಸಿದರು.
ಸೆಸ್, ಸರ್ಚಾರ್ಜ್ ಮೂಲಕವೂ ರಾಜ್ಯಕ್ಕೆ ನಿರಂತರ ದ್ರೋಹ, ಅನ್ಯಾಯ ಆಗುತ್ತಿದೆ, ಬರಗಾಲ ಇದ್ದು, ನರೇಗಾ ಕೂಲಿ ದಿನಗಳನ್ನು 150 ದಿನಗಳಿಗೆ ಏರಿಸಿ ಎಂದು ಮನವಿ ಮಾಡಿದರೂ ಏರಿಕೆ ಮಾಡಲಿಲ್ಲ ಎಂದು ಖಂಡಿಸಿದರು.
1 comment
[…] ರಾಜಕೀಯ […]