ಜಡ್ಡುಗಟ್ಟಿರುವ ಅಧಿಕಾರಿಗಳಿಗೆ ಚಾಟಿ: ಶಕ್ತಿಸೌಧದ ಮುಂದೆ ಮುಖ್ಯಮಂತ್ರಿ ಜನಸ್ಪಂದನ
ಬೆಂಗಳೂರು:ವಿಕಲಚೇತನರು, ತೀವ್ರ ಅನಾರೋಗ್ಯ ಪೀಡಿತರು, ಹಿರಿಯ ನಾಗರಿಕರು, ರೈತರ ಸಮಸ್ಯೆಗಳಿಗೆ ಸ್ಥಳೀಯ ಮಟ್ಟದ ಅಧಿಕಾರಿಗಳು ಸ್ಪಂದಿಸದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಜಡ್ಡುಗಟ್ಟಿರುವ ಅಧಿಕಾರಿಗಳಿಗೆ ಚಾಟಿ ಬೀಸಲೆಂದೇ ಇಂದು ಶಕ್ತಿಸೌಧದ ಮುಂದೆ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ನೂರಾರು ಕಿಲೋ ಮೀಟರ್ ದೂರದಿಂದ ಬಂದು ತಮ್ಮ ದೊರೆಗೆ ಅಹವಾಲು ಸಲ್ಲಿಸಲು ನಿನ್ನೆ ರಾತ್ರಿಯಿಂದಲೇ ಆಕಾಂಕ್ಷಿಗಳು ಕಾದುಕುಳಿತಿದ್ದರು.
ಅನುದಾನಕ್ಕಾಗಿ ನಿನ್ನೆ ದೆಹಲಿಯಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದು ವಿಧಾನಸೌಧದ ಮುಂಭಾಗದಲ್ಲಿ ನಾಗರಿಕರ ಸಮಸ್ಯೆಗಳನ್ನು ಖುದ್ದು ತಾವೇ ಆಲಿಸಿ, ಕೆಲವನ್ನು ಸ್ಥಳದಲ್ಲೇ ವಿಲೇವಾರಿ ಮಾಡಿ, ಉಳಿದವನ್ನು 15 ದಿನದೊಳಗೆ ಪರಿಹರಿಸುವ ಭರವಸೆ ನೀಡಿ ಬೀಳ್ಕೊಟ್ಟರು.
ದೂರುಗಳನ್ನು ದೊರೆ ಮುಂದೆ ತೋಡಿಕೊಂಡರು
ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ಉದ್ದೇಶದಿಂದ ಇಂದು ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಜನತಾ ದರ್ಶನ ಕಾರ್ಯಕ್ರಮಕ್ಕೆ ಚಾಮರಾಜನಗರದಿಂದ ಹಿಡಿದು ಬೀದರ್‌ವರೆಗೆ ರಾಜ್ಯ ವಿವಿಧ ಮೂಲೆಗಳಿಂದ ಸಹಸ್ರಾರು ಮಂದಿ ಆಗಮಿಸಿ ತಮ್ಮ ದೂರುಗಳನ್ನು ದೊರೆ ಮುಂದೆ ತೋಡಿಕೊಂಡರು.
ನೊಂದವರ ಬೇಡಿಕೆಗಳನ್ನು ತಾವು ಆಲಿಸಿದ್ದಲ್ಲದೆ, ಇಲಾಖಾ ಪ್ರಧಾನಕಾರ್ಯದರ್ಶಿಗಳ ಮೂಲಕ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುವ, ಸಾಧ್ಯವಾಗದಿದ್ದರೆ ಎರಡು ವಾರಗಳ ಗಡುವು ನೀಡಿ ಪರಿಹರಿಸಲು ವ್ಯವಸ್ಥೆ ಮಾಡಿದರು. ಕಂದಾಯ ಇಲಾಖೆ ಮತ್ತು ಆರೋಗ್ಯ ಇಲಾಖೆಗಳ ಸಮಸ್ಯೆಗಳನ್ನು ಹೊತ್ತು ತಂದವರೇ ಹೆಚ್ಚಾಗಿದ್ದರು.
ಪಂಚಾಯತ್, ಸ್ಥಳೀಯ ರೆವಿನ್ಯೂ ಸೆಕ್ರೆಟರಿ, ಪಿಡಿಒ, ತಹಸೀಲ್ದಾರ್‌ಗಳು ಬಗೆಹರಿಸಬಹುದಾದಂತಹ ಸಣ್ಣ-ಪುಟ್ಟ ಸಮಸ್ಯೆಗಳನ್ನು ಪರಿಹರಿಸದಿರುವುದು ಈ ಜನಸ್ಪಂದನ ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತಿತ್ತು.
ಸೌಧದ ಮುಂದೆ ತಾತ್ಕಾಲಿಕ ಕಚೇರಿ
ಅಹವಾಲು ನೀಡಲು ಬಂದ ನಾಗರಿಕರಿಗೆ ಎಲ್ಲಿಯೂ ತೊಂದರೆಯಾಗದಂತೆ ಸೌಧದ ಮುಂದೆ ತಾತ್ಕಾಲಿಕ ಕಚೇರಿಗಳನ್ನು ತೆರೆಯಲಾಗಿತ್ತು.
ಅಧಿಕಾರಿ ಸಿಬ್ಬಂದಿ ಕೂಡ, ಅಹವಾಲುಗಳನ್ನು ನೋಂದಣಿ ಮಾಡಿಕೊಂಡು ಪರಿಹಾರಕ್ಕೆ ಸ್ಥಳದಲ್ಲೇ ಚಾಲನೆ ಕೊಟ್ಟರು.
ಬೆಳಗ್ಗೆಯಿಂದ ಸಂಜೆವರೆಗೆ ನಡೆದ ಈ ಕಾರ್ಯಕ್ರಮದ ಪೂರ್ಣ ಉಸ್ತುವಾರಿ ಮುಖ್ಯಮಂತ್ರಿ ಸುಪರ್ದಿಯಲ್ಲೇ ನಡೆಯಿತು, ಯಾವ ಅಧಿಕಾರಿಯೂ ಸ್ಥಳ ಬಿಟ್ಟು ಕದಲಲಿಲ್ಲ. ದೊರೆಯಿಂದ ಪರಿಹಾರ ಕಂಡುಕೊಳ್ಳಲು ಕೆಲವರು ಬುಧವಾರ ರಾತ್ರಿಯಿಂದಲೇ ವಿಧಾನಸೌಧದ ಬಳಿ ಸಾಲುಗಟ್ಟಿದ್ದರು.
ಒಂದೆರಡು ಗಂಟೆಗಳಲ್ಲೇ ಪರಿಹಾರ
ಪ್ರವಾಹೋಪಾದಿಯಲ್ಲಿ ನಾಗರಿಕರು ಬಂದರೂ, ವಿಶಾಲವಾದ ಆವರಣದಲ್ಲಿ ಅವರಿಗೆ ಒಂದೆರಡು ಗಂಟೆಗಳಲ್ಲೇ ಅರ್ಜಿ ಸ್ವೀಕರಿಸಿ, ಅವುಗಳಿಗೆ ಪರಿಹಾರ ಸೂಚಿಸುತ್ತಿದ್ದರು.
ಈ ಸಂದರ್ಭದಲ್ಲಿ ಪರಿಹಾರಾಕಾಂಕ್ಷಿಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ನಿಮ್ಮ ಅರ್ಜಿಗಳಿಗೆ ಸರ್ಕಾರ ೧೫ ದಿನದಲ್ಲಿ ಸ್ಪಂದಿಸಿ ನಿಮಗೆ ಅದರ ಪ್ರತಿಫಲ ದೊರಕಿಸಲಾಗುವುದು ಎಂದರು.
ಕಾನೂನಾತ್ಮಕ ಅಡೆಚಣೆಗಳಿರುವ ಅರ್ಜಿಗಳ ವಿಲೇವಾರಿಗೆ ಎರಡು-ಮೂರು ತಿಂಗಳು ಬೇಕಾಗುತ್ತದೆ. ಒಂದು ವೇಳೆ ಕಾನೂನು ಚೌಕಟ್ಟಿನಿಂದ ಹೊರಗಿರುವ ಅರ್ಜಿಗಳಿಗೆ ಪರಿಹಾರ ಅಸಾಧ್ಯ. ನಾಡ, ತಹಸೀಲ್ದಾರ್, ಪಂಚಾಯತ್ ಕಚೇರಿಗಳಿಗೆ ನೀವು ಅಲೆದಲೆದು ಪರಿಹಾರ ಕಾಣದೆ ಇಲ್ಲಿಗೆ ಬಂದಿದ್ದೀರಿ, ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲೆಂದೇ ಈ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ಶಕ್ತಿಸೌಧದ ಅಧಿಕಾರಿಗಳು ಆದೇಶ ಹೊರಡಿಸುತ್ತಾರೆ
ನಿಮ್ಮ ಅರ್ಜಿಗಳಿಗೆ ನಿಗದಿತ ಸಮಯದೊಳಗೇ ಪರಿಹಾರ ಕಾಣಬೇಕು ಅದರ ಫಲಿತಾಂಶ ನಿಮ್ಮ ಮನೆಗೆ ತಲುಪಬೇಕು ಎಂದು ಶಕ್ತಿಸೌಧದ ಅಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆದೇಶ ಹೊರಡಿಸುತ್ತಾರೆ. ಕಂದಾಯ ಮತ್ತು ನಗರಪಾಲಿಕೆಗಳ ಸಮಸ್ಯೆಗಳೇ ಹೆಚ್ಚು ಕಾಣುತ್ತಿವೆ, ಆ ಇಲಾಖೆ ಅಧಿಕಾರಿಗಳು ಚಳಿಬಿಟ್ಟು ಕೆಲಸ ಮಾಡಬೇಕು, ಅವರುಗಳು ಅಲ್ಲೇ ಸಮಸ್ಯೆ ಪರಿಹರಿಸಿದ್ದರೆ ನೀವು ನಮ್ಮವರೆಗೂ ಬರಬೇಕಿರಲಿಲ್ಲ.
ಜಡ್ಡುಗಟ್ಟಿದ ಅಧಿಕಾರಿಗಳಿಗೆ ಚಾಟಿ ಬೀಸಲೆಂದೇ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಇತಿಹಾಸದಲ್ಲೇ ವಿಧಾನಸೌಧದ ಎದುರಿನಲ್ಲಿ ನಿಮ್ಮನ್ನ ಕರೆಸಿ, ಸಮಸ್ಯೆ ಆಲಿಸಿ, ಬಗೆಹರಿಸುವ ಕೆಲಸ ಮಾಡಿದ್ದೇನೆ, ಮುಂದೆಯೂ ಮಾಡುತ್ತೇನೆ ಎಂದರು.
ತಾವು ನೀಡಿರುವ ಗ್ಯಾರಂಟಿಗಳ ಬಗ್ಗೆ ಪ್ರಸ್ತಾಪಿಸಿದ ಮುಖ್ಯಮಂತ್ರಿ ಅವರು, ಬಡವರು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಈ ಕಾರ್ಯಕ್ರಮಗಳನ್ನು ತಂದಿದ್ದೇನೆ, ಆದರೆ, ಇದಕ್ಕೆ ವಿರೋಧ ಪಕ್ಷದವರು ಕುಹಕವಾಡುತ್ತಾರೆ.
ದಾಖಲೆ ಸಮೇತ ಅರ್ಜಿ ನೀಡಿ ಪರಿಹಾರ ಪಡೆದುಕೊಳ್ಳಿ
ನಿಮಗೆ, ನಮ್ಮ ಕಾರ್ಯಕ್ರಮಗಳು ದೊರೆತಿಲ್ಲ ಎಂದಾದರೆ, ಅರ್ಹತೆ ಇರುವವರು ದಾಖಲೆ ಸಮೇತ ಅರ್ಜಿ ನೀಡಿ ಪರಿಹಾರ ಪಡೆದುಕೊಳ್ಳಿ ಎಂದು ನಾಗರಿಕರಿಗೆ ಸಲಹೆ ಮಾಡಿದರು.
ಜನರ ಬಳಿಗೆ ಸರ್ಕಾರ ಹೋಗಬೇಕು ಎಂಬುದು ನಮ್ಮ ಉದ್ದೇಶ, ಅಧಿಕಾರಕ್ಕೆ ಬಂದು ಎಂಟು ತಿಂಗಳಲ್ಲಿ ಎಲ್ಲ ಗ್ಯಾರಂಟಿ ಜಾರಿ ಮಾಡಿದ್ದೇವೆ. ಗ್ಯಾರಂಟಿಗಳು ಜಾರಿ ಆಗುವುದಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದರು, ನಾವು ಕೊಟ್ಟ ಮಾತಿನಂತೆ ಗ್ಯಾರಂಟಿ ಜಾರಿ ಮಾಡಿದ್ದೇವೆ.
ಸಮಾಜದಲ್ಲಿ ನೆಮ್ಮದಿ, ಶಾಂತಿ ಇರಬೇಕು, ಸಮ ಸಮಾಜ ನಿರ್ಮಾಣ ಆಗಬೇಕು, ಕಾನೂನು ಸುವ್ಯವಸ್ಥೆ ಇದ್ದರೆ ಬಂಡವಾಳ ಹರಿದು ಬರುತ್ತದೆ, ಇದರಿಂದ ರಾಜ್ಯದ ಅಭಿವೃದ್ಧಿ ಆಗುತ್ತದೆ.
ಬಿಜೆಪಿ ಅಪಪ್ರಚಾರ
ಬಿಜೆಪಿ ಅಪಪ್ರಚಾರ ಮಾಡಿ ಜನರ ದಾರಿ ತಪ್ಪಿಸುತ್ತಿದೆ, ಅಧಿಕಾರದಲ್ಲಿ ಇದ್ದಾಗ ಯಾವುದೇ ಕೆಲಸ ಮಾಡಲಿಲ್ಲ. ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ.
ಕನ್ನಡಿಗರ ಹಿತ ಕಾಯುವುದು ನಮ್ಮ ಕೆಲಸ. ಇದಕ್ಕಾಗಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಜನರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಕೊಡಲು ಪ್ರಯತ್ನ ನಡೆಸುತ್ತೇವೆ.
ಇಂದು ರಾಜ್ಯ ಮಟ್ಟದ ಎರಡನೇ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮೊದಲ ಕಾರ್ಯಕ್ರಮ ಕಳೆದ ನವೆಂಬರ್ ೨೭ರಂದು ನಡೆದಿತ್ತು. ಆಗ ಐದು ಸಾವಿರ ಅರ್ಜಿಗಳು ಬಂದಿದ್ದವು. ಶೇ.೯೮ರಷ್ಟು ಅರ್ಜಿಗಳ ವಿಲೇವಾರಿ ಮಾಡಲಾಗಿದೆ. ಸಮಸ್ಯೆಗಳಿಗೆ ಪರಿಹಾರ ನೀಡಲಾಗಿದೆ. ಬಾಕಿ ಇರುವ ಅರ್ಜಿಗಳು ಕೆಲವೇ ದಿನಗಳಲ್ಲಿ ಇತ್ಯರ್ಥವಾಗಲಿವೆ ಎಂದರು.