ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆಗೆ ಜಂಟಿ ಪ್ರಚಾರ
ಬೆಂಗಳೂರು:ಬಿಜೆಪಿ-ಜೆಡಿಎಸ್ ಒಂದಾಗಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಗೂ ಮೈತ್ರಿ ಮತ್ತಷ್ಟು ಗಟ್ಟಿ ಆಗಲಿದೆ ಎಂಬುದನ್ನು ಉಭಯ ಪಕ್ಷದ ನಾಯಕರು ಇಂದಿಲ್ಲಿ ಸಾಬೀತುಪಡಿಸಿದರು.
ಮಾಜಿ ಮುಖ್ಯಮಂತ್ರಿ ಡಿ.ಬಿ. ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವ ಡಾ.ಅಶ್ವಥ್‌ನಾರಾಯಣ, ಕೆ.ಗೋಪಾಲಯ್ಯ, ಮೈತ್ರಿಕೂಟದಿಂದ ಕಣಕ್ಕಿಳಿದಿರುವ ಜೆಡಿಎಸ್ ಅಭ್ಯರ್ಥಿ ಎ.ಪಿ. ರಂಗನಾಥ್ ಪರವಾಗಿ ಇಂದಿಲ್ಲಿ ಬಿರುಸಿನ ಮತಯಾಚನೆ ಮಾಡಿದರು.
ಎನ್‌ಡಿಎ ಅಭ್ಯರ್ಥಿ ರಂಗನಾಥ್
ನಗರ ಹಾಗೂ ಗ್ರಾಮಾಂತರ ಪ್ರದೇಶದ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಿಗೆ ತೆರಳಿ ಎನ್‌ಡಿಎ ಅಭ್ಯರ್ಥಿ ರಂಗನಾಥ್ ಅವರಿಗೆ ಮೊದಲ ಪ್ರಾಶಸ್ತ್ಯ ಮತ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯೇಂದ್ರ, ಉಪಚುನಾವಣೆಗೆ ಕಾರಣರಾದವನ್ನು ಕೈಬಿಟ್ಟು ಮೈತ್ರಿಕೂಟದ ಅಭ್ಯರ್ಥಿ ರಂಗನಾಥ್ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಆಡಳಿತಾವಧಿಯಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಶಿಕ್ಷಣ ಕ್ಷೇತ್ರಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ, ಇಂತಹ ಪವಿತ್ರ ಕ್ಷೇತ್ರಕ್ಕೆ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕರ್ತವ್ಯ ನಿಮ್ಮದು.
ನಾವು ಅಂತಹ ಯೋಗ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ, ಅವರಿಗೆ ತಮ್ಮ ಅಮೂಲ್ಯ ಮತ ನೀಡಿ ಉಪಚುನಾವಣೆಗೆ ಕಾರಣರಾದವರನ್ನು ಸೋಲಿಸಿ ಎಂದರು.
ಯಾರನ್ನೂ ಸೋಲಿಸಲು ಹೋಗುತ್ತಿಲ್ಲ
ಚುನಾವಣೆಯಲ್ಲಿ ನಾವು ಯಾರನ್ನೂ ಸೋಲಿಸಲು ಹೋಗುತ್ತಿಲ್ಲ, ಕ್ರಿಯಾಶೀಲ ರಾಜಕಾರಣಿ, ಅದಕ್ಕೂ ಹೆಚ್ಚಾಗಿ ಸಮಾಜದಲ್ಲಿ ತಮ್ಮದೇ ಆದ ಸೇವೆ ಮಾಡುತ್ತಿರುವ ನ್ಯಾಯವಾದಿ ರಂಗನಾಥ್ ಅವರನ್ನು ಬೆಂಬಲಿಸಿ ಎಂದರು.
ಉಪಚುನಾವಣೆಗೆ ಕಾರಣಾರದವರು ಎಷ್ಟು ಪಕ್ಷಗಳನ್ನು ಬದಲಿಸಿದ್ದಾರೆ, ಅವರು ವಿಧಾನ ಪರಿಷತ್ತಿನಲ್ಲಿ ನಿಮ್ಮ ಪ್ರತಿನಿಧಿಯಾಗಿದ್ದಾಗ ನೀಡಿದ್ದ ಕೊಡುಗೆ ಅಷ್ಟಕ್ಕಷ್ಟೆ.
ನೀವು ಪ್ರಜ್ಞಾವಂತ ಮತದಾರರು, ನಾವು ನಿಮಗೆ ಹೆಚ್ಚು ಹೇಳುವಂತದ್ದೇನಿಲ್ಲ, ನಿಮ್ಮ ಜೊತೆ ಸದಾಕಾಲ ಇರುವ ರಂಗನಾಥ್ ಅವರಿಗೆ ಮತ ನೀಡಿ ಎಂದರು.