ಬೆಂಗಳೂರು: ಪಡಿತರ ಚೀಟಿಗಳಿಗಾಗಿ ಬಾಕಿ ಇರುವ ಅರ್ಜಿಗಳನ್ನು ಮಾರ್ಚ್ 31 ರೊಳಗಾಗಿ ಇತ್ಯರ್ಥಗೊಳಿಸಿ, ಏಪ್ರಿಲ್ 1 ರಿಂದ ಬಿಪಿಎಲ್, ಎಪಿಎಲ್ ಕಾರ್ಡ್‌ಗಳಿಗೆ ಹೊಸದಾಗಿ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ವಿಧಾನಸಭೆಗಿಂದು ತಿಳಿಸಿದ್ದಾರೆ.
ನಯನಾ ಮೋಟಮ್ಮ ಮತ್ತು ಯಶಪಾಲ್ ಸುವರ್ಣ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಹೊಸ ಆದ್ಯತಾ ಪಡಿತರ ಚೀಟಿ ವಿಲೇವಾರಿ ಕಾರ್ಯ ಪ್ರಗತಿಯಲ್ಲಿದೆ, ಈವರೆಗೆ 57,651 ಹಾಗೂ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ 744 ಕಾರ್ಡ್‌ಗಳನ್ನು ವಿತರಿಸಲಾಗಿದೆ, ಬಾಕಿ ಇರುವ ಉಳಿದ ಹೊಸ ಆದ್ಯತಾ ಪಡಿತರ ಚೀಟಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಲು ಜಂಟಿ ಹಾಗೂ ಉಪನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ ಎಂದರು.
ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಹೊಸದಾಗಿ ಆದ್ಯತಾ ಪಡಿತರ ಚೀಟಿ ಕೋರಿ ತಹಸೀಲ್ದಾರ್ ಶಿಫಾರಸ್ಸು, ವರದಿ ಆಧರಿಸಿ ಆದ್ಯತೆ ಮೇರೆಗೆ ಕಾರ್ಡ್ ಒದಗಿಸಲಾಗುತ್ತಿದೆ, ಏಪ್ರಿಲ್ ಒಂದರಿಂದ ಹೊಸ ಆದ್ಯತಾ ಪಡಿತರ ಚೀಟಿಗೆ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದರು.
