ಗ್ಯಾರಂಟಿಯಲ್ಲಿ ಕೊಟ್ಟು ಹತ್ತು ಕೈಗಳಲ್ಲಿ ಆ ಹಣವನ್ನು ಕಿತ್ತುಕೊಳ್ಳುತ್ತಿದೆ
ಬೆಂಗಳೂರು: ಒಂದು ಕೈಯ್ಯಲ್ಲಿ ಗ್ಯಾರಂಟಿಗಳನ್ನು ಕೊಟ್ಟು ಜನರನ್ನು ಬಡತನದಿಂದ ಮಧ್ಯಮ ವರ್ಗಕ್ಕೆ ತಂದಿದ್ದೇವೆ ಎನ್ನುವ ರಾಜ್ಯ ಸರ್ಕಾರ, ಹಾಗೆ ಕೊಟ್ಟು ಹತ್ತು ಕೈಗಳಲ್ಲಿ ಹೀಗೆ ಆ ಹಣವನ್ನು ಕಿತ್ತುಕೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪಿಸಿದರು.
ಇದು ರಾಜ್ಯವನ್ನು ವಿನಾಶದ ಅಂಚಿಗೆ ತಳ್ಳುತ್ತಿರುವ ʼಸಿದ್ದನಾಮಿಕ್ಸ್ʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಐದು ಗ್ಯಾರಂಟಿಗಳ ಮೂಲಕ ಜನರ ಆರ್ಥಿಕ ಶಕ್ತಿ, ಕೊಳ್ಳುವ ಶಕ್ತಿ ಹೆಚ್ಚಿದೆ ಎನ್ನುವ ಸರ್ಕಾರ, ಮುದ್ರಾಂಕ ಶುಲ್ಕವನ್ನು ಐದು ಪಟ್ಟು ಹೆಚ್ಚಿಸಿದೆ.
ಮಾರ್ಗಸೂಚಿದರ (ಗೈಡ್ಲೆನ್ಸ್ ವ್ಯಾಲ್ಯೂ) ಆಸ್ತಿ ದರಕ್ಕಿಂತ ಹೆಚ್ಚಾಗಿದೆ. ಅಬ್ಕಾರಿ ಸುಂಕ ಏರುತ್ತಲೇ ಇದೆ. ಒಂದು ಕೈಯ್ಯಲ್ಲಿ ಗ್ಯಾರಂಟಿ ಅಂತ ಕೊಟ್ಟು ಹತ್ತು ಕೈಗಳಲ್ಲಿ ತೆರಿಗೆ ಹೇರುವ ನೀತಿ ಆರ್ಥಿಕತೆಗೆ ಅದ್ಯಾವ ಸೀಮೆಯ ಉತ್ತೇಜನ ನೀಡುತ್ತದೆ? ಎಂದು ಅವರು ಪ್ರಶ್ನೆ ಮಾಡಿದರು.
ನಾನು ಹಿಂದೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ʼಮನಮೋಹನಾಮಿಕ್ಸ್ʼ ಬಗ್ಗೆ ಕೆಳಿದ್ದೇನೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರ ʼಮೋದಿನಾಮಿಕ್ಸ್ʼ ಬಗ್ಗೆ ತಿಳಿದಿದ್ದೇನೆ. ಜಪಾನ್ ಮಾಜಿ ಪ್ರಧಾನಿ ದಿವಂಗತ ಶಿಂಜೋ ಅಬೆ ಅವರ ʼಅಬೆನಾಮಿಕ್ಸ್ʼ ಬಗ್ಗೆಯೂ ತಿಳಿದುಕೊಂಡಿದ್ದೇನೆ. ರಾಜ್ಯದಲ್ಲಿ ಗ್ಯಾರಂಟಿ ಕೊಟ್ಟಂಗೆ ಕೊಟ್ಟು ತೆರಿಗೆ ವಿಧಿಸಿ ಜನರ ರಕ್ತ ಹೀರುತ್ತಿರುವ ʼಸಿದ್ದನಾಮಿಕ್ಸ್ʼ ಎಂಬ ಅನಾಹುತಕಾರಿ, ವಿನಾಶಕಾರಿ, ಜನವಿರೋಧಿ, ನಾಡದ್ರೋಹಿ ಆರ್ಥಿಕತೆಯನ್ನು ನಾನು ನೋಡುತ್ತಿದ್ದೇನೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡಿಗೆ ಈಗಲೂ ಕಾವೇರಿ ನೀರು ಹರಿದು ಹೋಗುತ್ತಿದೆ
ಈಗ ನನ್ನ ತೆರಿಗೆ ನನ್ನ ಹಕ್ಕು ಎನ್ನುತ್ತಿದೆ ಸರ್ಕಾರ. ಹಿಂದೆ ನನ್ನ ನೀರು ನನ್ನ ಹಕ್ಕು ಎಂದರು. ತಮಿಳುನಾಡಿಗೆ ಈಗಲೂ ಕಾವೇರಿ ನೀರು ಹರಿದು ಹೋಗುತ್ತಿದೆ. ಮೇಕೆದಾಟು ಎಲ್ಲಿದೆಯೋ ಅಲ್ಲೇ ಇದೆ. ಚಿನ್ನದ ಮೊಟ್ಟೆ ಇಡುವ ಕೋಳಿಯ ಕತ್ತು ಕತ್ತರಿಸುತ್ತಿದೆ ಕೇಂದ್ರ ಸರ್ಕಾರ ಎಂದು ಸಿದ್ದರಾಮಯ್ಯ ಅವರು ಆರೋಪ ಮಾಡುತ್ತಿದ್ದಾರೆ. ಆದರೆ, ಮುದ್ರಾಂಕ ಶುಲ್ಕ, ಗೈಡ್ಲೆನ್ಸ್ ವ್ಯಾಲ್ಯೂ, ಅಬ್ಕಾರಿ ಸುಂಕ ಸೇರಿ ರಾಜ್ಯದಲ್ಲಿ ತೆರಿಗೆಗಳನ್ನೆಲ್ಲಾ ಹೆಚ್ಚಿಸಲಾಗಿದೆ ಎಂದು ದೂರಿದರು
ರಾಜ್ಯದಲ್ಲಿ ತೀವ್ರ ಬರ ಇದೆ. ಗ್ಯಾರಂಟಿಗಳಿಗೆ ಹಣ ಇಲ್ಲಾ ಎನ್ನುತ್ತಾರೆ. ಆದರೂ 74 ಶಾಸಕರು ಸೇರಿ 90 ಜನರಿಗೆ ಸಂಪುಟ ದರ್ಜೆ ಭಾಗ್ಯ ನೀಡಿ ಜನರ ತೆರಿಗೆ ಪೋಲು ಮಾಡಲಾಗುತ್ತಿದೆ. ಈ ಪೈಕಿ ಮುಖ್ಯಮಂತ್ರಿ ಕಚೇರಿಯಲ್ಲೇ 9 ಜನಕ್ಕೆ ಸಂಪುಟ ಭಾಗ್ಯ ನೀಡಲಾಗಿದೆ. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೂ (KSFC) ಅಧ್ಯಕ್ಷರನ್ನಾಗಿ ಶಾಸಕರನ್ನು ನೇಮಕ ಮಾಡಿದ್ದಾರೆ. ಇದಕ್ಕಿಂತ ಸೋಜಿಗಾ ಉಂಟಾ ಎಂದು ಅವರು ಪ್ರಶ್ನಿಸಿದರು.
ಸದನದಲ್ಲಿ ಸಿಎಜಿ ವರದಿ ಮಂಡನೆ ಆಗಿದೆ. 47 ವರ್ಷವಾದರೂ ತನ್ನದೇ ಅಧೀನದಲ್ಲಿರುವ ನಿಗಮ, ಮಂಡಳಿ, ಸಂಘ-ಸಂಸ್ಥೆಗಳಿಗೆ ಕೊಟ್ಟಿರುವ ಸಾಲ ಸೇರಿ ಬಡ್ಡಿಯೊಂದಿಗೆ 15,856 ಕೋಟಿ ರೂ. ವಸೂಲಿ ಆಗಬೇಕಿದೆ. ಆದರೆ, ಅದೇ ನಿಗಮ -ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಅವುಗಳನ್ನು ಮತ್ತಷ್ಟು ನಷ್ಟದ ಕೂಪಕ್ಕೆ ತಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಮೇಕೆದಾಟು ಯೋಜನೆ ನಿಂತಲ್ಲೆ ನಿಂತಿದೆ
ಬ್ರ್ಯಾಂಡ್ ಬೆಂಗಳೂರು ಎನ್ನುತ್ತಿದ್ದಾರೆ. ಸಂಗಮದಿಂದ ಮೇಕೆದಾಟು ಪಾದಾಯಾತ್ರೆ ಮಾಡಿದ್ದನ್ನೂ ನೋಡಿದ್ದೇವೆ. ಆ ಮೇಕೆದಾಟು ಕಳೆದ 8 ತಿಂಗಳಲ್ಲಿ ಎಲ್ಲಿ ಶುರುವಾಯಿತೋ ಈಗಲೂ ಅಲ್ಲಿಯೇ ನಿಂತಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಏನಾಯಿತು, ಎಲ್ಲಿಗೆ ಬಂತು? ಅಭಿವೃದ್ಧಿ ಯೋಜನೆಗಳಿಗೆ ಹಣ ಕೇಳಲೇಬೇಡಿ ಎನ್ನುವಂಥ ಪರಿಸ್ಥಿತಿ ಇದೆ ಎಂದರು.
ಕೇಂದ್ರ ಸರ್ಕಾರ ಮಾರುತ್ತಿರುವ ಭಾರತ್ ಅಕ್ಕಿ ಬಗ್ಗೆ ಆಹಾರ ಸಚಿವರು ನೀಡಿರುವ ಹೇಳಿಕೆಯನ್ನು ಗಮನಿಸಿದ್ದೇನೆ. ಕೇಂದ್ರ ಸರ್ಕಾರ ಭಾರತ್ ಅಕ್ಕಿಯನ್ನು ಕೆಜಿಗೆ 29 ರೂ.ನಂತೆ ಕೊಡುತ್ತಿರುವುದರಿಂದ ತನ್ನ ಖಜಾನೆಯನ್ನು ಖಾಲಿ ಮಾಡುತ್ತಿದೆ. ಆದರೆ, ಇವರು ಕೆಜಿ ಅಕ್ಕಿಗೆ 34 ರೂಪಾಯಿಯನ್ನು ಬಿಪಿಎಲ್ ಕಾರ್ಡುದಾರರ ಖಾತೆಗೆ ಜಮೆ ಮಾಡುತ್ತಿದ್ದಾರೆ. ಅದು ನಿಯಮಿತವಾಗಿ ಜಮೆಯೂ ಆಗುತ್ತಿಲ್ಲ. ಹಾಗಾದರೆ, ರಾಜ್ಯದ ಪರಿಸ್ಥಿತಿ ಏನಾಗಬೇಡ? ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಅವರಿಗೆ ಟಾಂಗ್ ಕೊಟ್ಟರು ಕುಮಾರಸ್ವಾಮಿ.
ನಾವು ನುಡಿದಂತೆ ನಡೆದಿದ್ದೇವೆ ಎಂದು ಹೇಳಿದ್ದನ್ನೇ ಹೇಳುತ್ತಿದೆ ಸರ್ಕಾರ. ವಿಧಾನಸೌಧದ ಪೂರ್ವದ್ವಾರದಲ್ಲಿ ಕೆಂಗಲ್ ಹನುಮಂತಯ್ಯನವರು ʼಸರ್ಕಾರದ ಕೆಲಸ ದೇವರ ಕೆಲಸʼ ಎಂದು ಬರೆಸಿದ್ದಾರೆ. ನೀವು ʼನುಡಿದಂತೆ ನಡೆದಿದ್ದೇವೆʼ ಎಂದು ಬರೆಸಬಹುದು. ಅದೂ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಗೇಲಿ ಮಾಡಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಸಾಮರಸ್ಯ ಇರಬೇಕು
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಸಾಮರಸ್ಯ ಇರಬೇಕು. ಪ್ರಧಾನಿಗಳು ಮತ್ತು ಮುಖ್ಯಮಂತ್ರಿಗಳ ನಡುವೆ ಉತ್ತಮ ಬಾಂಧವ್ಯ ಇರಬೇಕು. ಇಂಥ ಸತ್ ಸಂಪ್ರದಾಯಕ್ಕೆ ನಾನೇ ಉದಾಹರಣೆ ಎಂದು ಕುಮಾರಸ್ವಾಮಿ ಹೇಳಿದರು.
ನಾನು ಎರಡು ಸಲ ಮುಖ್ಯಮಂತ್ರಿ ಆಗಿದ್ದೆ. ಈ ರಾಜ್ಯದ ಆಕಸ್ಮಿಕ ಮುಖ್ಯಮಂತ್ರಿ ನಾನು. ಕೆಲವರು ಲಾಟರಿ ಮುಖ್ಯಮಂತ್ರಿ ಅಂತಲೂ ಕರೆಯುತ್ತಾರೆ. ನನಗೇನೂ ಬೇಜಾರಿಲ್ಲ. ಡಾ.ಮನಮೋಹನ್ ಸಿಂಗ್, ನರೇಂದ್ರ ಮೋದಿ ಪ್ರಧಾನಿ ಆಗಿದ್ದರು. ಈಗಲೂ ಮೋದಿ ಅವರೇ ಪ್ರಧಾನಿ ಆಗಿದ್ದಾರೆ. ನಾನೆಲ್ಲೂ ಸಂಘರ್ಷಕ್ಕೆ ಅವಕಾಶ ಕೊಡಲಿಲ್ಲ. ಕೇಂದ್ರ ಸರ್ಕಾರ, ಕೇಂದ್ರ ಸಚಿವರು, ಪ್ರಧಾನಿಗಳ ಜತೆ ನನಗೆ ಯಾವ ಸಮಸ್ಯೆಯೂ ಆಗಲಿಲ್ಲ ಎಂದು ಅವರು ತಿಳಿಸಿದರು.
2018ರಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ರಕ್ಷಣಾ ಇಲಾಖೆಯ ವಶದಲ್ಲಿದ್ದ ಭೂಮಿಯ ಅಗತ್ಯತೆ ಇತ್ತು. ಈ ಬಗ್ಗೆ ಅಂದು ರಕ್ಷಣಾ ಮಂತ್ರಿಗಳಾಗಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದೆ. ಆಗ ಅವರು ವಿಧಾನಸೌಧಕ್ಕೆ ಬಂದು ರಾಜ್ಯದ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು.
ಅದರಂತೆ, ರಕ್ಷಣಾ ಸಚಿವರು ವಿಧಾನಸೌಧಕ್ಕೆ ಬಂದರು. ನಾನು ಕೆಂಗಲ್ ಗೇಟಿಗೆ ಹೋಗಿ ಅವರನ್ನು ಬರ ಮಾಡಿಕೊಂಡೆ. ಅಧಿಕಾರಿಗಳು, ಕೆಂಗಲ್ ಗೇಟಿಗೆ ಹೋಗಿ ಕೇಂದ್ರ ಸಚಿವರನ್ನು ಮುಖ್ಯಮಂತ್ರಿಗಳು ಸ್ವಾಗತಿಸುವ ʼಶಿಷ್ಟಾಚಾರʼ ಇಲ್ಲ ಎಂದರು. ”ನನಗೆ ಶಿಷ್ಟಾಚಾರ ಮುಖ್ಯವಲ್ಲ. ರಾಜ್ಯದ ಹಿತ ಮುಖ್ಯ” ಎಂದು ಹೇಳಿದೆ. ಅಂದು ರಾಜ್ಯಕ್ಕೆ, ಅದರಲ್ಲಿಯೂ ಬೆಂಗಳೂರು ನಗರಕ್ಕೆ ಒಳ್ಳೆಯದಾಗುವ ಅನೇಕ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಇದು ನಾನು ಕರ್ತವ್ಯ ನಿರ್ವಹಿಸಿದ ರೀತಿ ಎಂದು ಕುಮಾರಸ್ವಾಮಿ ಸರ್ಕಾರದ ಮೇಲೆ ಚಾಟಿ ಬೀಸಿದರು
ಕೆ.ಎಂ.ಮುನಿಯಪ್ಪರನ್ನು ಸ್ಮರಿಸಿದ ಹೆಚ್ಡಿಕೆ
ಹಿಂದೆ ಕೆ.ಎಂ.ಮುನಿಯಪ್ಪ ಅಂತ ಇದ್ದರು. ಮಾಜಿಪ್ರಧಾನಿ ದೇವೇಗೌಡರಿಗೆ ಆಪ್ತರು. ಮೂಲತಃ ಚಿಕ್ಕಬಳ್ಳಾಪುರದವರು. ರೇಷ್ಮೆ ಸಚಿವರಾಗಿ ಕೆಲಸ ಮಾಡಿದ್ದರು. ಅಲ್ಲದೆ, ಚಿಕ್ಕಬಳ್ಳಾಪುರದಲ್ಲಿ ಅವರು ಪತ್ರಿಕೆಯ ವರದಿಗಾರರಾಗಿದ್ದರು. ಮಂತ್ರಿಯಾದರೂ ವರದಿಗಾರಿಕೆ ಬಿಟ್ಟಿರಲಿಲ್ಲ. ಪೇಪರ್ ಮುನಿಯಪ್ಪ ಎಂದೇ ಅವರು ಖ್ಯಾತಿಯಾಗಿದ್ದರು. ಅವರು ತಮ್ಮ ಕ್ಷೇತ್ರದ ಕೆಲಸಗಳು ಆಗಬೇಕಾದರೆ ಟಿಪ್ಪಣಿ ಬರೆದು, ಅರ್ಜಿ ಗುರಾಯಿಸಿ ಸುಮ್ಮನೆ ಕೂರುತ್ತಿರಲಿಲ್ಲ. ಬದಲಿಗೆ ಅರ್ಜಿ ಹಿಡಿದುಕೊಂಡು ಮಂತ್ರಿಗಳ ಕಚೇರಿ, ಅಧಿಕಾರಿಗಳ ಕಚೇರಿಗಳಿಗೆ ಸ್ವತಃ ಹೋಗುತ್ತಿದ್ದರು. ಮಂತ್ರಿಗಳೇ ಬಂದರಲ್ಲ ಎಂದು ಇತರೆ ಮಂತ್ರಿಗಳು, ಅಧಿಕಾರಿಗಳು ಅವರ ಕೆಲಸ ಮಾಡಿಕೊಡುತ್ತಿದ್ದರು. ಮುನಿಯಪ್ಪ ಅಂಥವರು ನಮಗೆ ಮಾದರಿ, ಆದರ್ಶ ಎಂದು ಮುನಿಯಪ್ಪ ಅವರನ್ನು ಸದನದಲ್ಲಿ ಸ್ಮರಣೆ ಮಾಡಿದರು ಕುಮಾರಸ್ವಾಮಿ.