ಮುಸಲ್ಮಾನರಿಗೆ ಅನುದಾನ ನೀಡಬಾರದೇ?
ಮಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕುರಿತು ಈಗಾಗಲೇ ಮೂರ್ನಾಲ್ಕು ಬಾರಿ ಚರ್ಚೆ ಮಾಡಿದ್ದು, ಮತ್ತೊಂದು ಸುತ್ತಿನ ಸಮೀಕ್ಷೆ ನಡೆಯುತ್ತಿದೆ, ನಂತರ ತೀರ್ಮಾನ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಸಹೋದರ, ಸಂಸದ ಡಿ.ಕೆ.ಸುರೇಶ್ ವಿರುದ್ಧ ಎನ್‌ಡಿಎ ಅಭ್ಯರ್ಥಿಯಾಗಿ ಯಾರನ್ನಾದರೂ ನಿಲ್ಲಿಸಲಿ, ಮತದಾರರು ಪ್ರಜ್ಞಾವಂತರಾಗಿದ್ದು, ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ ಎಂದರು.
ಸುರೇಶ್ ದೆಹಲಿಯಲ್ಲಿ ಕೂರುವ ಸಂಸದರಲ್ಲ, ಹಳ್ಳಿಯಲ್ಲಿ ಕೂರುವ ಸಂಸದರು, ಆ ಭಾಗದಲ್ಲಿ ಕೆರೆಗಳು ತುಂಬಿ ಅಂತರ್ಜಲ ಹೆಚ್ಚಳವಾಗಿದ್ದರೆ, ಬಡವರಿಗೆ ಮನೆ, ನಿವೇಶನ ನೀಡಿದ್ದರೆ, ನರೇಗಾದಲ್ಲಿ ಹಣ ಬಂದಿದ್ದರೆ ಅದು ಅವರ ಕೊಡುಗೆ, ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ, ಅಸಾಧ್ಯ ಎಂಬುದಿಲ್ಲ.
ಕರಾವಳಿ ಭಾಗದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಜನ ಬದಲಾವಣೆ ಬಯಸಿದ್ದಾರೆ, ಇಲ್ಲಿನ ಯುವಜನರು ಶಿಕ್ಷಣ ಪಡೆದ ನಂತರ ಉದ್ಯೋಗಕ್ಕಾಗಿ ಬೆಂಗಳೂರು, ಮುಂಬೈ, ಸೌದಿಗೆ ಹೋಗುತ್ತಿದ್ದಾರೆ, ಬಿಜೆಪಿ ಅಭಿವೃದ್ಧಿ ವಿಚಾರ ಬಿಟ್ಟು ಭಾವನಾತ್ಮಕ ವಿಚಾರವನ್ನು ಮುಂದಿಡುತ್ತಿದೆ ಎಂದು ಟೀಕಿಸಿದರು.
ಮುಸಲ್ಮಾನರಿಗೆ ಬಜೆಟ್‌ನಲ್ಲಿ ಅನುದಾನ
ಮುಸಲ್ಮಾನರಿಗೆ ಬಜೆಟ್‌ನಲ್ಲಿ ಶೇ.1ರಷ್ಟು ಅನುದಾನ ನೀಡಬಾರದೇ, ಬಿಜೆಪಿಯವರು ರಾಜಕಾರಣಕ್ಕಾಗಿ ಟೀಕೆ ಮಾಡುತ್ತಾರೆ, ಬಜೆಟ್‌ನಲ್ಲಿ ಮೀನುಗಾರರಿಗೆ ಹಾಗೂ ಕರಾವಳಿಗೆ ಹೊಸ ನೀತಿ ತರಲು ಘೋಷಣೆ ಮಾಡಿದ್ದೇವೆ, ವ್ಯಾಪಾರ ವಹಿವಾಟು ನಡೆದಾಗ ಜನರಿಗೆ ಉದ್ಯೋಗ ದೊರೆಯುತ್ತದೆ.
ದೇವಾಲಯಗಳಲ್ಲಿ ಇರುವ ಭಕ್ತಿ ವ್ಯಾಪಾರ ವಹಿವಾಟಿನಲ್ಲೂ ಇರಬೇಕು, ಕರಾವಳಿಯ ಬ್ಯಾಂಕ್‌ಗಳನ್ನು ಉತ್ತರ ಭಾರತದ ಬ್ಯಾಂಕ್‌ಗಳ ಜತೆ ವಿಲೀನ ಮಾಡಲಾಗುತ್ತಿದೆ, ಈ ಬಗ್ಗೆ ನಾವು ಗಂಭೀರವಾಗಿ ಗಮನಹರಿಸಬೇಕಿದೆ.
ಜೊರೋಸಾ ಶಾಲೆ ವಿವಾದದಲ್ಲಿ ಶಾಸಕರ ವಿರುದ್ಧದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಪ್ರತಿಭಟನೆ ಮಾಡಲಿ, ಕಾನೂನು ತನ್ನ ಕೆಲಸ ಮಾಡುತ್ತದೆ, ಪೊಲೀಸರು ಅವರ ಕೆಲಸ ಮಾಡುತ್ತಾರೆ, ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.