ಸಚಿವರೂ, ಪಕ್ಷದ ಶಾಸಕರಿಗೆ ಸಿದ್ದರಾಮಯ್ಯ ಠರಾವು
ಬೆಂಗಳೂರು:ರಾಜ್ಯಸಭಾ ಚುನಾವಣೆ ಮುಗಿಯುತ್ತಿದ್ದಂತೆ ತಮ್ಮ ಜಿಲ್ಲೆ, ಕ್ಷೇತ್ರಗಳಿಗೆ ತೆರಳಿ, ರಾಜಧಾನಿ ಕಡೆ ಮುಖ ಮಾಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ, ಪಕ್ಷದ ಶಾಸಕರಿಗೆ ಕಟ್ಟಾಜ್ಞೆ ಮಾಡಿದ್ದಾರೆ.
ಇತ್ತೀಚೆಗೆ ನಡೆದ ಪಕ್ಷದ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆ ನಮಗೆ ಮತ್ತು ಪಕ್ಷಕ್ಕೆ ಪ್ರತಿಷ್ಠೆಯಾಗಿದೆ, ಕನಿಷ್ಠ 20 ಸ್ಥಾನಗಳನ್ನು ನಾವು ಗೆಲ್ಲಲೇಬೇಕು.
ಗುರಿ ಮುಟ್ಟಲು ಶಕ್ತಿ ಮೀರಿ ಶ್ರಮಿಸಿ
ಚುನಾವಣೆಗೆ ಇನ್ನು 100 ದಿನಗಳೂ ಉಳಿದಿಲ್ಲ, ಇರುವ ಅಲ್ಪ ಸಮಯದಲ್ಲೇ ನಮ್ಮ ಗುರಿ ಮುಟ್ಟಲು ಶಕ್ತಿ ಮೀರಿ ಶ್ರಮಿಸಬೇಕಾಗಿದೆ. ಕರ್ನಾಟಕದಲ್ಲಿ ನಾವೇ ಅಧಿಕಾರದಲ್ಲಿದ್ದರೂ ವಿಧಾನಸಭಾ ಚುನಾವಣೆಗೂ, ಲೋಕಸಭಾ ಚುನಾವಣೆಗೂ ಮತದಾನ ಮಾಡುವಾಗ ಮತದಾರರ ಮನಸ್ಥಿಯೇ ಬೇರೆ ಇರುತ್ತದೆ.
ನಾವು ಕಠಿಣ ಸ್ಥಿತಿಯಲ್ಲಿದ್ದೇವೆ, ನಿಮಗೆ ಇದರ ಅರಿವಿದೆಯೋ ಇಲ್ಲವೋ, ನಾವು ಹೆಚ್ಚು ಸ್ಥಾನ ಗಳಿಸಿದರೆ ನಮ್ಮ ಸರ್ಕಾರ ಗಟ್ಟಿಯಾಗುತ್ತದೆ. ಚುನಾವಣೆಯಲ್ಲಿ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಿದ್ದೇವೆ, ನಮ್ಮ ಗ್ಯಾರಂಟಿ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿ ಜನತೆಯೂ ಸಂತುಷ್ಟವಾಗಿದ್ದಾರೆ.
ಸ್ಥಳೀಯವಾಗಿ ಕೆಲಸ ಮಾಡಿ
ಹಾಗೆಂದು ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ, ಚುನಾವಣೆಯನ್ನೇ ಗುರಿಯಾಗಿಟ್ಟುಕೊಂಡು ಬೂತ್ ಮಟ್ಟದಿಂದ ಎಲ್ಲಾ ಹಂತದ ಕಾರ್ಯಕರ್ತರ ಮತ್ತು ಮುಖಂಡರ ಸಭೆ ನಡೆಸಿ, ಪಕ್ಷ ಸಂಘಟಿಸಿ ನಮ್ಮ ಗುರಿ ಮುಟ್ಟಬೇಕು. ನಮ್ಮ ಗುರಿ ಮುಟ್ಟಲು ನೀವು ಸ್ಥಳೀಯವಾಗಿ ಕೆಲಸ ಮಾಡಿ, ಬೆಂಗಳೂರು ಬಿಡಿ ಎಂದಿದ್ದಾರೆ.
ಬಜೆಟ್ ಅಧಿವೇಶನ ನಂತರ ಬರುವ ರಾಜ್ಯಸಭೆ ಚುನಾವಣೆ ಮುಗಿಯುತ್ತಿದ್ದಂತೆ ಸಚಿವರುಗಳು ತಮ್ಮ ತವರು ಜಿಲ್ಲೆಯಲ್ಲೇ ಉಳಿಯಬೇಕು, ಶಾಸಕರು ತಮ್ಮ ಕ್ಷೇತ್ರ ಬಿಟ್ಟು ಹೊರಬರಕೂಡದು.
ಪ್ರಸಕ್ತ ಸಾಲಿನ ಬಜೆಟ್ ಅಂಗೀಕಾರವಾಗುತ್ತಿದ್ದಂತೆ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡುತ್ತೇನೆ, ನೀವು ಕ್ಷೇತ್ರಗಳ ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೆತ್ತಿಕೊಂಡು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ.
ಮತ್ತೊಂದೆಡೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಜೊತೆ ಜೊತೆಯಲ್ಲೇ ನಮ್ಮ ಗ್ಯಾರಂಟಿ ಕಾರ್ಯಕ್ರಮಗಳ ಬಗ್ಗೆ ಪ್ರಚಾರ ಮಾಡಲು ಆದ್ಯತೆ ಕೊಡಿ. ಗ್ಯಾರಂಟಿ ಫಲಾನುಭವಿಗಳ ಗುಂಪು ಸಭೆ ನಡೆಸಿ ಆ ಮತದಾರರನ್ನು ಪಕ್ಷಕ್ಕೆ ಹಿಡಿದಿಡುವ ಕೆಲಸ ಮಾಡಿ.
ಸಮಸ್ಯೆ ಪರಿಹರಿಸಲು ಅಧಿಕಾರಿಗಳನ್ನು ಸಂಪರ್ಕಿಸಿ
ಲೋಕಸಭಾ ಚುನಾವಣೆ ಮುಗಿಯುವರೆಗೂ ಬೆಂಗಳೂರಿನಲ್ಲಿ ನಿಮಗೆ ಯಾವುದೇ ಕೆಲಸ ಇರುವುದಿಲ್ಲ, ನಿಮ್ಮ ಕ್ಷೇತ್ರ ಇಲ್ಲವೆ ಜಿಲ್ಲೆಗೆ ಸಂಬಂಧಪಟ್ಟಂತೆ ಸಮಸ್ಯೆಗಳಿದ್ದರೆ ಅವುಗಳನ್ನು ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಬಗೆಹರಿಸಿಕೊಳ್ಳಿ.
ಅದು ಸಾಧ್ಯವಾಗದಿದ್ದರೆ ನನ್ನ ಸಚಿವಾಲಯದ ಗಮನಕ್ಕೆ ತನ್ನಿ, ಕಾನೂನಾತ್ಮಕವಾಗಿದ್ದರೆ 24 ಗಂಟೆಗಳಲ್ಲಿ ಅಧಿಕಾರಿಗಳು ಬಗೆಹರಿಸಲಿದ್ದಾರೆ.
ಇನ್ನೇನಿದ್ದರೂ ಚುನಾವಣೆ ಅಷ್ಟೇ ನಮ್ಮ ಮುಂದಿರುವುದು, ನಾವು ಹೆಚ್ಚು ಸ್ಥಾನ ಪಡೆದಷ್ಟೂ ನಾವು, ನೀವು ಸರ್ಕಾರ ಬಲಿಷ್ಠಗೊಳ್ಳುತ್ತದೆ ಎಂದು ಕಿವಿಮಾತು ಹೇಳಿದರು.