ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿ
ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ ರಾಜ್ಯ ಸರ್ಕಾರ ಅಭಿವೃದ್ಧಿ ಮತ್ತು ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿ ಹಾಗೂ ಜನಪರ ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ತಿಳಿಸಿದ್ದಾರೆ.
ರಾಜ್ಯಪಾಲರ ಭಾಷಣದ ವಂದನಾ ಮೇಲಿನ ಚರ್ಚೆಗೆ ಉತ್ತರಿಸಿ, ಬಿಜೆಪಿ, ಕೇಂದ್ರ ಹಾಗೂ ಮೋದಿ ಅವರನ್ನು ತಮ್ಮ ಭಾಷಣದುದ್ದಕ್ಕೂ ತರಾಟೆಗೆ ತೆಗೆದುಕೊಂಡರು.
ಮೋದಿ ಸರ್ಕಾರ ರೈತರ, ದಲಿತರ, ಬಡವರ, ಅಲ್ಪಸಂಖ್ಯಾತರ, ಮಹಿಳೆಯರ, ಕಾರ್ಮಿಕರ, ಸಂವಿಧಾನ ವಿರೋಧಿಯಾಗಿದೆ ಎಂದರು ಆರೋಪಿಸಿದರು.
ಪತ್ರಗಳಿಗೆ ಸ್ಪಂದನೆಯೇ ಇಲ್ಲ
ರಾಜ್ಯದ ಬಹುತೇಕ ಭಾಗ ಬರಕ್ಕೆ ಸಿಲುಕಿದ್ದರೂ ಕೇಂದ್ರ ಸರ್ಕಾರ ಇದುವರೆಗೂ ಒಂದು ಪೈಸೆ ನೀಡಿಲ್ಲ, ಈ ಸಂಬಂಧ ಕೇಂದ್ರ ಸಚಿವರನ್ನು ಎರಡು ಬಾರಿ ಭೇಟಿ ಮಾಡಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ, ನಮ್ಮ ಪತ್ರಗಳಿಗೆ ಅವರಿಂದ ಸ್ಪಂದನೆಯೇ ಇಲ್ಲ.
ಇಂತಹ ಸರ್ಕಾರವನ್ನು ಏನೆಂದು ಕರೆಯಲು ಸಾಧ್ಯ, ಜನರಿಗೆ ಸಂವಿಧಾನದ ಜಾಗೃತಿ ಮೂಡಿಸಿ, ಕೆಲವರ ಕೊಳಕುತನವನ್ನು ಬಹಿರಂಗ ಮಾಡಲು ಜಾಗೃತಿ ಯಾತ್ರೆ ಆರಂಭಿಸಿದ್ದೇವೆ ಎಂದರು.
ನಾವು ಮನು ವಾದದಲ್ಲಿ ನಂಬಿಕೆ ಇಟ್ಟಿಲ್ಲ, ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವವರು, ಸರ್ವ ಜನಾಂಗದ ಶಾಂತಿಯ ತೋಟ ಎಂಬ ಮಾತಲ್ಲಿ ನಾವು ನಂಬಿಕೆ ಇರಿಸಿದ್ದೇವೆ. ಆದ್ದರಿಂದ ಎಲ್ಲಾ ವರ್ಗಗಳಿಗೆ ಶಕ್ತಿ ನೀಡಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ.
77 ಸಾವಿರ ಕೋಟಿ ರೂ. ಹೂಡಿಕೆ
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೇವಲ 9 ತಿಂಗಳಲ್ಲಿ 77 ಸಾವಿರ ಕೋಟಿ ರೂ. ಹೂಡಿಕೆ ಬಂದಿರುವುದೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಗಮವಾಗಿರುವುದಕ್ಕೆ ಸಾಕ್ಷಿ ಎಂದರು.
ಬಿಜೆಪಿ ಎಂದರೆ ಸುಳ್ಳು, ಸುಳ್ಳಿನ ಉತ್ಪಾದನೆಯಲ್ಲಿ ಬಿಜೆಪಿ ನಿಸ್ಸೀಮರು, ಅಭಿವೃದ್ಧಿ ಮರೆತು ಸುಳ್ಳುಗಳ ಆಸರೆ ಹೋಗಿದ್ದ ಬಿಜೆಪಿಯನ್ನು ರಾಜ್ಯದ ಜನತೆ ತಿರಸ್ಕರಿಸಿದ್ದಾರೆ.
ರಾಜ್ಯದಲ್ಲಿ ಇವತ್ತಿನವರೆಗೂ ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದೇ ಇಲ್ಲ, ಹಿಂಬಾಗಿಲಲ್ಲಿ ಅಧಿಕಾರಕ್ಕೆ ಬಂದಿದ್ದಾರೆ, ಬಿಜೆಪಿಯಿಂದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಸದಾನಂದಗೌಡ ಮುಖ್ಯಮಂತ್ರಿ ಆದರು, ಇವರ‍್ಯಾರೂ ಸ್ಪಷ್ಟ ಬಹುಮತ ಪಡೆದು ಮುಖ್ಯಮಂತ್ರಿ ಆದವರಲ್ಲ, ಆಪರೇಷನ್ ಕಮಲ ಮತ್ತು ಹಿಂಬಾಗಿಲ ಮೂಲಕ ಆಮಿಷವೊಡ್ಡಿ ಇತರ ಪಕ್ಷದ ಶಾಸಕರನ್ನು ಸೆಳೆದು ಅಧಿಕಾರಕ್ಕೇರಿದರು.
ನಾವು 2013 ಹಾಗೂ 2023ರಲ್ಲಿ ಸ್ಪಷ್ಟ ಬಹುಮತದ ಮೂಲಕ ಅಧಿಕಾರಕ್ಕೆ ಬಂದಿದ್ದೇವೆ, ಜನ ನಮ್ಮನ್ನು ತಿರಸ್ಕರಿಸಿ ವಿರೋಧ ಪಕ್ಷದಲ್ಲಿ ಕೂರಿಸಿದಾಗಲೂ ತಲೆಬಾಗಿ ಜನರ ತೀರ್ಮಾನವನ್ನು ಒಪ್ಪಿಕೊಂಡು ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡಿ ಮತ್ತೆ ಅಧಿಕಾರಕ್ಕೆ ಬಂದಿದ್ದೇವೆ ಎಂದರು.
ಅನುದಾನ ಕೇಳುವುದು ಸಂಘರ್ಷ ಅಲ್ಲ
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರದ ಜತೆ ಸಂಘರ್ಷಕ್ಕೆ ಇಳಿಯಬಾರದು ಎಂದಿದ್ದಾರೆ, ನಾವು ಸಂಘರ್ಷಕ್ಕೆ ಇಳಿದಿಲ್ಲ, ರಾಜ್ಯದ ಪಾಲಿನ ಸಂವಿಧಾನಬದ್ಧ ಹಕ್ಕು, ಅನುದಾನ ಕೇಳುವುದು ಸಂಘರ್ಷ ಆಗುವುದಿಲ್ಲ.
ರಾಜ್ಯದಲ್ಲಿ ತೀವ್ರ ಬರಗಾಲವಿದೆ, ಪರಿಹಾರ ಕೋರಿ ಕೇಂದ್ರಕ್ಕೆ 17 ಬಾರಿ ಬರೆದೆವು, ಒಂದು ಪತ್ರಕ್ಕೆ ಮಾತ್ರ, “ನಿಮ್ಮ ಪತ್ರ ತಲುಪಿದೆ” ಎನ್ನುವ ಉತ್ತರ ಕೇಂದ್ರದಿಂದ ಬಂತು, ಉಳಿದ ಪತ್ರಗಳಿಗೆ ಉತ್ತರವೂ ಬರಲಿಲ್ಲ, ಇವತ್ತಿನವರೆಗೂ ಒಂದು ಪೈಸೆಯೂ ಅನುದಾನ ಬಂದಿಲ್ಲ, ರಾಜ್ಯದ ಪಾಲನ್ನು ಕೇಳುವುದು ತಪ್ಪಾ, ಇದು ಸಂಘರ್ಷ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.
ಬರಗಾಲ ಹಿನ್ನೆಲೆಯಲ್ಲಿ ನರೇಗ ಮಾನವ ದಿನಗಳನ್ನು 100 ರಿಂದ 150 ದಿನಗಳಿಗೆ ಏರಿಕೆ ಮಾಡಬೇಕಿತ್ತು, ಪದೇ ಪದೇ ಮನವಿ ಮಾಡಿದರೂ ಏರಿಕೆ ಮಾಡಲೇ ಇಲ್ಲ, ಇದು ರಾಜ್ಯದ ಜನರಿಗೆ ಮಾಡಿದ ಅನ್ಯಾಯವಲ್ಲವೇ ಎಂದರು.
ಕೋಟಿ-ಕೋಟಿ ಫಲಾನುಭವಿಗಳು
ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳಿಂದ ಕೋಟಿ, ಕೋಟಿ ಫಲಾನುಭವಿಗಳು ಅನುಕೂಲ ಪಡೆಯುತ್ತಿದ್ದಾರೆ, ಪ್ರತಿ ಕೆಜಿಗೆ ೩೪ ರೂ. ಕೊಡುತ್ತೇವೆ ಎಂದರೂ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ.
ಈಗ 29 ರೂ.ಗೆ ಕೆಜಿ ಅಕ್ಕಿ ಕೊಡುವುದಾಗಿ ಹೇಳುತ್ತಿದ್ದಾರೆ, ಈಗಲೂ ನಮಗೆ ಅದೇ ಬೆಲೆಗೆ ಅಕ್ಕಿ ಕೊಡಿಸಿ, ಕೇಂದ್ರದಿಂದ ಖರೀದಿಸಿ ಜನರಿಗೆ ಕೊಡಲು ಸಿದ್ಧರಿದ್ದೇವೆ, ಕೇಂದ್ರದ ಜತೆ ಮಾತನಾಡಿ ಅಕ್ಕಿ ಕೊಡಿಸಿ ಎಂದು ಬಿಜೆಪಿ ಸದಸ್ಯರಿಗೆ ಮುಖ್ಯಮಂತ್ರಿ ಸವಾಲು ಹಾಕಿದರು.
ಬಿಜೆಪಿಯವರು ಎಂದಾದರೂ ಜಿಲ್ಲೆ, ತಾಲ್ಲೂಕುಗಳಲ್ಲಿರುವ ಹಿಂದುಳಿದ ವರ್ಗಗಳ, ಎಸ್‌ಸಿ, ಎಸ್‌ಟಿ ಹಾಸ್ಟೆಲ್‌ಗಳಿಗೆ ಭೇಟಿ ನೀಡಿದ್ದಾರಾ, ಈ ಸಮುದಾಯದ ವಿದ್ಯಾರ್ಥಿಗಳ ಕಷ್ಟಗಳನ್ನು ಕೇಳಿದ್ದಾರಾ, ಅವರ ಸಂಕಷ್ಟಗಳಿಗೆ ಸ್ಪಂದಿಸಿದ್ದಾರಾ ಎಂದು ಪ್ರಶ್ನಿಸಿದರು.