ರಕ್ತಹೀನತೆ, ಪೌಷ್ಠಿಕಾಂಶ ಕೊರತೆ ನೀಗಿಸುವ ಗುರಿ
ಬೆಂಗಳೂರು: ’ಉತ್ತಮ ಪೌಷ್ಠಿಕಾಂಶ ಉತ್ತಮ ಶಿಕ್ಷಣಕ್ಕೆ ರಹದಾರಿ’ ಎಂಬ ಕಾರ್ಯಕ್ರಮದಡಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ಶಾಲೆಗಳ 55 ಲಕ್ಷ ಮಕ್ಕಳ ಮಾನಸಿಕ, ದೈಹಿಕ ಆರೋಗ್ಯಕ್ಕಾಗಿ ರಾಗಿ ಮಾಲ್ಟ್ ವಿತರಣೆ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ರಾಗಿ ಹೆಲ್ತ್ ಮಿಕ್ಸ್ ವಿತರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿನ ರಕ್ತಹೀನತೆ ಮತ್ತು ಪೌಷ್ಠಿಕಾಂಶ ಕೊರತೆ ನೀಗಿಸಿದಾಗ ಮಾತ್ರ ಮಾನಸಿಕವಾಗಿ ಸದೃಢರಾಗಿ ಓದಿನಲ್ಲಿ ಹೆಚ್ಚು ಚುರುಕಾಗುತ್ತಾರೆ, ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳುತ್ತಾರೆ, ಶ್ರೀಮಂತರ ಮಕ್ಕಳಂತೆ ಬಡವರು, ಶ್ರಮಿಕರು, ದಲಿತ, ಶೂದ್ರರ ಮಕ್ಕಳಿಗೂ ಉತ್ತಮ ಶಿಕ್ಷಣ ದೊರೆಯಬೇಕು, ಮಕ್ಕಳೇ ದೇಶ ಹಾಗೂ ಸಮಾಜದ ಭವಿಷ್ಯ ಎಂದರು.
ಮೌಢ್ಯಮುಕ್ತ ಸಮಾಜ ನಿರ್ಮಾಣ ಸಾಧ್ಯ
ಶಿಕ್ಷಣದಿಂದ ಮಾತ್ರ ಸ್ವಾಭಿಮಾನ, ಜ್ಞಾನದ ಬೆಳವಣಿಗೆ ಸಾಧ್ಯ, ಶಿಕ್ಷಣ ಕೇವಲ ಓದು, ಬರಹ ಕಲಿಸುವುದಲ್ಲ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ವೈಚಾರಿಕತೆಯುಳ್ಳ ಶಿಕ್ಷಣ ಅಗತ್ಯ, ಇಂದಿನ ದಿನಗಳಲ್ಲಿ ವೈದ್ಯರು, ಎಂಜಿನಿಯರ್‌ಗಳೂ ಮೌಢ್ಯಕ್ಕೆ ಜೋತು ಬಿದ್ದಿದ್ದಾರೆ, ಬಸವಾದಿ ಶರಣರು ಮೌಢ್ಯಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು, ವೈಚಾರಿಕ ಶಿಕ್ಷಣದಿಂದ ಮಾತ್ರ ಮೌಢ್ಯಮುಕ್ತ ಸಮಾಜ ನಿರ್ಮಾಣ ಸಾಧ್ಯ.
2013 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಹಾಲು ಉತ್ಪಾದನೆ ಹೆಚ್ಚಾಯಿತು, ಇದಕ್ಕೆ ತಕ್ಕಂತೆ ಹಾಲಿನ ಮಾರಾಟ ಮತ್ತು ಉಪಉತ್ಪನ್ನಗಳನ್ನೂ ಹೆಚ್ಚು ಮಾಡಲು ಸಾಧ್ಯವಿಲ್ಲದ ಕಾರಣ, ಸರ್ಕಾರಿ ಶಾಲಾ ಮಕ್ಕಳಿಗೆ ವಾರದಲ್ಲಿ ಐದು ದಿನ ಹಾಲು ಕೊಡುವ ಕ್ಷೀರಭಾಗ್ಯ ಯೋಜನೆ ಹಾಗೂ ನಂತರ ಕಳೆದ ಬಜೆಟ್‌ನಲ್ಲಿ ವಾರಕ್ಕೆ ಎರಡು ದಿನ ಮೊಟ್ಟೆ ಕೊಡುವ ಕಾರ್ಯಕ್ರಮ ಆರಂಭಿಸಲಾಯಿತು ಎಂದರು.