ಬಿಜೆಪಿ-ಜೆಡಿಎಸ್ ತಂತ್ರಗಾರಿಕೆ ಭಯ
ಬೆಂಗಳೂರು:ರಾಜ್ಯಸಭಾ ಚುನಾವಣಾ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಎಲ್ಲಾ ಸದಸ್ಯರನ್ನು ನಗರದ ಹೊರವಲಯದ ಐಷಾರಾಮಿ ರೆಸಾರ್ಟ್ ಒಂದಕ್ಕೆ ಸ್ಥಳಾಂತರಿಸಲಾಗುತ್ತಿದೆ.
ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ಕಾಂಗ್ರೆಸ್ನಿಂದ ಕಣಕ್ಕಿಳಿದಿರುವ ಮೂವರು ಅಭ್ಯರ್ಥಿಗಳ ಗೆಲುವಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷದ ಶಾಸಕರನ್ನು ರೆಸಾರ್ಟ್ನಲ್ಲಿ ಹಿಡಿದಿಡುವ ತೀರ್ಮಾನಕ್ಕೆ ಬಂದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರನ್ನು ದೆಹಲಿಗೆ ಕರೆಸಿಕೊಂಡು ಇಂದು ಚರ್ಚೆ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಈ ತೀರ್ಮಾನಕ್ಕೆ ಬಂದಿದೆ.
ಅಡ್ಡ ಮತದಾನ !
ಬಿಜೆಪಿ ಹಾಗೂ ಜೆಡಿಎಸ್ ತಮಗೆ ಸಾಮರ್ಥ್ಯ ಇಲ್ಲ ಎಂದು ಅರಿತಿದ್ದರೂ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಡ್ಡ ಮತದಾನ ಮಾಡಿಸಿ, ಎರಡು ಸ್ಥಾನಗಳನ್ನು ಗೆಲ್ಲುವ ಲೆಕ್ಕಾಚಾರದಲ್ಲಿದೆ.
ಅಡ್ಡ ಮತದಾನಕ್ಕೆ ತಮ್ಮ ಶಾಸಕರಿಗೆ ಅವಕಾಶ ನಿಡಬಾರದು ಮತ್ತು ವಿರೋಧಿಗಳು ತಮ್ಮ ಸದಸ್ಯರನ್ನು ಬಲೆಗೆ ಹಾಕಿಕೊಳ್ಳಬಾರದು ಎಂಬ ಉದ್ದೇಶದಿಂದ ರೆಸಾರ್ಟ್ ರಾಜಕೀಯಕ್ಕೆ ಮೊರೆ ಹೋಗಿದ್ದಾರೆ.
ಪ್ರಸಕ್ತ ಬಜೆಟ್ ಅಧಿವೇಶನ ನಾಳೆ ಅಂತಿಮಗೊಳ್ಳಲಿದೆ, ಶುಕ್ರವಾರ ಸಂಜೆಯಿಂದಲೇ ಶಾಸಕರನ್ನು ಹಿಡಿದಿಟ್ಟುಕೊಳ್ಳಬೇಕೆಂಬ ಚರ್ಚೆಯೂ ನಡೆದಿತ್ತು.
ಸದನ ಮುಗಿದ ಬಳಿಕ ಶಾಸಕರು ಊರಿಗೆ
ಹಿರಿಯ ಶಾಸಕರ ಸಲಹೆ ಮೇರೆಗೆ ಸದನ ಮುಗಿದ ಬಳಿಕ ಶಾಸಕರು ತಮ್ಮ ಊರಿಗೆ ತೆರಳಲಿ, ಸೋಮವಾರ ನಡೆಯುವ ಪಕ್ಷದ ಶಾಸಕರು, ಮುಖಂಡರ ಸಭೆಯಲ್ಲಿ ಭಾಗವಹಿಸುವಂತೆ ಕಡ್ಡಾಯವಾಗಿ ಸೂಚಿಸಲಾಗಿದೆ.
ಕಾಂಗ್ರೆಸ್ ಕಚೇರಿಯಲ್ಲಿ ನಡೆಯುವ ಸಭೆ ನಂತರ ಎಲ್ಲಾ ಶಾಸಕರನ್ನು ರೆಸಾರ್ಟ್ಗೆ ಕರೆದುಕೊಂಡು ಹೋಗಿ, ರಾತ್ರಿ ಅಲ್ಲೇ ತಂಗಿದ್ದು, ಮರುದಿನ ಅಂದರೆ ಫೆಬ್ರವರಿ 27 ರ ಬೆಳಗ್ಗೆ ಮತಗಟ್ಟೆಗೆ ಕರೆತರಲಿದ್ದಾರೆ.
ಅಂದಿನ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುತ್ತಿಲ್ಲ, ಕೆಪಿಸಿಸಿ ಅಧ್ಯಕ್ಷರಾಗಿರುವ ಉಪಮುಖ್ಯಮಂತ್ರಿ ಅವರೇ ಸಭೆ ನಡೆಸಿ ಅವರ ನಾಯಕತ್ವದಲ್ಲೇ ಶಾಸಕರನ್ನು ರೆಸಾರ್ಟ್ಗೆ ಕರೆದೊಯ್ಯಲಿದ್ದಾರೆ.
ರೆಸಾರ್ಟ್ನಲ್ಲೇ ತಮ್ಮ ಪಕ್ಷದ ಯಾವ ಅಭ್ಯರ್ಥಿಗಳಿಗೆ ಯಾವ ಶಾಸಕರು ಮತ ಚಲಾಯಿಸಬೇಕೆಂಬ ಬಗ್ಗೆಯೂ ವಿಪ್ ನೀಡುವುದಲ್ಲದೆ, ಮಾದರಿ ಮತಪತ್ರವನ್ನು ನೀಡಿ, ವಿವರಿಸಲಿದ್ದಾರೆ.
ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕನಿಷ್ಠ 45 ಮತಗಳ ಅಗತ್ಯವಿದ್ದು, ತಮ್ಮ ಮೂವರು ಅಭ್ಯರ್ಥಿಗಳಿಗೂ ತಲಾ 46 ಮತಗಳನ್ನು ಹಂಚಿ ವಿಪ್ ನೀಡಲಿದ್ದಾರೆ. ರೆಸಾರ್ಟ್ನಿಂದ ಪ್ರತ್ಯೇಕವಾಗಿ ಮೂರು ಗುಂಪುಗಳಾಗಿ ಮತಗಟ್ಟೆಗೆ ಧಾವಿಸಿ ಮತ ಚಲಾಯಿಸುವ ವ್ಯವಸ್ಥೆಯನ್ನು ಕಾಂಗ್ರೆಸ್ ಮಾಡಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಸ್ಪಷ್ಟ ಸಂಖ್ಯಾಬಲವಿದೆ, ಬಿಜೆಪಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು 45 ಮತಗಳನ್ನು ನಿಗದಿ ಮಾಡಿದ ನಂತರ ಉಳಿಯುವ 21 ಮತಗಳನ್ನು ಎನ್ಡಿಎ ಕೂಟದ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಹಂಚಲಿದ್ದಾರೆ. ಜೆಡಿಎಸ್ನ ೧೯ ಮತಗಳು ಜೊತೆಗೆ ಬಿಜೆಪಿಯ 21 ಸೇರಿ 40 ಮತಗಳಾಗಲಿವೆ.
ರೆಡ್ಡಿ ಗೆಲುವಿಗೆ ಇನ್ನೂ ಐದು ಮತಗಳ ಅಗತ್ಯವಿದೆ, ಇವುಗಳನ್ನು ಪಡೆಯಲು ಪಕ್ಷೇತರರು ಮತ್ತು ಕಾಂಗ್ರೆಸ್ ಬುಟ್ಟಿಗೆ ಬಿಜೆಪಿ-ಜೆಡಿಎಸ್ ಕೈಹಾಕಿದೆ.
ಚುನಾವಣೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಜೊತೆಗೆ ಅಮಿತ್ ಷಾ ಚರ್ಚೆ ನಡೆಸಿರುವುದು ಹಾಗೂ ಬಿಜೆಪಿ-ಜೆಡಿಎಸ್ ಜಂಟಿಯಾಗಿ ತಮ್ಮ ಶಾಸಕರನ್ನು ಸೆಳೆಯಬಹುದೆಂಬ ಸುಳಿವಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ರೆಸಾರ್ಟ್ ರಾಜಕೀಯಕ್ಕೆ ಮೊರೆ ಹೋಗಿದೆ.