ಬೆಂಗಳೂರು:ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮತಗಳನ್ನು ಒಗ್ಗೂಡಿಸುವುದು ಹಾಗೂ ಸಮನ್ವಯತೆ ಕಾಪಾಡಲು ಉತ್ತರ ಪ್ರದೇಶ ಬಿಜೆಪಿಯ ಹಿರಿಯ ನಾಯಕ ರಾಧಾಮೋಹನ್ ದಾಸ್ ಅಗರವಾಲ್ ಅವರನ್ನು ಪಕ್ಷದ ವರಿಷ್ಠರು ನೇಮಕ ಮಾಡಿದ್ದಾರೆ.
ಸಮನ್ವಯತೆ ಸಾಧಿಸುವ ಜೊತೆಗೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಚುನಾವಣಾ ಹೊಣೆಗಾರಿಕೆ ಉಸ್ತುವಾರಿಯೂ ಇವರದ್ದೇ ಆಗಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಪ್ತರಾಗಿರುವ ಅಗರವಾಲ್, ಅಲ್ಲಿನ ಚುನಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು.
ಚುನಾವಣಾ ನಿಪುಣರ ನಿಯೋಜನೆ
ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಭಾರೀ ಹಿನ್ನಡೆ ಆದ ಕಾರಣ ಈ ಬಾರಿ ಎಚ್ಚೆತ್ತ ವರಿಷ್ಠರು ಚುನಾವಣಾ ನಿಪುಣರೊಬ್ಬರನ್ನು ನಿಯೋಜಿಸಿದ್ದಾರೆ.
ಅವರು ಈಗಾಗಲೇ ಬಿಜೆಪಿಯ ರಾಜ್ಯ ಮುಖಂಡರೊಂದಿಗೆ ಎರಡು ಸಭೆಗಳನ್ನು ನಡೆಸಿ ಚುನಾವಣಾ ಸಿದ್ಧತೆ ಹಾಗೂ ಜೆಡಿಎಸ್ ಜೊತೆಗಿನ ಸಮನ್ವಯತೆ ಬಗ್ಗೆ ಚರ್ಚೆ ಮಾಡಿದ್ದಾರೆ.
ಪ್ರತಿ ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರಿಂದ ಸದ್ಯದ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡು ರಾಜ್ಯ ಬಿಜೆಪಿ ಕಚೇರಿಯಲ್ಲೇ ಕ್ಷೇತ್ರವಾರು ಸಭೆಗಳನ್ನು ನಡೆಸುತ್ತಿದ್ದಾರೆ.
ಸಮನ್ವಯತೆಯಿಂದ ಕೆಲಸ ಮಾಡಿ
ಕರ್ನಾಟಕದಲ್ಲಿ 28 ಕ್ಷೇತ್ರವನ್ನು ಗೆಲ್ಲುವ ಸಾಧ್ಯತೆ ನಮಗಿದೆ, ಸಮನ್ವಯತೆ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ನಮ್ಮ ಗುರಿ ಮುಟ್ಟಬಹುದಾಗಿದೆ ಎಂದು ತಿಳಿಸಿದ್ದಾರೆ.
ಜೆಡಿಎಸ್, ಎನ್‌ಡಿಎ ಮೈತ್ರಿ ಕೂಟ ಸೇರಿದ ನಂತರ ರಾಜ್ಯ ಬಿಜೆಪಿಯಲ್ಲಿನ ಎರಡನೇ ಸಾಲಿಗೆ ಸೇರಿದ ಕೆಲವು ಮುಖಂಡರುಗಳು ಅಪಸ್ವರ ಎತ್ತಿದ್ದರು.
ಪಕ್ಷದಲ್ಲೇ ಅಪಸ್ವರ ಏಳುತ್ತಿದ್ದಂತೆ ಎಚ್ಚರಗೊಂಡ ವರಿಷ್ಠರು, ಸಮನ್ವಯತೆ ಹಾಗೂ ಚುನಾವಣಾ ಸಿದ್ಧತೆ ನಡೆಸಲು ಅಗರವಾಲ್ ಅವರನ್ನು ನಿಯೋಜಿಸಿದರು.
ನಾಯಕರಿಗೆ ಕಿವಿಮಾತು
ಅಗರವಾಲ್ ರಾಜ್ಯ ಪ್ರವೇಶಿಸುತ್ತಿದ್ದಂತೆ ಅಪಸ್ವರ ಎತ್ತಿದ ನಾಯಕರನ್ನು ಕರೆದು ಎಚ್ಚರಿಕೆ ನೀಡಿರುವುದಲ್ಲದೆ, ಕಿವಿಮಾತು ಹೇಳಿ ಕಳುಹಿಸಿದ್ದಾರೆ.
ಇವರು ಬಂದ ನಂತರ ಯಾವುದೇ ನಾಯಕರಿಂದ ಮೈತ್ರಿ ಬಗ್ಗೆ ಅಪಸ್ವರ ಕೇಳಿಬಂದಿಲ್ಲ, ಪ್ರತಿ ಕ್ಷೇತ್ರಗಳ ಬಗ್ಗೆ ಸಭೆಗಳನ್ನು ನಡೆಸುವ ಸಂದರ್ಭದಲ್ಲಿ ಜೆಡಿಎಸ್ ಸ್ಪರ್ಧಿಸುವ ಕಡೆ ಬಿಜೆಪಿ ಮತಗಳು ಪೂರ್ಣವಾಗಿ ಎನ್‌ಡಿಎ ಅಭ್ಯರ್ಥಿಗೆ ಚಲಾವಣೆ ಆಗಬೇಕು.
ಅದೇ ರೀತಿ ಬಿಜೆಪಿ ಸ್ಪರ್ಧಿಸುವ ಕಡೆಗಳಲ್ಲಿ ಜೆಡಿಎಸ್ ಮತಗಳು ಯಾವುದೇ ಗೊಂದಲವಿಲ್ಲದೆ ವರ್ಗಾವಣೆ ಆಗುವ ಸಂಬಂಧ ತಂತ್ರಗಾರಿಕೆ ಮಾಡಲಾಗುತ್ತಿದೆ.