ಸಭಾಧ್ಯಕ್ಷ ಯು.ಟಿ.ಖಾದರ್
ಬೆಂಗಳೂರು:ರಾಜ್ಯಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಚುನಾಯಿತರಾದ ಕಾಂಗ್ರೆಸ್‌ನ ಸಯ್ಯದ್ ನಾಸಿರ್ ಹುಸೇನ್ ಪರ ಜಯಘೋಷ ಸಂದರ್ಭದಲ್ಲಿ ಪಾಕಿಸ್ತಾನದ ಪರ ಘೋಷಣೆಯನ್ನು ಕಿಡಿಗೋಡಿಯೊಬ್ಬ ಕೂಗಿದ್ದಾನೆ ಎಂಬ ಆರೋಪ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸದನವನ್ನು ಕೆಲಕಾಲ ಮುಂದೂಡಿದ ಘಟನೆ ನಡೆಯಿತು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ, ರಾಜ್ಯಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಸಯ್ಯದ್ ನಾಸಿರ್ ಹುಸೇನ್ ಅವರ ವಿಜಯೋತ್ಸವ ಸಂದರ್ಭದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿರುವುದು ರಾಜ್ಯದಲ್ಲಿ ಆತಂಕ ಉಂಟಾಗಿದೆ, ಭಯದ ವಾತಾವರಣವಿದೆ, ಗಲ್ಲಿಗಲ್ಲಿಯಲ್ಲಿ ಈ ರೀತಿಯಲ್ಲಿ ಕೂಗುವುದಿಲ್ಲ ಎಂದು ನಂಬುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಘೋಷಣೆ ಕೂಗಿದವರನ್ನು ವಿಧಾನಸೌಧಕ್ಕೆ ಕರೆತಂದವರು ಯಾರು
ಆ ರೀತಿ ಘೋಷಣೆ ಕೂಗಿದವರನ್ನು ರೆಡ್ ಕಾರ್ಪೆಟ್ ಹಾಕಿ ವಿಧಾನಸೌಧಕ್ಕೆ ಕರೆತಂದವರು ಯಾರು ಎಂದಾಗ, ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್, ಪಾರ್ಲಿಮೆಂಟ್‌ನಲ್ಲಿ ನುಗ್ಗಿದ್ದರಲ್ಲ ಎಂದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಮಾತು ಮುಂದುವರೆಸಿದ ಅಶೋಕ್, ಸಂಸತ್‌ನಲ್ಲಿ ನುಗ್ಗಿದವರನ್ನು ಹಿಡಿದು ಚೆನ್ನಾಗಿ ರುಬ್ಬಿದರು, ನೀವ್ಯಾರಾದರೂ ಅವರಿಗೆ ಹೊಡೆದಿರಾ, ವಿಧಾನಸೌಧಕ್ಕೆ ಘೋಷಣೆ ಕೂಗಿದವರನ್ನು ಯಾರು ಕರೆತಂದವರು, 500 ಪೊಲೀಸರು, ಐಪಿಎಸ್, ಐಎಎಸ್ ಅಕಾರಿಗಳು ಇರುವ ಈ ಸ್ಥಳದಲ್ಲಿ ಆ ರೀತಿ ಘೋಷಣೆ ಕೂಗಲು ಎಷ್ಟು ಧೈರ್ಯವಿರಬೇಕು, ದೇಶದ ಗಡಿಯಲ್ಲಿ ಸೈನಿಕರು ಜೀವದ ಹಂಗು ತೊರೆದು ರಕ್ಷಣೆ ಮಾಡುತ್ತಾರೆ, ಅವರಿಗೆ ನಾವು ಯಾವ ಉತ್ತರ ಕೊಡಬೇಕು, ಅಲ್ಲಿ ಈ ರೀತಿ ಘೋಷಣೆ ಕೂಗಿದರೆ ಅವರನ್ನು ಗುಂಡಿಟ್ಟು ಕೊಲ್ಲುತ್ತಾರೆ ಎಂದರು.
ಘೋಷಣೆ ಕೂಗಿದವರು ವಿಧಾನಸೌಧದಿಂದ ಹೊರಹೋಗಲು ವಾಹನ ಮಾಡಿಕೊಟ್ಟವರು ಯಾರು, ಇಷ್ಟೆಲ್ಲಾ ನಡೆದಿದ್ದರೂ ಸರ್ಕಾರ ಏನೂ ಆಗಿಲ್ಲ ಎಂಬಂತಿದೆ, ಕಾಂಗ್ರೆಸ್‌ನ ಚಂದ್ರಶೇಖರ್ ಗೆದ್ದಾಗ ಈ ರೀತಿ ಘೋಷಣೆ ಕೂಗಿಲ್ಲ, ಬಿಜೆಪಿ ಅಭ್ಯರ್ಥಿ ಗೆದ್ದಾಗ ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗಿದ್ದೇವೆ, ಆದರೆ ಸಯ್ಯದ್ ನಾಸಿರ್ ಹುಸೇನ್ ಗೆದ್ದ ಸಂದರ್ಭದಲ್ಲಿ ಯಾಕೆ ಈ ರೀತಿ ಘೋಷಣೆ ಎಂದರು.
ಎಲ್ಲರೂ ಒಗ್ಗಟ್ಟಿನಿಂದ ಇರಬೇಕು
ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಹಲವು ಶಾಸಕರು ಎದ್ದು ನಿಂತು ಆಕ್ಷೇಪಿಸಲು ಮುಂದಾದಾಗ ಸಭಾಧ್ಯಕ್ಷ ಯು.ಟಿ.ಖಾದರ್ ಮಧ್ಯ ಪ್ರವೇಶಿಸಿ, ಗಂಭೀರವಾದ ವಿಚಾರ ಚರ್ಚೆ ಮಾಡುವಾಗ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು, ರಾಜಕೀಯ ಬಿಡಬೇಕು, ರಾಷ್ಟ್ರ, ರಾಜ್ಯದ ಹಿತದ ಬಗ್ಗೆ ಮಾತನಾಡುವಾಗ ಗಂಭೀರವಾಗಿ ಆಲಿಸಬೇಕು, ಗಂಭೀರ ವಿಚಾರ ಪ್ರಸ್ತಾಪವಾಗುತ್ತಿದೆ, ಸರ್ಕಾರ ಉತ್ತರ ಕೊಡಲಿದೆ ಎಂದು ಸಲಹೆ ಮಾಡಿದರು.
ಮಾತು ಮುಂದುವರೆಸಿದ ಅಶೋಕ್, ಪಾಕಿಸ್ತಾನದ ಪರ ಘೋಷಣೆ ಕೂಗಿದ ವಿಚಾರ ಸುದ್ದಿ ವಾಹಿನಿಗಳಲ್ಲಿ ತೋರಿಸಿದ್ದಾರೆ, ಭಾರತ ಮಾತೆ ಅನ್ನ ತಿಂದವರು, ನೀರು ಕುಡಿದವರು ಆ ರೀತಿ ಕೂಗುವುದಿಲ್ಲ, ಒಂದು ವೇಳೆ ಮಾಧ್ಯಮದ ವರದಿ ಸುಳ್ಳಾಗಿದ್ದರೆ ಅವರನ್ನು ಜೈಲಿಗೆ ಹಾಕಿ, ನನ್ನ ಮೇಲೂ ಕೇಸು ಹಾಕಿ, ಈ ಘಟನೆ ಬಗ್ಗೆ ಸಣ್ಣ ಕ್ರಮವೂ ಕೈಗೊಂಡಿಲ್ಲ.
ಘೋಷಣೆ ಕೂಗಿದವರನ್ನು ಯಾರು ಕರೆದುಕೊಂಡು ಬಂದರು, ಇವರಿಗೆ ಹೇಗೆ ರಾಜ್ಯಸಭಾ ಟಿಕೆಟ್ ಕೊಟ್ಟರು, ಅವರೇ ತಾನೇ ಕರೆದುಕೊಂಡು ಬಂದದ್ದು ಎಂದಾಗ ಆಡಳಿತ ಪಕ್ಷದ ಶಾಸಕರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.
ಮಾಧ್ಯಮದವರನ್ನು ಗೆಟ್‌ಔಟ್ ಎನ್ನುತ್ತಾರೆ
ಚುನಾಯಿತ ಅಭ್ಯರ್ಥಿ ಮಾಧ್ಯಮದವರನ್ನು ಗೆಟ್‌ಔಟ್ ಎನ್ನುತ್ತಾರೆ, ಪ್ರಜಾಪ್ರಭುತ್ವದಲ್ಲಿ ಮಾಧ್ಯಮವೂ ಒಂದು ಅಂಗ ಎನ್ನುತ್ತಿದ್ದಂತೆ ಆಡಳಿತ ಪಕ್ಷದಿಂದ ನಾಸಿರ್ ಹುಸೇನ್ ಬಗ್ಗೆ ಏಕೆ ಮಾತನಾಡುತ್ತೀರಿ ಎಂಬ ತೀವ್ರ ಆಕ್ಷೇಪ ವ್ಯಕ್ತವಾಯಿತು.
ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷರು, ರಾಜಕೀಯ ವಿಚಾರ ಪ್ರಸ್ತಾಪ ಬೇಡ, ವ್ಯಾಪ್ತಿ ಮೀರಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದ ನಡೆದು ಸದನದಲ್ಲಿ ಗೊಂದಲದ ವಾತಾವರಣ ಉಂಟಾದಾಗ ಸಭಾಧ್ಯಕ್ಷರು ಸದನದ ಕಾರ್ಯಕಲಾಪವನ್ನು 10 ನಿಮಿಷ ಮುಂದೂಡಿದರು.
