ಬೆಂಗಳೂರು:ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ವೇಳೆ ಕಾಂಗ್ರೆಸ್‌ನ ವಿಜಯೀ ಅಭ್ಯರ್ಥಿ ನಾಸಿರ್ ಹುಸೇನ್ ಪರ ವಿಧಾನಸೌಧದ ಆವರಣದೊಳಗೆ ನಡೆದ ಸಂಭ್ರಮಾಚರಣೆ ಸಂದರ್ಭದಲ್ಲಿ ’ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಎಫ್‌ಎಸ್‌ಎಲ್ ವರದಿಯನ್ನು ಬಿಡುಗಡೆ ಮಾಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಈ ಸಂಬಂಧ ಟ್ವೀಟ್ ಮಾಡಿದ್ದು, ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾನೂನು ಸುವ್ಯವಸ್ಥೆ ಎಲ್ಲಿದೆ?
ಬಿ.ವೈ. ವಿಜಯೇಂದ್ರ ಟ್ವೀಟ್‌ನಲ್ಲಿ, ಸಿದ್ದರಾಮಯ್ಯನವರೇ, ರಾಜ್ಯ ಹಾಗೂ ಜನರ ಹಿತಾಸಕ್ತಿಯೇ ನಮ್ಮ ಮೊದಲ ಆದ್ಯತೆ, ದೇಶ ದ್ರೋಹಿ ಉಗ್ರರು ಹಾಗೂ ಪಾತಕಿಗಳಿಗೆ ಕರ್ನಾಟಕ ನೆಲೆಯಾಗಬಾರದೆಂಬುದಷ್ಟೇ ನಮ್ಮ ಪ್ರಾಮಾಣಿಕ ಕಾಳಜಿ, ಪ್ರಜಾಪ್ರಭುತ್ವದ ಹೃದಯ ಮಂದಿರ ವಿಧಾನಸೌಧ ಪ್ರವೇಶಿಸಿ, ಪೋಲಿಸರ ಎದುರೇ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆ ಕೂಗುವಷ್ಟರ ಮಟ್ಟಿಗೆ ದೇಶದ್ರೋಹಿಗಳು ಧೈರ್ಯತೋರುತ್ತಾರೆ, ಇದರ ಬೆನ್ನಲೇ ರಾಜಧಾನಿಯಲ್ಲಿ ಬಾಂಬ್ ಸ್ಫೋಟವಾಗುತ್ತದೆ, ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿ ಅಡಗಿ ಕುಳಿತಿದೆ ಎಂಬುದು ಬಹುದೊಡ್ಡ ಪ್ರಶ್ನೆಯಾಗಿ ರಾಜ್ಯದ ಜನರನ್ನು ಕಾಡುತ್ತಿದೆ ಎಂದಿದ್ದಾರೆ.
ರಾಜ್ಯದ ಜನತೆ ಆತಂಕದ ನೆರಳಿನಲ್ಲಿ ಬದುಕುವ ಸ್ಥಿತಿ ಬಂದಿದೆ, ಪ್ರಕರಣದ ಎಫ್‌ಎಸ್‌ಎಲ್ ವರದಿ ತಲುಪಿದರೂ ಸುಳ್ಳು ಹೇಳುತ್ತಿದ್ದೀರಿ, ಇದು ನಿಮ್ಮ ರಾಷ್ಟ್ರ ಬದ್ಧತೆಯನ್ನು ಪ್ರಶ್ನಿಸುವಂತಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಭೂಗತ ಶಕ್ತಿಗಳಿಗೆ ಸ್ವಾತಂತ್ರ್ಯ ದೊರೆತ ವಾತಾವರಣ ನಿರ್ಮಾಣವಾಗಿದೆ.
ನಾವು ಕೈಕಟ್ಟಿ ಕೂರಬೇಕೇ
‘ಬೆಂದ ಮನೆಯಲ್ಲಿ ಗಳ ಹಿರಿಯುವ’ ರಾಜಕಾರಣ ಮಾಡುವ ದುರ್ಗತಿ ಬಿಜೆಪಿಗೆ ಬಂದಿಲ್ಲ, ವಿಧಾನಸೌಧದಲ್ಲೇ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೇಳಿಬಂದರೆ ನಾವು ಕೈಕಟ್ಟಿ ಕೂರಬೇಕೇ, ಮಾಧ್ಯಮಗಳ ವರದಿಯನ್ನೂ ನೀವು ನಂಬಲಿಲ್ಲ, ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನೂ ಆಲಿಸಲಿಲ್ಲ, ರಾಷ್ಟ್ರ ಹಿತಾಸಕ್ತಿಯ ಈ ಗಂಭೀರ ಪ್ರಕರಣದ ಬಗ್ಗೆ ತಾತ್ಸಾರ ತೋರುತ್ತಿರುವುದರ ನಿಮ್ಮ ವರ್ತನೆ ರಾಷ್ಟ್ರದ್ರೋಹಿಗಳನ್ನು ರಕ್ಷಿಸಲು ಆದ್ಯತೆ ನೀಡುತ್ತಿರುವಂತಿದೆ ಎಂದು ಟೀಕಿಸಿದ್ದಾರೆ.
ಖಾಸಗಿ ಎಫ್‌ಎಸ್‌ಎಲ್ ವರದಿ ಈಗಾಗಲೇ ಪ್ರಕರಣ ಕುರಿತು ಧೃಡೀಕರಣ ನೀಡಿದೆ, ಸರ್ಕಾರಿ ವರದಿ ಸಹಾ ಸರ್ಕಾರದ ಕೈ ಸೇರಿದೆ, ಆದರೂ, ವರದಿ ಇನ್ನೂ ತಲುಪಿಲ್ಲ ಎಂಬ ಹಸೀ ಸುಳ್ಳು ಹೇಳುತ್ತಿರುವ ನಿಮ್ಮ ನಡೆ, ನಿಮ್ಮ ರಾಷ್ಟ್ರ ಬದ್ಧತೆಯನ್ನು ಪ್ರಶ್ನಿಸುವಂತಾಗಿದೆ ಎಂದು ವಿಜಯೇಂದ್ರ ಟ್ವೀಟ್‌ನಲ್ಲಿ ಕುಟುಕಿದ್ದಾರೆ.