ಬೆಂಗಳೂರು:ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ಮೂವರನ್ನು ಸರ್ಕಾರ ಬಂಧಿಸಿದೆಯಾದರೂ, ಎಫ್‌ಎಸ್‌ಎಲ್ ವರದಿಯನ್ನು ಏಕೆ ಬಿಡುಗಡೆ ಮಾಡಿಲ್ಲ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಇಂದಿಲ್ಲಿ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ತಬ್ಬಿಕೊಂಡಿರುವ ಫೋಟೋಗಳು ಸುದ್ದಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ, ದೇಶದ್ರೋಹಿಗಳಿಗೂ ಕಾಂಗ್ರೆಸ್ ನಾಯಕರಿಗೂ ಅಪ್ಪುಗೆಯ ನಂಟಿದೆ ಎಂದು ನಮಗೆ ತಿಳಿದಿರಲಿಲ್ಲ, ಪಾಕಿಸ್ತಾನ ಜಿಂದಾಬಾದ್ ನಂಟು ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿಯೇ ಇದೆ, ಕೂಡಲೇ ಎಫ್‌ಎಸ್‌ಎಲ್ ವರದಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಒಂದೊಂದು ರೀತಿ ಹೇಳಿಕೆ
ಘಟನೆ ನಡೆದ ಮರುದಿನವೇ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ ‘ಅವರು ಹಾಗೆ ಕೂಗಿಲ್ಲ, ಪಾಕಿಸ್ತಾನ ಜಿಂದಾಬಾದ್ ಎಂದು ಇಲ್ಲವೇ ಇಲ್ಲ’ ಎಂದಿದ್ದರು. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಒಬ್ಬೊಬ್ಬ ಸಚಿವರು ಒಂದೊಂದು ರೀತಿ ಹೇಳಿಕೆ ಕೊಡುತ್ತಿದ್ದಾರೆ, ಕೆಲವರು ಬಾಂಬ್ ಇಟ್ಟವರು ಬಿಜೆಪಿಯವರೇ ಇರಬಹುದು ಎಂದಿದ್ದಾರೆ.
2000 ರಲ್ಲಿ ಚರ್ಚ್‌ಗಳ ಮೇಲೆ ಬಾಂಬ್ ಸ್ಫೋಟ ಪ್ರಕರಣ ನಡೆದಾಗ, ಅಂದಿನ ಗೃಹ ಸಚಿವ, ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ತನಿಖೆಗೆ ಮುಂಚೆಯೇ ’ಘಟನೆ ಹಿಂದೆ ಆರೆಸ್ಸೆಸ್ ಪಿತೂರಿ ಇದೆ’ ಎಂದು ಫರ್ಮಾನು ಹೊರಡಿಸಿ, ಸಾರ್ವಜನಿಕ ಹೇಳಿಕೆಯನ್ನೂ ನೀಡಿದ್ದರು.
ತನಿಖೆ ನಂತರ, ಪಾಕಿಸ್ತಾನ ಪ್ರೇರಿತ ಭಯೋತ್ಪಾದಕ ಸಂಘಟನೆ ಚರ್ಚ್‌ಗಳಿಗೆ ಬಾಂಬ್ ಇಟ್ಟಿದ್ದರು ಎಂಬುದು ಬೆಳಕಿಗೆ ಬಂತು, ಅಂದು ಫ್ಲೈಓವರ‍್ನಲ್ಲಿ ಬಾಂಬ್ ಒಯ್ಯುವಾಗ ಸ್ಫೋಟ ಸಂಭವಿಸಿ ಭಯೋತ್ಪಾದಕನೂ ಸತ್ತಿದ್ದ, ಭಯೋತ್ಪಾದನಾ ಜಾಲವೂ ಹೊರಗಡೆ ಬಂದಿತ್ತು.
ಭಯೋತ್ಪಾದಕರನ್ನು ರಕ್ಷಿಸುವ ಹೇಳಿಕೆ
ಕಾಂಗ್ರೆಸ್ ಸಚಿವರು ಭಯೋತ್ಪಾದಕರನ್ನು ರಕ್ಷಿಸುವ ರೀತಿಯಲ್ಲಿ ಹೇಳಿಕೆ ಕೊಡುತ್ತಿದ್ದಾರೆ, ಇಂಥ ವಿಷಯದಲ್ಲಿ ರಾಜಕಾರಣ ಮಾಡುವುದು ಬೇಡ ಎಂಬುದಾಗಿ ಮುಖ್ಯಮಂತ್ರಿ ಹೇಳುತ್ತಾರೆ, ಇನ್ನೊಬ್ಬ ಸಚಿವರು ಭೀತರಾಗದಿರಿ, ಇದೊಂದು ಲಘು ಸ್ಫೋಟ ಎಂದಿದ್ದಾರೆ, ಪ್ರಕರಣದ ತನಿಖೆಗೆ ಮೊದಲೇ ವಿಷಯಾಂತರ ಮಾಡುವ, ದಿಕ್ಕು ತಪ್ಪಿಸುವ ಕೆಲಸವನ್ನು ಕರ್ನಾಟಕದ ಕಾಂಗ್ರೆಸ್ ಸಚಿವರು ಮಾಡುತ್ತಿರುವುದು, ಯಾರನ್ನೋ ರಕ್ಷಿಸುವ ಉದ್ದೇಶ ಹೊಂದಿದ್ದಾರೆ ಎಂಬ ಅನುಮಾನಕ್ಕೆ ಕಾರಣವಾಗಿದೆ ಎಂದರು.