ಮಹಿಳಾ ದಿನಾಚರಣೆಯಂದು ಕನ್ನಡಿತಿಗೆ ಸಂದ ಗೌರವ
ಬೆಂಗಳೂರು: ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಸುಧಾಮೂರ್ತಿ ಅವರು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಾರೆ.
ಲಕ್ಷಾಂತರ ಮಂದಿಗೆ ಐಟಿ ಉದ್ಯಮದಲ್ಲಿಉದ್ಯೋಗ ಕಲ್ಪಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಸಂಪನ್ಮೂಲ ಒದಗಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿರುವ ಇನ್ಫೋಸಿಸ್, ಸಾಮಾಜಿಕ ಸೇವೆಯಲ್ಲೂ ಸಕ್ರೀಯವಾಗಿ ತೊಡಗಿಸಿಕೊಂಡಿದೆ.
ಅಂತಹ ಸಂಸ್ಥೆಯ ಸಂಸ್ಥಾಪಕರಾದ ನಾರಾಯಣ ಮೂರ್ತಿ ಅವರ ಪತ್ನಿ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಬ್ರಿಟನ್ ನಲ್ಲಿ ಸುಧಾಮೂರ್ತಿ ಅವರ ಅಳಿಯ ಪ್ರಧಾನಿಯಾಗಿರುವ ಸಂದರ್ಭದಲ್ಲಿಯೇ ಕೇಂದ್ರ ಸರ್ಕಾರ ರಾಜ್ಯಸಭೆ ಸದಸ್ಯರಾಗಿ ನಾಮ ನಿರ್ದೇಶನ ಮಾಡಿದೆ. ಇದೊಂದು ದೊಡ್ಡ ಗೌರವ ನೀಡಿದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವ ವಿಷಯವನ್ನು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲೂ ಶಿವರಾತ್ರಿ ಹಬ್ಬ ಹಾಗೂ ವಿಶ್ವ ಮಹಿಳಾ ದಿನಾಚರಣೆಯಂದು ಈ ವಿಷಯವನ್ನು ಪೋಸ್ಟ್ ಮಾಡಿದ್ದಾರೆ.
ಭಾರತ ದೇಶದ ರಾಷ್ಟ್ರಪತಿಯವರಾದ ದ್ರೌಪದಿ ಮುರ್ಮು ಅವರು ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ಖುಷಿ ತಂದಿದೆ. ಸಮಾಜಸೇವೆ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸುಧಾಮೂರ್ತಿ ಅವರು ಸಲ್ಲಿಸಿರುವ ಸೇವೆ ಸಾಕಷ್ಟಿದೆ.
ರಾಜ್ಯಸಭೆಯಲ್ಲಿ ಸುಧಾಮೂರ್ತಿ ಅವರ ಉಪಸ್ಥಿತಿಯು ನಮ್ಮ ನಾರಿ ಶಕ್ತಿಗೆ ಬಲ ನೀಡಿದಂತಾಗಲಿದೆ. ನಮ್ಮ ದೇಶದ ಮುಂದಿನ ಭವಿಷ್ಯ ರೂಪಿಸುವಲ್ಲಿ ಮಹಿಳೆಯರ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಇದೊಂದು ನಿದರ್ಶನವಾಗಿದೆ. ಅವರ ಸಂಸದೀಯ ಅವಧಿ ಫಲಪ್ರದವಾಗಲಿ ಎಂದು ಪ್ರಧಾನಿಯವರು ಶುಭ ಹಾರೈಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ಗಣ್ಯರು, ಮಠಗಳು ಹಾಗೂ ಸಂಸ್ಥೆಗಳು ಸುಧಾಮೂರ್ತಿ ಅವರನ್ನು ಅಭಿನಂದಿಸಿವೆ.
ಎಂದಿಗೂ ರಾಜ್ಯಸಭೆ ಸದಸ್ಯ ಸ್ಥಾನವನ್ನು ಬಯಸಿರಲಿಲ್ಲ. ಕೇಂದ್ರ ಸರ್ಕಾರವು ನನ್ನನ್ನು ನಾಮನಿರ್ದೇಶನ ಮಾಡಲು ಏಕೆ ಆಯ್ಕೆ ಮಾಡಿತು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ ಎಂದು ಸುಧಾಮೂರ್ತಿ ಅವರು ಪ್ರತಿಕ್ರಿಯಿಸಿದ್ದಾರೆ.