ಬೆಂಗಳೂರು:ಲೋಕಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಎರಡು-ಮೂರು ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ತಿಳಿಸಿದ್ದಾರೆ.
ಅಭ್ಯರ್ಥಿಗಳ ಆಯ್ಕೆ ಸಂಬಂಧ ಪಕ್ಷದ ವರಿಷ್ಠರು ರಾಜ್ಯದ ಮುಖಂಡರೊಂದಿಗೆ ಎರಡು ಸುತ್ತಿನ ಮಾತುಕತೆ ಮುಗಿಸಿದ್ದಾರೆ, ಚರ್ಚೆ ಸಂದರ್ಭದಲ್ಲಿ ರಾಜ್ಯ 28 ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿ, ಸಂಭವನೀಯ ಅಭ್ಯರ್ಥಿಗಳ ಪಟ್ಟಿ ನೀಡಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ.50 ರಷ್ಟು ಕ್ಷೇತ್ರಗಳಿಗೆ ಮೊದಲ ಹಂತದಲ್ಲಿಯೇ ಅಭ್ಯರ್ಥಿಗಳ ಪಟ್ಟಿ ಹೊರಬೀಳಲಿದೆ, ರಾಜ್ಯ ನಾಯಕರಿಂದ ಮಾಹಿತಿ ಪಡೆದಿರುವ ವರಿಷ್ಠರು ಕೆಲವು ಮಾನದಂಡಗಳನ್ನು ಆಧಾರವಾಗಿಟ್ಟುಕೊಂಡು ಹಾಗೂ ಚುನಾವಣಾ ಪೂರ್ವ ಸಮೀಕ್ಷೆ ವರದಿ ಮೇಲೆ ಅಭ್ಯರ್ಥಿಗಳ ಆಯ್ಕೆ ಮಾಡಲಿದ್ದಾರೆ.
28 ಕ್ಷೇತ್ರಗಳಲ್ಲೂ ಗೆಲ್ಲಬೇಕೆಂಬ ಗುರಿ
ಈ ಬಾರಿ 28 ಕ್ಷೇತ್ರಗಳಲ್ಲೂ ಗೆಲ್ಲಬೇಕೆಂಬ ಗುರಿ ನಮ್ಮದಾಗಿದೆ, ಹಾಗಾಗಿ ವರಿಷ್ಠರು ಹಲವು ಸುತ್ತಿನ ಕಸರತ್ತಿನ ನಂತರ ಗೆಲುವಿನ ರೂವಾರಿಗಳ ಹೆಸರನ್ನು ಪ್ರಕಟಿಸಲಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹೊಸ ಇತಿಹಾಸ ಸೃಷ್ಟಿಸುವ ವಿಶ್ವಾಸವಿದೆ, ಹಿಂದಿಗಿಂತ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪರ ವಾತಾವರಣ ರಾಜ್ಯದಲ್ಲಿದ್ದು, ಇದರ ಮೂಲಕ ನಮ್ಮ ಗುರಿಯನ್ನು ಮುಟ್ಟುತ್ತೇವೆ.
ಕಾರ್ಯಕ್ರಮಗಳು ಜನರ ಮನೆ ಬಾಗಿಲಿಗೆ
ಪ್ರಧಾನಿ ಅವರು ಕಳೆದ 10 ವರ್ಷಗಳಲ್ಲಿ ನೀಡಿರುವ ಕಾರ್ಯಕ್ರಮಗಳು ಜನರ ಮನೆ ಬಾಗಿಲಿಗೆ ಮುಟ್ಟಿವೆ, ದೇಶದ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಯೇ ಉತ್ತಮ ಮತ್ತು ನರೇಂದ್ರ ಮೋದಿ ಅವರ ಆಡಳಿತವೇ ಬೇಕೆಂಬ ತೀರ್ಮಾನಕ್ಕೆ ರಾಜ್ಯದ ಜನರೂ ಬಂದಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಮತ ಗಳಿಸಲು ಹೊರಟಿದೆ, ಆದರೆ, ಜನತೆ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ ಎಂದರು.