ಸುರೇಶ್ ಮಣಿಸಲು ಅಸ್ತ್ರ
ಬೆಂಗಳೂರು:ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಹೃದಯ ತಜ್ಞ ಡಾ.ಸಿ.ಎನ್.ಮಂಜುನಾಥ್ ನಾಳೆ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ.
ದೇವೇಗೌಡರ ಕುಟುಂಬದ ಸದಸ್ಯರೊಬ್ಬರು ಕಮಲ ಹಿಡಿಯುತ್ತಿರುವುದು ಇದೇ ಮೊದಲಾಗಿದೆ.
ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಹಾಲಿ ಸಂಸದ ಡಿ.ಕೆ.ಸುರೇಶ್ ಅವರನ್ನು ಚುನಾವಣೆಯಲ್ಲಿ ಮಣಿಸಲು ದೆಹಲಿಯ ಬಿಜೆಪಿ ಮುಖಂಡರೇ ಮಂಜುನಾಥ್ ಅವರನ್ನು ಅಸ್ತ್ರವನ್ನಾಗಿ ಬಳಕೆ ಮಾಡಿಕೊಂಡಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ
ಕರ್ನಾಟಕದ 21 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ವರಿಷ್ಠರು ನಾಳೆ ಸಂಜೆ ವೇಳೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದು, ಮೊದಲ ಪಟ್ಟಿಯಲ್ಲೇ ಮಂಜುನಾಥ್ ಹೆಸರು ಇರಲಿದೆ.
ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆಯದೆ ಟಿಕೆಟ್ ಘೋಷಣೆ ಸರಿಯಲ್ಲ ಎಂಬ ಕಾರಣಕ್ಕೆ ನಾಳೆ ಬೆಳಗ್ಗೆ ಪಕ್ಷದ ಕಚೇರಿಯಲ್ಲಿ ಮಂಜುನಾಥ್ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ.
ಪಕ್ಷಕ್ಕೆ ಸೇರ್ಪಡೆಗೂ ಮುನ್ನ ಮಂಜುನಾಥ್ ಇಂದು ಸಂಜೆ ಯಡಿಯೂರಪ್ಪ ನಿವಾಸಕ್ಕೆ ತೆರಳಿ ಅವರೊಂದಿಗೆ ಚರ್ಚಿಸಿದ್ದಲ್ಲದೆ, ಸಹಕಾರ ಕೋರಿದರು.
ಮಂಜುನಾಥ್ ಕೈಗೆ ಕಮಲ
ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಾಧಾ ಮೋಹನ್ ದಾಸ್ ಅಗರವಾಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಕ್ಷೇತ್ರದ ಚುನಾವಣಾ ಉಸ್ತುವಾರಿ ಸಿ.ಪಿ.ಯೋಗೇಶ್ವರ್ ಹಾಗೂ ಮುನಿರತ್ನ ಅವರ ಸಮ್ಮುಖದಲ್ಲಿ ಮಂಜುನಾಥ್ ಕಮಲದ ಕೈಹಿಡಿಯಲಿದ್ದಾರೆ.
ಮಂಜುನಾಥ್ ಇನ್ನೂ ಬಿಜೆಪಿ ಸೇರಿಲ್ಲ, ಆದರೆ, ರಾಜರಾಜೇಶ್ವರಿನಗರದಲ್ಲಿ ಚುನಾವಣಾ ಸಿದ್ಧತಾ ಸಭೆಗಳಲ್ಲಿ ಭಾಗವಹಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ಮಂಡ್ಯ ಹೊರತುಪಡಿಸಿ ಉಳಿದ 25 ಕ್ಷೇತ್ರಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. ನಂತರದ ದಿನಗಳಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಕೂಡ ಬಿಜೆಪಿ ಸೇರ್ಪಡೆಗೊಂಡರು.
28 ಕ್ಷೇತ್ರಗಳಲ್ಲೂ ಗೆಲುವಿನ ಗುರಿ
ಬರುವ ಚುನಾವಣೆಯಲ್ಲೂ 28 ಕ್ಷೇತ್ರಗಳಲ್ಲೂ ಗೆಲ್ಲಬೇಕೆಂಬ ಗುರಿಯನ್ನು ಪಕ್ಷದ ವರಿಷ್ಠರು ರಾಜ್ಯ ನಾಯಕರಿಗೆ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ವರಿಷ್ಠರು ಪ್ರತಿಷ್ಠೆ ಕಣವಾಗಿ ತೆಗೆದುಕೊಂಡಿದ್ದಾರೆ. ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸುರೇಶ್ ದೇಶ ವಿಭಜನೆ ಮಾತನ್ನು ಆಡಿದ ನಂತರ ಅವರನ್ನು ಮಣಿಸಲೇಬೇಕೆಂದು ಪಣ ತೊಟ್ಟಿದ್ದಾರೆ.
ಇದಕ್ಕಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಜನಪ್ರಿಯವಾಗಿರುವ ಡಾ.ಮಂಜುನಾಥ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಕಣಕ್ಕಿಳಿಸಿ ಹೋರಾಟಕ್ಕೆ ಮುಂದಾಗಿದ್ದಾರೆ.