ಸಂಪುಟ ಸಹೋದ್ಯೋಗಿಗಳಿಗೆ ಸಿದ್ದರಾಮಯ್ಯ ತಾಕೀತು
ಬೆಂಗಳೂರು:ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಲು ನೀವು ಕಣಕ್ಕಿಳಿಯಿರಿ ಇಲ್ಲದಿದ್ದರೆ, ನಿಮ್ಮ ಕುಟುಂಬದವರನ್ನು ಕಣಕ್ಕಿಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ತಾಕೀತು ಮಾಡಿದ್ದಾರೆ.
ಸಚಿವ ಸ್ಥಾನ ತೊರೆದು ಚುನಾವಣಾ ಕಣಕ್ಕಿಳಿಯಲು ಆಸಕ್ತಿ ತೋರದೆ ತಮ್ಮ ಕುಟುಂಬದವರನ್ನು ಗೆಲ್ಲಿಸಿಕೊಂಡು ಬರುವ ಭರವಸೆಯನ್ನು ಸಚಿವರುಗಳು ಮುಖ್ಯಮಂತ್ರಿ ಅವರಿಗೆ ನೀಡಿದ್ದಾರೆ.
ಆದರೆ, ಸಚಿವ ರಾಮಲಿಂಗಾರೆಡ್ಡಿ ಸಮಯಾವಕಾಶ ಕೋರಿದ್ದರೆ, ಜಾರಕಿಹೊಳಿ ಸಾರಾಸಗಟಾಗಿ ತಾವಾಗಲೀ ಅಥವಾ ತಮ್ಮ ಕುಟುಂಬದವರಾಗಲೀ ಕಣಕ್ಕಿಳಿಯುವುದಿಲ್ಲ ಎಂದು ಸಭೆಯಲ್ಲೇ ಸ್ಪಷ್ಟಪಡಿಸಿದ್ದಾರೆ.
ಕುಟುಂಬದವರನ್ನು ಕಣಕ್ಕಿಳಿಸಲು ಬಿಗಿಪಟ್ಟು
ಆದರೆ ಮುಖ್ಯಮಂತ್ರಿ ಅವರು ಪಟ್ಟು ಬಿಡದೆ, ಚುನಾವಣಾ ಪೂರ್ವ ಸಮೀಕ್ಷೆ ಹಾಗೂ ಜನಾಭಿಪ್ರಾಯವನ್ನು ಆಧಾರವಾಗಿಟ್ಟುಕೊಂಡು ನಾನು ಹೇಳುತ್ತಿದ್ದೇನೆ, ನೀವು ಇಲ್ಲವೆ ನಿಮ್ಮ ಕುಟುಂಬದವರನ್ನು ಕಣಕ್ಕಿಳಿಸುವಂತೆ ಬಿಗಿಪಟ್ಟು ಹಿಡಿದರೆಂದು ಹೇಳಲಾಗಿದೆ.
ಈ ಬೆಳವಣಿಗೆ ನಂತರ ಚಾಮರಾಜನಗರ ಮೀಸಲು ಕ್ಷೇತ್ರಕ್ಕೆ ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್, ದಾವಣಗೆರೆಯಿಂದ ಮಲ್ಲಿಕಾರ್ಜುನ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್, ಕೋಲಾರದಿಂದ ತಮ್ಮ ಅಳಿಯ ಚಿಕ್ಕಪೆದ್ದಯ್ಯ ಅವರನ್ನು ಮುನಿಯಪ್ಪ ಕಣಕಿಳಿಸುತ್ತಿದ್ದಾರೆ.
ಇನ್ನು ಬೆಳಗಾವಿಯಿಂದ ಸಚಿವೆ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಅವರ ಹೆಸರನ್ನು ಸಿಡ್ಲ್ಯೂಸಿಗೆ ಶಿಫಾರಸು ಮಾಡಲಾಗಿದೆ.
ಸಮ್ಮತಿಸದ ಸಚಿವರು
ಚಿಕ್ಕೋಡಿಯಿಂದ ಜಾರಕಿಹೊಳಿ ಪುತ್ರಿ ಪ್ರಿಯಾಂಕ, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಎಂದು ಚರ್ಚೆ ಆಗಿದ್ದರೂ, ಆ ಸಚಿವರು ಸಮ್ಮತಿಸದ ಕಾರಣ ಕ್ಷೇತ್ರದ ಆಯ್ಕೆ ಅಂತಿಮವಾಗಿಲ್ಲ.
ಧಾರವಾಡ ಕ್ಷೇತ್ರದಿಂದ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ, ಉಡುಪಿ-ಚಿಕ್ಕಮಗಳೂರಿನಿಂದ ಜಯಪ್ರಕಾಶ್ ಹೆಗ್ಗಡೆ, ಚಿಕ್ಕಬಳ್ಳಾಪುರದಿಂದ ರಕ್ಷಾ ರಾಮಯ್ಯ, ಕೊಪ್ಪಳಕ್ಕೆ ರಾಜಶೇಖರ್ ಹಿಟ್ನಾಳ್, ರಾಯಚೂರಿಗೆ ಜಿ.ಕುಮಾರ ನಾಯಕ್, ಬಾಗಲಕೋಟೆಗೆ ಆನಂದ ನ್ಯಾಮಗೌಡ ಅವರ ಹೆಸರುಗಳು ಅಂತಿಮಗೊಂಡಿವೆ.
ಮೈಸೂರು-ಕೊಡಗು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಲಕ್ಷ್ಮಣ ಅವರ ಹೆಸರು ಅಂತಿಮಗೊಂಡಿದ್ದರೂ ಮುಖ್ಯಮಂತ್ರಿ ಅವರು, ಈ ಕ್ಷೇತ್ರದ ಬಗ್ಗೆ ನಂತರ ನಿರ್ಧಾರ ಕೈಗೊಳ್ಳೋಣ ಎಂದು ಸಭೆಯಲ್ಲಿ ತಿಳಿಸಿದ್ದಾರಂತೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಏಳಕ್ಕೆ ಅಭ್ಯರ್ಥಿ ಹೆಸರುಗಳನ್ನು ಪ್ರಕಟಿಸಿರುವ ಕಾಂಗ್ರೆಸ್, ಉಳಿದ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಸುದೀರ್ಘ ಸಭೆ ನಡೆಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ಈ ಆದೇಶ ಮಾಡಿದ್ದಾರೆ.