ಮಂಡ್ಯ – ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಸಲಹೆ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಮತ್ತೆ ತೀವ್ರ ಒತ್ತಡ ಬಂದಿದೆ.
ರಾಜ್ಯದ ಚೌಕಟ್ಟಿನಲ್ಲಿ ರಾಜಕೀಯ ಮಾಡಿಕೊಂಡು ಇರಬೇಡಿ. ಯಾವುದಕ್ಕೂ ಹೆದರುವುದು ಬೇಡ. ನಿಮಗೆ ಮಂಡ್ಯ ಸೇರಿದಂತೆ ಯಾವ ಕ್ಷೇತ್ರ ಅನುಕೂಲವಾಗುವುದೋ ಆ ಕ್ಷೇತ್ರದಿಂದಲೇ ಸ್ಪರ್ಧಿಸಿ ಎಂದು ಪ್ರಧಾನಿ ಅವರು ಕುಮಾರಸ್ವಾಮಿ ಅವರ ಮೇಲೆ ಒತ್ತಡ ತಂದಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಎಂದು ಶಾ ಪಟ್ಟು ಹಿಡಿದಿದ್ದಾರೆ. ಉಭಯ ನಾಯಕರ ಸಲಹೆಯನ್ನು ಕುಮಾರಸ್ವಾಮಿ ನಯವಾಗಿ ತಳ್ಳಿ ಹಾಕಿರುವುದಲ್ಲದೆ, ತಾವು ಸದ್ಯದಲ್ಲೇ ಶಸ್ತ್ರಚಿಕಿತ್ಸೆ ಒಳಗಾಗುತ್ತಿದ್ದು, ಹೋರಾಟ ಮಾಡಲು ಸಾಧ್ಯವಾಗುವುದಿಲ್ಲ. ಸ್ಪರ್ಧಿಸದಿರಲು ಬೇರೆ ಯಾವ ಉದ್ದೇಶ ನನಗಿಲ್ಲ ಎಂದು ಶಾ ಅವರ ಬಳಿ ಕುಮಾರಸ್ವಾಮಿ ಹೇಳಿದ್ದಾರೆ.
ಇದಾದ ಬೆಳವಣಿಗೆಯ ನಂತರ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿರುವ ಪ್ರಧಾನಿ ಅವರು, ನೀವು ಲೇಸರ್ ಚಿಕಿತ್ಸೆಗೆ ಒಳಗಾಗುತ್ತಿದ್ದೀರಿ. ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ. ಮಾರ್ಚ್ 25ರಂದು ಆಸ್ಪತ್ರೆಯಿಂದ ಮರಳಿದ ನಂತರ ಮಂಡ್ಯದಲ್ಲೇ ನಿರ್ಧಾರ ಪ್ರಕಟಿಸಿ ಎಂಬ ಸಲಹೆ ಮಾಡಿದ್ದಾರೆ.
ಅಲ್ಲದೆ, ಹೃದಯ ತಜ್ಞ ಡಾ. ಸಿ.ಎನ್. ಮಂಜುನಾಥ್ ಅವರು ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಸಮ್ಮತಿಸಿರುವ ಬಗ್ಗೆ ಪ್ರಧಾನಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪ್ರಧಾನಿ ಅವರ ಮಾತನ್ನು ತಳ್ಳಿ ಹಾಕಲಾಗದ ಕುಮಾರಸ್ವಾಮಿ ಅವರು, ಚನ್ನೈ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ಮಾರ್ಚ್ 25ರಂದು ಮಂಡ್ಯದಲ್ಲೇ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ಕರೆಯಲಿದ್ದಾರೆ. ಆ ಸಭೆಯಲ್ಲೇ ನಿರ್ಧಾರ ಪ್ರಕಟಿಸಲಿದ್ದಾರೆ.
ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಅವರ ಸ್ಪರ್ಧೆಗೆ ಕುಮಾರಸ್ವಾಮಿ ಅವರು, ಈಗಾಗಲೇ ಹಸಿರು ನಿಶಾನೆ ತೋರಿದ್ದಾರೆ. ಆದರೂ ಪ್ರಧಾನಿ ಅವರ ಒತ್ತಡದಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಶಸ್ತ್ರ ಚಿಕಿತ್ಸೆಯ ನಂತರ ತಮ್ಮ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಅವರ ಮಾತಿಗೆ ಮನ್ನಣೆ ನೀಡಬೇಕೋ ಅಥವಾ ರಾಜ್ಯ ರಾಜಕಾರಣದಲ್ಲಿ ಮುಂದುವರೆಯಬೇಕೋ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.
ಈ ಮಧ್ಯೆ ಕಗ್ಗಂಟಾಗಿರುವ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಅಮಿತ್ ಶಾ ಅವರೊಂದಿಗೆ ಚರ್ಚೆ ಮಾಡಿದ್ದಾರೆ. ಈ ಕ್ಷೇತ್ರದ ಬಗ್ಗೆ ನಾಳೆ ಒಂದು ಅಂತಿಮ ತೀರ್ಮಾನವಾಗಲಿದೆ. ಈ ನಡುವೆ ಕುಮಾರಸ್ವಾಮಿ ಅವರು ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಮುಖಂಡರ ಸಭೆ ಕರೆದಿದ್ದಾರೆ.