ಮೂರನೇ ಬಾರಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಬೆಂಗಳೂರು: ಚನ್ನೈನಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆಸ್ಪತ್ರೆಯಿಂದ ಭಾನುವಾರ ಡಿಸ್ ಚಾರ್ಜ್ ಆಗಲಿದ್ದಾರೆ.
ಮಾರ್ಚ್ 21ರಂದು ಖ್ಯಾತ ಹೃದಯ ತಜ್ಞ ಡಾ. ಸಿ.ಎನ್. ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ವಿದೇಶಿ ವೈದ್ಯರ ತಂಡವು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿತ್ತು.
ಎರಡು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿದ್ದ ಕುಮಾರಸ್ವಾಮಿ ಅವರು ವಾರ್ಡ್ ಗೆ ಶಿಫ್ಟ್ ಆಗಿದ್ದಾರೆ. ಒಂದು ದಿನದ ಮಟ್ಟಿಗೆ ವಿಶ್ರಾಂತಿ ಪಡೆದು ಭಾನುವಾರ ಮನೆಗೆ ಹಿಂದಿರುಗಲಿದ್ದಾರೆ.
ಕುಮಾರಸ್ವಾಮಿ ಅವರಿಗೆ ಮೂರನೇ ಬಾರಿಗೆ ಹೃದಯ ಕವಾಟಗಳನ್ನು ಬದಲಾವಣೆ ಮಾಡಲಾಗಿದೆ. ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಿದ್ದಲ್ಲಿ ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆಯಿಂದ ದೂರ ಉಳಿದು ಮೂರು ತಿಂಗಳ ಕಾಲ ವಿಶ್ರಾಂತಿ ಪಡೆಯಬೇಕಿತ್ತು.
ಅತ್ಯಾಧುನಿಕ ತಂತ್ರಜ್ಞಾನ ಬಳಸಿ, ಮೂಳೆ ಮತ್ತು ಮಾಂಸಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ರಕ್ತ ನಾಳದ ಮೂಲಕವೇ ಎರಡು ಕವಾಟಗಳನ್ನು ಬದಲಾಯಿಸಿರುವುದರಿಂದ ಕುಮಾರಸ್ವಾಮಿ ಅವರಿಗೆ ನಾಲ್ಕೈದು ದಿನಗಳಿಗಿಂತ ಹೆಚ್ಚಿನ ವಿಶ್ರಾಂತಿ ಅಗತ್ಯವಿಲ್ಲ.
ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಆರೋಗ್ಯ ಕ್ಷೇತ್ರದಲ್ಲೂ ಮಹತ್ತರ ಸಂಶೋಧನೆಗಳನ್ನು ನಡೆಸಿರುವ ವೈದ್ಯ ವಿಜ್ಞಾನಿಗಳು, ನಾಳದ ಮೂಲಕವೇ ಕವಾಟಗಳನ್ನು ಬದಲಿಸುವ ಸುಧಾರಿತ ಚಿಕಿತ್ಸೆ ಕಂಡುಹಿಡಿದಿದ್ದಾರೆ.
ಚನ್ನೈನ ಅಪಲೋ ಆಸ್ಪತ್ರೆಯಲ್ಲಿ ಇಂತಹ ಶಸ್ತ್ರ ಚಿಕಿತ್ಸೆಗೆ ಅವಕಾಶವಿದ್ದರೂ ಕುಮಾರಸ್ವಾಮಿ ವಿಚಾರದಲ್ಲಿ ಭಾರೀ ಸೂಕ್ಷ್ಮತೆ ಇತ್ತು. ಹೀಗಾಗಿ ಅಲ್ಲಿನ ಖ್ಯಾತ ಹೃದಯ ತಜ್ಞರು ವಿದೇಶಿ ವೈದ್ಯರ ನೆರವು ಪಡೆದು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಮುಂದಿನ ಬುಧವಾರದಿಂದ ಅವರು ಸಕ್ರಿಯವಾಗಿ ತಮ್ಮನ್ನು ಚುನಾವಣೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಮಂಡ್ಯದಿಂದ ಚುನಾವಣಾ ಸ್ಪರ್ಧೆಗಿಳಿಯಬೇಕು ಎಂದು ಜೆಡಿಎಸ್ ಕಾರ್ಯಕರ್ತರ ಒತ್ತಡ ಇರುವ ಹಿನ್ನೆಲೆಯಲ್ಲಿ ಆ ಜಿಲ್ಲೆಯ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
1 comment
[…] Special Story […]