ಬಿಜೆಪಿಯ ಉಳಿದ 5 ಕ್ಷೇತ್ರಗಳ ಅಭ್ಯರ್ಥಿ ಪ್ರಕಟಣೆ ಬಾಕಿ
ಬೆಂಗಳೂರು:ಜೆಡಿಎಸ್-ಬಿಜೆಪಿ ನಡುವಿನ ಸೀಟು ಹಂಚಿಕೆ ಪ್ರಕ್ರಿಯೆ ಅಂತಿಮವಾಗಿದ್ದು, ವಿವಾದಿತ ಕೋಲಾರ ಲೋಕಸಭಾ ಕ್ಷೇತ್ರ ಸೇರಿದಂತೆ ಹಾಸನ ಮತ್ತು ಮಂಡ್ಯ ಕ್ಷೇತ್ರಗಳು ಜೆಡಿಎಸ್ ಪಾಲಾಗಿವೆ. ಉಳಿದ 25 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ದೆಹಲಿಯಲ್ಲಿದ್ದು ಬಿಜೆಪಿ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿದ ನಂತರ ಸೀಟು ಹಂಚಿಕೆ ಪೂರ್ಣಗೊಂಡಿತು.

ಸೀಟು ಹಂಚಿಕೆ
ಕುಮಾರಸ್ವಾಮಿ ಅವರು, ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವುದರಿಂದ ದೇವೇಗೌಡರೇ ಸೀಟು ಹಂಚಿಕೆ ಹಾಗೂ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಉಭಯ ನಾಯಕರ ಜೊತೆ ಮಾತುಕತೆ ನಡೆಸಿದರು.
ಈಗಾಗಲೇ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಬಿಜೆಪಿ, ಇನ್ನು ತನ್ನ ಪಾಲಿನ ಐದು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಯಾವುದೇ ಕ್ಷಣದಲ್ಲಿ ಪ್ರಕಟಿಸಲಿದೆ.
ಅಧಿಕೃತ ಘೋಷಣೆ

ದೆಹಲಿಯಲ್ಲಿ ಮಾತುಕತೆ ಮುಗಿಯುತ್ತಿದ್ದಂತೆ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ರಾಧಾ ಮೋಹನ್ ದಾಸ್ ಅಗರರ್ವಾಲ್ ಎನ್‌ಡಿಎ ಮೈತ್ರಿ ಕೂಟದ ಕ್ಷೇತ್ರ ಹಂಚಿಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಅರಮನೆ ಆವರಣದಲ್ಲಿ ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿಯ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೋಲಾರ ಲೋಕಸಭಾ ಕ್ಷೇತ್ರವನ್ನು ಮಿತ್ರ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದಾಗಿ ಅಧಿಕೃತ ಘೋಷಣೆ ಮಾಡಿದರು.
ಉಳಿದ 25 ಕ್ಷೇತ್ರಗಳಲ್ಲಿ ನಾವು ಸ್ಪರ್ಧಿಸುತ್ತಿದ್ದು, ಉಭಯ ಪಕ್ಷದ ಮುಖಂಡರು, ಕಾರ್ಯಕರ್ತರು ಇಂದಿನಿಂದಲೇ ಚುನಾವಣಾ ಹೋರಾಟ ನಡೆಸಿ, ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಬೇಕೆಂದರು.
ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಪಕ್ಷದ ಅಧಿಕೃತ ಅಭ್ಯರ್ಥಿಗಳ ಪರ ಕೆಲಸ ಮಾಡಿ, ಇಲ್ಲದಿದ್ದರೆ ಕಠಿಣ ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
2 comments
[…] ರಾಜಕೀಯ […]
[…] ರಾಜಕೀಯ […]