ಪ್ರಮುಖರ ಸಮ್ಮಖದಲ್ಲಿ ಪಕ್ಷ ಸೇರ್ಪಡೆ
ಬೆಂಗಳೂರು:ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಂತರ ಗಣಿ ಧಣಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಬಿಜೆಪಿಗೆ ಮತ್ತೆ ಮರಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಕಡೆಗಾಣಿಸಲಾಗಿದೆ ಎಂದು ಬಿಜೆಪಿ ವರಿಷ್ಠರ ವಿರುದ್ಧ ಮುನಿಸಿಕೊಂಡು ಕಲ್ಯಾಣ ಕರ್ನಾಟಕ ಭಾಗಕ್ಕೆ ಸೀಮಿತವಾಗಿ ಪಕ್ಷ ಕಟ್ಟಿ ತಾವು ವಿಧಾನಸಭೆ ಪ್ರವೇಶಿಸಿದ್ದರು.
ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ರೆಡ್ಡಿ ಜೊತೆ ಸಂಧಾನ ನಡೆಸಿ ಬಿಜೆಪಿಗೆ ಸೇರ್ಪಡೆಗೊಳ್ಳಲು ಹಾದಿ ಸುಗಮಗೊಳಿಸಿದ್ದರು.
ಬಿಜೆಪಿ ವರಿಷ್ಠರಿಂದ ಹಸಿರು ನಿಶಾನೆ
ಬಿಜೆಪಿ ವರಿಷ್ಠರಿಂದ ಹಸಿರು ನಿಶಾನೆ ದೊರೆಯುತ್ತಿದ್ದಂತೆ ರೆಡ್ಡಿ ಇಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲಿ ಕಮಲದ ಚಿನ್ಹೆ ಹಿಡಿದರು.
ತಾವು ಕಮಲದ ಚಿನ್ಹೆ ಹಿಡಿಯುವುದರ ಜೊತೆಗೆ ಪಕ್ಷವನ್ನು ಬಿಜೆಪಿಯಲ್ಲಿ ಪೂರ್ಣವಾಗಿ ವಿಲೀನಗೊಳಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಮತ್ತು ವಿಜಯನಗರದ ಮುಖಂಡರುಗಳು, ಬಳ್ಳಾರಿ ಲೋಕಸಭಾ ಅಭ್ಯರ್ಥಿ ಶ್ರೀರಾಮುಲು ಉಪಸ್ಥಿತರಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಕ್ಕೆ ಐತಿಹಾಸಿಕ ಗೆಲುವು ಖಚಿತ, ರೆಡ್ಡಿ ಅವರು ತಮ್ಮ ಪಕ್ಷವನ್ನು ಬಿಜೆಪಿ ಜೊತೆ ವಿಲೀನಗೊಳಿಸಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ದೊಡ್ಡ ಶಕ್ತಿ ಬಂದಿದೆ, ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯಾಗಿ ಮಾಡಲು ಪಕ್ಷ ಸೇರಿದ್ದಾರೆ ಎಂದರು.
ಬಿಜೆಪಿ ಪರ ವಾತಾವರಣ
ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ಇದೆ, ಮುಂದಿನ ಲೋಕಸಭಾ ಚುನಾವಣೆ ದೇಶದ ಭವಿಷ್ಯ ರೂಪಿಸಲಿದೆ, ಪಕ್ಷದ ಹಿತದೃಷ್ಟಿ, ಏಳಿಗೆಗಾಗಿ ಎಲ್ಲರನ್ನೂ ತೊಡಗಿಸಿಕೊಳ್ಳಲಿದ್ದೇವೆ ಎಂದರು.
ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ವಿಲೀನ ಮಾಡಿದ್ದೇವೆ, ಪಕ್ಷದ ಎಲ್ಲ ಕಾರ್ಯಕರ್ತರು, ಬೆಂಬಲಿಗರು ಯಡಿಯೂರಪ್ಪ ಅವರ ಆಶೀರ್ವಾದ, ವಿಜಯೇಂದ್ರ ಅವರ ನೇತೃತ್ವದಲ್ಲಿ ಬಿಜೆಪಿ ಸೇರಿದ್ದೇವೆ, ದೇಶದ ಸಮಗ್ರತೆ, ಸರ್ವತೋಮುಖ ಅಭಿವೃದ್ಧಿಗೆ, ಭಾರತವನ್ನು ವಿಶ್ವಗುರುವಾಗಿಸುವಲ್ಲಿ ಕೆಲಸ ಮಾಡಿದ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಪಕ್ಷ ಸೇರಿದ್ದೇನೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ತಮ್ಮನ್ನು ದೆಹಲಿಗೆ ಆಹ್ವಾನಿಸಿ, ಬಿಜೆಪಿಗೆ ಸೇರಲು ತಿಳಿಸಿದಂತೆ ಪಕ್ಷ ಸೇರಿದ್ದೇನೆ, ಯಡಿಯೂರಪ್ಪ ಅವರು ನಾನು ಸಚಿವನಾಗಲು ಅತಿ ಚಿಕ್ಕ ವಯಸ್ಸಿನಲ್ಲೇ ಅವಕಾಶ ಕೊಟ್ಟಿದ್ದರು ಎಂದು ಸ್ಮರಿಸಿದರು.
1 comment
[…] ರಾಜಕೀಯ […]