ಸಚಿವರ ಹೇಳಿಕೆಗೆ ತೀವ್ರ ವಿರೋಧ
ಹುಬ್ಬಳ್ಳಿ: ಮೋದಿ..,ಮೋದಿ.., ಎಂದು ಕೂಗುವವರಿಗೆ ಕಪಾಳಕ್ಕೆ ಹೊಡೆಯಿರಿ ಎಂಬ ಸಚಿವ ಶಿವರಾಜ್ ತಂಗಡಗಿ ಹೇಳಿಕೆಗೆ ಇನ್ನು ಸ್ವಲ್ಪ ದಿನದಲ್ಲಿ ಮತಗಳ ಮೂಲಕ ಕಾಂಗ್ರೆಸ್ ಕಪಾಳಕ್ಕೆ ಜನ ಪರೋಕ್ಷವಾಗಿ ಹೊಡೆಯಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರೊಬ್ಬರ ಇಂತಹ ಹೇಳಿಕೆ ನ್ಯಾಯಾಲಯಕ್ಕೆ ಹೋಗುವ ವಿಚಾರವಾಗಿದೆ, ಇದರ ವಿರುದ್ಧ ಮುಂದಿನ ಕ್ರಮದ ಬಗ್ಗೆ ಆಲೋಚಿಸಲಾಗುತ್ತಿದೆ ಎಂದರು.
ಪ್ರಚಾರ ಕಾರ್ಯಕ್ಕೆ ರಾಷ್ಟ್ರೀಯ ನಾಯಕರು
ರಾಜ್ಯದಲ್ಲಿ ಬಿಜೆಪಿ ಹಾಗೂ ಮೋದಿ ಪರ ಅಲೆ ಇದೆ, ಟಿಕೆಟ್ ಹಂಚಿಕೆಯಿಂದ ಉಂಟಾಗಿರುವ ಭಿನ್ನಮತ ಶಮನ ಆಗುತ್ತಿದೆ, ಸಂಗಣ್ಣ ಕರಡಿ ಅವರು ಸಮಾಧಾನ ಆಗಿದ್ದಾರೆ. ಪ್ರಚಾರ ಕಾರ್ಯಕ್ಕೆ ರಾಷ್ಟ್ರೀಯ ನಾಯಕರು, ಸೆಲೆಬ್ರಿಟಿಗಳು ಬರುತ್ತಾರೆ.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪಕ್ಷಕ್ಕೆ ಬಂದಿರುವುದು ಬಲ ಬಂದಿದೆ, ಮೂರ್ನಾಲ್ಕು ಜಿಲ್ಲೆಗಳಲ್ಲಿ ಅವರ ಪ್ರಭಾವ ಇದೆ.
ಬಿಜೆಪಿಗೆ ಸೇರಿದರೆ ಎಲ್ಲರೂ ಶುದ್ಧವಾಗುತ್ತಾರೆ ಎನ್ನುವ ಸಚಿವ ಸಂತೋಷ್ ಲಾಡ್ ಹೇಳಿಕೆ ಅವರ ಅನುಭವದ ಮಾತು ಎಂದು ತಿರುಗೇಟು ನೀಡಿದರು.
ಎನ್‌ಡಿಆರ್‌ಎಫ್ ಹಣ
ರಾಜ್ಯಕ್ಕೆ ಕೇಂದ್ರದಿಂದ ಯುಪಿಎ ಆಡಳಿತ ಕಾಲದಲ್ಲಿ ಎಷ್ಟು ಹಾಗೂ ಎನ್‌ಡಿಎ ಕಾಲದಲ್ಲಿ ಎಷ್ಟು ಎನ್‌ಡಿಆರ್‌ಎಫ್ ಹಣ ಬಂದಿದೆ ಎನ್ನುವುದನ್ನು ರಾಜ್ಯ ಸರ್ಕಾರ ಬಹಿರಂಗ ಪಡಿಸಬೇಕು.
ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗಿದೆ, ಕೇಂದ್ರದಿಂದ ಬರ ಪರಿಹಾರ ಕೋರಿ ಸುಪ್ರೀಂಕೋರ್ಟ್‌ಗೆ ಹೋಗುವುದು ರಾಜಕೀಯ ತಂತ್ರಗಾರಿಕೆ, ಕೇಂದ್ರದಿಂದ ಹಣ ಬಂದಿಲ್ಲ ಎನ್ನುವುದನ್ನು ಬಿಟ್ಟು, ಯುಪಿಎ ಹಾಗೂ ಎನ್‌ಡಿಎ ಅವಧಿಯಲ್ಲಿ ಎನ್‌ಡಿಆರ್‌ಎಫ್‌ನಿಂದ ರಾಜ್ಯಕ್ಕೆ ಎಷ್ಟು ಹಣ ಬಂದಿದೆ ಎಂದು ಬಹಿರಂಗಪಡಿಸಲಿ ಎಂದರು.
2 comments
[…] ರಾಜಕೀಯ […]
[…] ರಾಜಕೀಯ […]