ಕುಮಾರಸ್ವಾಮಿ ಮಂಡ್ಯ, ಪ್ರಜ್ವಲ್ ಹಾಸನದಿಂದ ಸ್ಪರ್ಧೆ
ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಡಕ್ಕೆ ಮಣಿದ ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ನಿರ್ಧಾರ ಪ್ರಕಟಿಸಿದ್ದಾರೆ.
ಇಂದು ಇಡೀ ದಿನ ನಡೆದ ಜೆಡಿಎಸ್ ಮತ್ತು ಬಿಜೆಪಿ ಪ್ರತ್ಯೇಕ ಸಭೆಗಳ ನಂತರ ಕುಮಾರಸ್ವಾಮಿ, ಅಧಿಕೃತ ಘೋಷಣೆ ಮಾಡಿದರು.
ಮಾಜಿ ಸಚಿವ ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಮೈತ್ರಿ ಪಕ್ಷ ಬಿಜೆಪಿ ತಮ್ಮ ಪಕ್ಷಕ್ಕೆ ನೀಡಿರುವ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಹಾಗೂ ಚುನಾವಣಾ ಸಿದ್ಧತೆ ಬಗ್ಗೆ ಮಹತ್ವದ ತೀರ್ಮಾನಗಳನ್ನು ಕೈಗೊಂಡಿತು.
ಒಮ್ಮತದ ತೀರ್ಮಾನ
ಸಭೆಯಲ್ಲಿ ಮೂಡಿಬಂದ ಒಮ್ಮತದ ತೀರ್ಮಾನದಂತೆ ಕುಮಾರಸ್ವಾಮಿ (ಮಂಡ್ಯ), ಸಂಸದ ಪ್ರಜ್ವಲ್ ರೇವಣ್ಣ (ಹಾಸನ) ಹಾಗೂ ಕೋಲಾರ ಕ್ಷೇತ್ರದಿಂದ ಮಲ್ಲೇಶ್ ಅವರನ್ನು ಕಣಕ್ಕಿಳಿಸಲು ಸಭೆ ತೀರ್ಮಾನ ಕೈಗೊಂಡಿತು.
ಸಭೆಯ ನಂತರ ಕುಮಾರಸ್ವಾಮಿ ಅವರು, ಮಂಡ್ಯ ಹಾಗೂ ಕೋಲಾರ ಜಿಲ್ಲೆಯ ಮುಖಂಡರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿ ತಾವು ಕಣಕ್ಕಿಳಿಯುವುದನ್ನು ಅಧಿಕೃತವಾಗಿ ಘೋಷಣೆ ಮಾಡಿದರು.
ಕುಮಾರಸ್ವಾಮಿ ಈ ತೀರ್ಮಾನ ಕೈಗೊಳ್ಳುತ್ತಿದ್ದಂತೆ ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಂಡ್ಯ ಜಿಲ್ಲಾ ಪಕ್ಷದ ಮುಖಂಡರ ಸಭೆ ನಡೆಸಿ ಪಕ್ಷ ಹಿತದೃಷಿಯಿಂದ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಕರ್ನಾಟಕದಿಂದ 28 ಅಭ್ಯರ್ಥಿಗಳ ಕೊಡುಗೆ
ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗಲು ಕರ್ನಾಟಕದಿಂದ 28 ಮಂದಿ ಮೈತ್ರಿ ಅಭ್ಯರ್ಥಿಗಳನ್ನು ಕೊಡುಗೆಯಾಗಿ ನೀಡಬೇಕು, ನಿಮ್ಮಲ್ಲಿ ಯಾವುದೇ ವೈಮನಸ್ಸು ಇದ್ದರೂ ಅದನ್ನು ದೂರವಿಟ್ಟು ಎನ್‌ಡಿಎ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಆದೇಶಿಸಿದರು.
ಒಂದೆರಡು ದಿನದಲ್ಲೇ ಕ್ಷೇತ್ರದ ಸಂಸದೆ ಸುಮಲತಾ ಅವರನ್ನೂ ಭೇಟಿ ಮಾಡಿ ಮಾತನಾಡುವುದಾಗಿ ತಿಳಿಸಿದರು.
ಜೆಡಿಎಸ್ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಪಕ್ಷದ ಉಳಿವಿಗಾಗಿ ನಾನು ಕೆಲವು ಕಠಿಣ ತೀರ್ಮಾನ ಕೈಗೊಳ್ಳಬೇಕಾಗಿದೆ.
ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಮುಗಿಸಿದ್ದೇವೆ ಎಂದು ಕಾಂಗ್ರೆಸ್‌ನವರು ದಿನನಿತ್ಯ ಭಜನೆ ಮಾಡುತ್ತಿದ್ದಾರೆ, ನಮ್ಮ ಪಕ್ಷವನ್ನು ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ.
ಕಾರ್ಯಕರ್ತರ ಒತ್ತಡಕ್ಕೆ ತಲೆ ಬಾಗಿದ್ದೇನೆ
ಇವರಿಗೆ ಉತ್ತರ ಕೊಡುವ ಮತ್ತು ಪಕ್ಷವನ್ನು ಗಟ್ಟಿಗೊಳಿಸುವ, ಮೋದಿ ಅವರ ಕೈಬಲಪಡಿಸುವ ಉದ್ದೇಶದಿಂದಲೇ ನಾನು, ಮಂಡ್ಯ ಕಾರ್ಯಕರ್ತರ ಒತ್ತಡಕ್ಕೆ ತಲೆ ಬಾಗಿದ್ದೇನೆ.
ಹೀಗೆಂದ ತಕ್ಷಣ ನನ್ನ ರಾಜಕೀಯ ಕರ್ಮ ಭೂಮಿ ರಾಮನಗರ ಜಿಲ್ಲೆಯನ್ನು ಬಿಡುವ ಮಾತೇ ಇಲ್ಲ.
ನಾನು ಈ ಜಿಲ್ಲೆಗೆ ಬರುವುದಕ್ಕೂ ಮುನ್ನ ಹಾಗೂ ಬಂದ ನಂತರ ಯಾವ ರೀತಿ ಅಭಿವೃದ್ಧಿ ಆಗಿದೆ ಎಂಬ ಚಿತ್ರಣ ಕಣ್ಣ ಮುಂದಿದೆ, ನಾನು ಅಲ್ಲಿದ್ದರೂ, ಇಲ್ಲಿಯೇ ನನ್ನ ಕ್ಷೇತ್ರ.
ಕಳೆದ 15 ವರ್ಷಗಳಲ್ಲೇ ಮೂರು ಬಾರಿ ನನಗೆ ಹೃದಯ ಶಸ್ತ್ರ ಚಿಕಿತ್ಸೆ, ಮೆದುಳಿಗೆ ಆಘಾತವನ್ನು ಎದುರಿಸಿದರೂ ಸಹಾ ದೇವರು ನನಗೆ ರಾಜ್ಯದ ಸೇವೆ ಮಾಡಲೆಂದು ದೀರ್ಘಾಯಸ್ಸು ನೀಡಿದ್ದಾರೆ.
ನಾನು, ನನ್ನ ಕಾರ್ಯಕರ್ತರನ್ನು ಕೈಬಿಡುವುದಿಲ್ಲ, ಸೇವೆ ಮಾಡುವ ಉದ್ದೇಶದಿಂದ ಚುನಾವಣಾ ಕಣಕ್ಕಿಳಿಯುತ್ತಿದ್ದೇನೆ, ಇದಕ್ಕೆ ರಾಮನಗರದ ಜನತೆ ಅನ್ಯತಾ ಭಾವಿಸುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.
1 comment
[…] Special Story […]