ಬೆಂಗಳೂರು:ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡುವ ಉದ್ದೇಶದಿಂದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರ ಹೃದಯಗಳು ಒಂದಾಗಿ ಲೋಕಸಭಾ ಚುನಾವಣೆಯಲ್ಲಿ ಹೋರಾಟ ನಡೆಸಿವೆ ಎಂದು ಬೆಂಗಳೂರು ಗ್ರಾಮಾಂತರ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಇಂದಿಲ್ಲಿ ತಿಳಿಸಿದ್ದಾರೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲೂ ಒಗ್ಗಟ್ಟಿನ ಅಲೆ ಬೀಸುತ್ತಿದೆ, ಉಭಯ ಪಕ್ಷಗಳ ಕಾರ್ಯಕರ್ತರ ಮನಸ್ಸುಗಳು ಒಂದಾಗಿರುವುದೇ ಇದಕ್ಕೆ ಕಾರಣ ಎಂದರು.

ಬಿಜೆಪಿ-ಜೆಡಿಎಸ್ ಒಂದಾಗಿವೆ
ನನಗೆ ಪ್ರಚಾರ ಹೊಸದು, ಆದರೆ, ಅಲ್ಪ ದಿನದಲ್ಲೇ ಈ ಪರಿಸ್ಥಿತಿ ಅವಲೋಕಿಸಿದರೆ ಮಲಗಿದ್ದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಎದ್ದಿದ್ದಾರೆ, ಅವರಲ್ಲಿ ವಿದ್ಯುತ್ ಸಂಚಾರ ಮೂಡಿದೆ.
ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ನಮಗೆ ಫಲ ದೊರೆಯುತ್ತದೆ, ಕೇಂದ್ರದಲ್ಲಿ ಮೋದಿ ಅವರು ಮತ್ತೆ ಪ್ರಧಾನಿ ಆಗಲು ಕರ್ನಾಟಕದಿಂದ ದೊಡ್ಡ ಮಟ್ಟದ ಕೊಡುಗೆ ನೀಡಬೇಕೆಂಬ ಹುಮ್ಮಸ್ಸು ಕಾರ್ಯಕರ್ತರಲ್ಲಿ ಕಾಣುತ್ತಿದೆ.
ಜಂಟಿ ಸಂಘಟಣೆಯಲ್ಲಿ ಕಾಣಬರುತ್ತಿರುವ ಹುಮ್ಮಸ್ಸು ನನ್ನಲ್ಲೂ ವಿದ್ಯುತ್ ಸಂಚಾರ ಮೂಡಿಸಿದೆ, ನಾನು ಎಲ್ಲೇ ಪ್ರಚಾರ ಕೈಗೊಂಡರೂ ಕಿರಿಯರು, ಹಿರಿಯರು ಎನ್ನದೇ ಆಶೀರ್ವಾದ ಮಾಡುತ್ತಿದ್ದಾರೆ ಎಂದರು.