ಡಾ. ಮಂಜುನಾಥ್ ಪರ ರೋಡ್ ಶೋ
ಬೆಂಗಳೂರು:ಕರ್ನಾಟಕದ 28 ಕ್ಷೇತ್ರಗಳಲ್ಲೂ ಜಯಗಳಿಸಬೇಕೆಂದು ಪಣ ತೊಟ್ಟಿರುವ ಬಿಜೆಪಿ ನಾಯಕರು, ಕೇಂದ್ರ ಗೃಹ ಸಚಿವ ಹಾಗೂ ಚುನಾವಣಾ ತಂತ್ರ ನಿಪುಣ ಅಮಿತ್ ಷಾ ಪಕ್ಷದ ಅಭ್ಯರ್ಥಿಗಳ ಪರ ಏಪ್ರಿಲ್ 2 ರಿಂದ ರಣಕಹಳೆ ಮೊಳಗಿಸಲಿದ್ದಾರೆ.
ಅಂದು ಸಂಜೆ 6 ಗಂಟೆಗೆ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸಿರುವ ವೈದ್ಯ ಡಾ. ಮಂಜುನಾಥ್ ಪರ ಚನ್ನಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಅಭ್ಯರ್ಥಿಗಳಿಗೆ ಗೆಲುವಿನ ಪಾಠ
ರೋಡ್ ಶೋಗೂ ಮುನ್ನ ಮೊದಲ ಹಂತದಲ್ಲಿ ಜರುಗಲಿರುವ 14 ಕ್ಷೇತ್ರಗಳ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಮುಖಂಡರಿಗೆ ಚುನಾವಣಾ ಸಿದ್ಧತೆ ಮತ್ತು ಗೆಲುವಿನ ಮಾನದಂಡದ ಬಗ್ಗೆ ಪಾಠ ಮಾಡಲಿದ್ದಾರೆ.
ರೋಡ್ ಶೋ ಜೊತೆಗೆ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸಲಿದ್ದು, ಎರಡೂ ಕಾರ್ಯಕ್ರಮಗಳಲ್ಲೂ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಅಮಿತ್ ಷಾ ಜೊತೆ ಭಾಗಿಯಾಗಲಿದ್ದಾರೆ.
ಬೆಂಗಳೂರು ಗ್ರಾಮಾಂತರದಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಹಾಗೂ ಸಂಸದ ಡಿ.ಕೆ.ಸುರೇಶ್ ಕಾಂಗ್ರೆಸ್‌ನಿಂದ ಚುನಾವಣಾ ಕಣಕ್ಕಿಳಿದಿದ್ದಾರೆ.
ಸುರೇಶ್ ದೇಶ ವಿಭಜನೆಯ ಮಾತನಾಡಿದ್ದರು, ಇಂತಹವರನ್ನು ಚುನಾವಣೆಯಲ್ಲಿ ಸೋಲಿಸಲೇಬೇಕು ಎಂಬ ಉದ್ದೇಶದಿಂದ ಹೃದಯ ತಜ್ಞ ಡಾ. ಮಂಜುನಾಥ್ ಅವರನ್ನು ಬಿಜೆಪಿ ಕಣಕ್ಕಳಿಸಿದೆ.
ಮತದಾರರಿಗೆ ದೊಡ್ಡ ಸಂದೇಶ
ಮಂಜುನಾಥ್ ಪರ ಅಮಿತ್ ಷಾ ರೋಡ್ ಶೋ ನಡೆಸುವ ಜೊತೆಗೆ ಅಲ್ಲಿಯೇ ಕಾರ್ಯಕರ್ತರ ಸಭೆ ನಡೆಸಿ, ಮತದಾರರಿಗೆ ದೊಡ್ಡ ಸಂದೇಶ ನೀಡಲಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ.
ಶಿವಮೊಗ್ಗದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಡಾ.ಮಂಜುನಾಥ್ ಅವರನ್ನು ಸಾರ್ವಜನಿಕರಿಗೆ ಪರಿಚಯಿಸಿದ್ದರು.
ಅಮಿತ್ ಷಾ ಪ್ರಚಾರ ಕಾರ್ಯವನ್ನು ಭಾರೀ ಯಶಸ್ಸುಗೊಳಿಸುವ ಉದ್ದೇಶದಿಂದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮನೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಗ್ರಾಮಾಂತರ ಕ್ಷೇತ್ರದ ಉಭಯ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.
ಷಾ ಪ್ರವಾಸ ಮುಗಿಸಿ ಹಿಂತಿರುಗಿದ ತಕ್ಷಣವೇ ಪ್ರಧಾನಿ ಅವರು ಬೆಂಗಳೂರು ಗ್ರಾಮಾಂತರದಲ್ಲಿ ಪಕ್ಷದ ಅಭ್ಯರ್ಥಿ ಪರ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.