ಬೆಂಗಳೂರು:ದಿಲ್ಲಿ ಗದ್ದುಗೆಯ ಮೇಲೆ ಪುನ: ಬಿಜೆಪಿ ಸೆಟ್ಲಾದರೆ ಕರ್ನಾಟಕದಿಂದ ಯಾರು ಮಂತ್ರಿಗಳಾಗಲಿದ್ದಾರೆ ಎಂಬುದು ಪಕ್ಕಾ ಆಗಿದೆ. ಈ ಪೈಕಿ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಒಬ್ಬರಾದರೆ, ಉಳಿದಂತೆ ಬಿಜೆಪಿಯ ಪ್ರಲ್ಹಾದ್ ಜೋಷಿ, ಬಸವರಾಜ ಬೊಮ್ಮಾಯಿ,ಗೋವಿಂದ ಕಾರಜೋಳ್ ಮಂತ್ರಿಗಳಾಗಲಿದ್ದಾರೆ.
ಅಂದ ಹಾಗೆ ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂಬ ವಿಷಯದಲ್ಲಿ ಕರ್ನಾಟಕದ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಲವಲೇಶದಷ್ಟೂ ಅನುಮಾನವಿಲ್ಲ. ಇದೇ ರೀತಿ ರಾಜ್ಯದಲ್ಲಿ ಇಪ್ಪತ್ತರಿಂದ ಇಪ್ಪತ್ತೆರಡು ಸೀಟು ಗೆಲ್ಲುತ್ತೇವೆ ಎಂಬ ವಿಷಯದಲ್ಲಿ ಅಪನಂಬಿಕೆಯೂ ಇಲ್ಲ.
ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾಳಯ ತಮಗೆ ಹದಿನೇಳು ಸೀಟು ಬರುತ್ತದೆ ಎಂಬ ಲೆಕ್ಕಾಚಾರದಲ್ಲಿದ್ದರೂ, ಅದರ ಲೆಕ್ಕಾಚಾರಕ್ಕೆ ತಮ್ಮ ಪಕ್ಷದಲ್ಲಿರುವ ಭಿನ್ನಮತವೇ ಆಧಾರ.ಆದರೆ ಇಂತಹ ಭಿನ್ನಮತವನ್ನು ಮೋದಿ ಅಲೆ ನಿವಾರಿಸಲಿದೆ ಎಂಬುದು ಬಿಜೆಪಿ ಕ್ಯಾಂಪಿನ ಲೆಕ್ಕಾಚಾರ.
ಇಂತಹ ಲೆಕ್ಕಾಚಾರದ ನಡುವೆಯೇ ಅದು ಮೋದಿ ಬ್ರಿಗೇಡ್ ಸೇರುವ ಕರ್ನಾಟಕದ ನಾಯಕರು ಯಾರು ಅಂತ ಈಗಾಗಲೇ ಪಟ್ಟಿ ಹಾಕತೊಡಗಿದೆ. ಅದರ ಪ್ರಕಾರ ಹೆಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ್ ಜೋಷಿ, ಬಸವರಾಜ ಬೊಮ್ಮಾಯಿ ಮತ್ತು ಗೋವಿಂದ ಕಾರಜೋಳ್ ಈ ಬಾರಿ ಮೋದಿ ಬ್ರಿಗೇಡ್ ಸೇರಲಿದ್ದಾರೆ.
ಈ ಪೈಕಿ ಕುಮಾರಸ್ವಾಮಿ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದರೆ, ಬಸವರಾಜ ಬೊಮ್ಮಾಯಿ ಲಿಂಗಾಯತರು, ಪ್ರಲ್ಹಾದ್ ಜೋಷಿ ಬ್ರಾಹ್ಮಣರಾದರೆ, ಗೋವಿಂದ ಕಾರಜೋಳ ದಲಿತ ಸಮುದಾಯದ ಎಡಗೈ ಪಂಗಡಕ್ಕೆ ಸೇರಿದವರು.
ಇನ್ನು ಈ ನಾಲ್ಕು ಮಂದಿಯ ಪೈಕಿ ಮೂವರು ಹೈಕಮಾಂಡ್ ಕ್ಯಾಂಡಿಡೇಟುಗಳಾದರೆ, ಗೋವಿಂದ ಕಾರಜೋಳ್ ಮಾತ್ರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕ್ಯಾಂಡಿಡೇಟು. ಅಂದ ಹಾಗೆ ಲಿಂಗಾಯತರ ಕೋಟಾದಡಿ ತಮ್ಮ ಪುತ್ರ ಬಿ.ವೈ.ರಾಘವೇಂದ್ರ ಅವರನ್ನು ಸೆಂಟ್ರಲ್ಮಿನಿಸ್ಟರ್ ಮಾಡುವ ಆಸೆಯೂ ಯಡಿಯೂರಪ್ಪ ಅವರಿಗಿದೆ. ಎಷ್ಟೇ ಆದರೂ ರಾಘವೇಂದ್ರ ಅವರು ಈಗಾಗಲೇ ಮೂರು ಬಾರಿ ಗೆದ್ದವರು. ಈ ಸಲ ಗೆದ್ದರೆ ಅವರಿಗೆ ಮತ್ತಷ್ಟು ಸೀನಿಯಾರಿಟಿ ಬರುತ್ತದೆ ಎಂಬುದು ಯಡಿಯೂರಪ್ಪ ಯೋಚನೆ. ಹಾಗಂತ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬಳಿ ತಮ್ಮ ಮನದಿಂಗಿತ ತೋಡಿಕೊಂಡಿದ್ದಾರಂತೆ. ಆದರೆ ಮೋದಿ-ಅಮಿತ್ ಷಾ ಲೆಕ್ಕಾಚಾರ ಬೇರೆ ಇದೆ ಎಂಬುದೂ ಅವರಿಗೆ ಗೊತ್ತು. ಹೀಗಾಗಿ ಅವರು ದಲಿತ ಕೋಟಾದಡಿ ತಮ್ಮ ಆಪ್ತರಾದ ಗೋವಿಂದ ಕಾರಜೋಳ್ ಅವರ ಹೆಸರನ್ನು ಮಂತ್ರಿಗಿರಿಯ ರೇಸಿನಲ್ಲಿ ನಿಲ್ಲಿಸಿದ್ದಾರೆ.
ಕುತೂಹಲದ ಸಂಗತಿ ಎಂದರೆ ಇಂತಹ ಲೆಕ್ಕಾಚಾರದ ಕಾರಣದಿಂದಲೇ ಕಾರಜೋಳ್ ಅವರಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡಿಸಲು ಯಡಿಯೂರಪ್ಪ ಹರಸಾಹಸ ಮಾಡಿದ್ದರು.
ಹೀಗೆ ಕಾರಜೋಳ್ ಅವರಿಗೆ ಕೇಂದ್ರ ಮಂತ್ರಿಗಿರಿ ಕೊಡಿಸಲು ಯಡಿಯೂರಪ್ಪ ಯಾಕೆ ಪಟ್ಟು ಹಿಡಿದಿದ್ದರು ಎಂಬುದು ರಹಸ್ಯವಲ್ಲ. ವಸ್ತುಸ್ಥಿತಿ ಎಂದರೆ ಮೂರು ವರ್ಷಗಳ ಹಿಂದೆ ನಡೆದ ಒಂದು ಘಟನೆಯ ನಂತರ ಗೋವಿಂದ ಕಾರಜೋಳ್ ಎಂದರೆ ಯಡಿಯೂರಪ್ಪ ಅವರಿಗೆ ತುಂಬ ನಂಬಿಕೆ.ಹೀಗಾಗಿ ಅವಕಾಶ ಸಿಕ್ಕಾಗಲೆಲ್ಲ ಅವರು ಕಾರಜೋಳ್ ಪರ ನಿಲ್ಲುತ್ತಾರೆ.
ಅಂದ ಹಾಗೆ ಮೂರು ವರ್ಷಗಳ ಹಿಂದೆ ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯಲ್ಲಿ ಕುಳಿತಿದ್ದರಲ್ಲ, ಆ ಸಂದರ್ಭದಲ್ಲಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ದಿಲ್ಲಿ ನಾಯಕರು ಕಸರತ್ತು ಆರಂಭಿಸಿದ್ದರು.
ಅಂತಹ ಕಾಲದಲ್ಲೇ ಒಮ್ಮೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಯಡಿಯೂರಪ್ಪ ಸಂಪುಟದ ಪ್ರಮುಖ ಸಚಿವರಾಗಿದ್ದ ಕಾರಜೋಳ್ ಅವರನ್ನು ಕರೆಸಿ ಗುಟ್ಟಿನ ಸಂಗತಿಯೊಂದನ್ನು ಹೇಳಿದ್ದರು.
ಅದೆಂದರೆ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಮೋದಿ-ಅಮಿತ್ ಷಾ ಬಯಸಿದ್ದಾರೆ. ಹೀಗೆ ಅವರನ್ನು ಕೆಳಗಿಳಿಸಿದ ಮೇಲೆ ಆ ಜಾಗಕ್ಕೆ ದಲಿತ ಸಮುದಾಯದ ಎಡಗೈ ನಾಯಕರೊಬ್ಬರನ್ನು ತರುವ ಯೋಚನೆ ಅವರದು. ಅರ್ಥಾತ್, ನಿಮ್ಮನ್ನು ಮುಖ್ಯಮಂತ್ರಿ ಹುದ್ದೆಗೆ ತರುವುದು ಅವರ ಲೆಕ್ಕಾಚಾರ. ಹೀಗಾಗಿ ಹೊಸ ಜವಾಬ್ದಾರಿ ಹೊರಲು ರೆಡಿ ಆಗಿ ಎಂಬುದು ನಡ್ಡಾ ಅವರ ಸೂಚನೆ.
ಆದರೆ, ಅವರ ಈ ಸೂಚನೆಯಿಂದ ಖುಷಿಯಾಗಬೇಕಿದ್ದ ಕಾರಜೋಳ್, ನೋ ನೋ ಸಾರ್, ಯಾವ ಕಾರಣಕ್ಕೂ ಯಡಿಯೂರಪ್ಪ ಅವರನ್ನು ಕೆಳಗಿಳಿಸಬೇಡಿ. ಅದು ಪ್ರಾಕ್ಟಿಕಲ್ ಅಲ್ಲ. ಈ ಹಿಂದೆ 2008 ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ 2013 ರಲ್ಲಿ ಅಧಿಕಾರ ಕಳೆದುಕೊಂಡಿದ್ದಕ್ಕೆ ಇಂತಹ ತಪ್ಪೇ ಕಾರಣ.2011 ರಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ಇಳಿಸದೇ ಹೋಗಿದ್ದರೆ ನಾವು 2013 ರಲ್ಲಿ ಪುನ: ಅಧಿಕಾರಕ್ಕೆ ಬರುತ್ತಿದ್ದೆವು.
ಈಗಲೂ ಹೇಳುತ್ತೇನೆ. ಹಿಂದೆ ಮಾಡಿದ ತಪ್ಪು ಪುನರಾವರ್ತನೆ ಆಗದಿರಲಿ, ಒಂದು ವೇಳೆ ಆದರೆ 2023 ರಲ್ಲಿ ನಾವು ಅಧಿಕಾರ ಕಳೆದುಕೊಳ್ಳುತ್ತೇವೆ ಅಂತ ನೇರವಾಗಿ ನಡ್ಡಾ ಅವರಿಗೆ ಹೇಳಿದ ಕಾರಜೋಳ್, ಈ ಹಂತದಲ್ಲಿ ಯಾವ ಕಾರಣಕ್ಕೂ ನನ್ನ ಹೆಸರನ್ನು ಕನ್ಸಿಡರ್ ಮಾಡಬೇಡಿ ಸಾರ್ ಅಂತ ಹೇಳಿ ಬಂದಿದ್ದರು.
ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಸಿಎಂ ಹುದ್ದೆಯಿಂದ ಕೆಳಗಿಳಿದಿದ್ದೂ ಆಯಿತು,ಅವರ ಜಾಗಕ್ಕೆ ಬೊಮ್ಮಾಯಿ ಬಂದು ಕುಳಿತಿದ್ದೂ ಆಯಿತು.
ಆದರೆ ತಮಗೆ ಸಿಎಂ ಹುದ್ದೆಯ ಪ್ರಪೋಸಲ್ಲು ಬಂದಾಗ,ಅದರಲ್ಲೂ ಯಡಿಯೂರಪ್ಪ ಅವರ ಜಾಗಕ್ಕೆ ತಮ್ಮನ್ನು ಪರಿಗಣಿಸಬೇಡಿ ಎಂಬ ಕಾರಜೋಳ್ ಅವರ ಸ್ಪಷ್ಟತೆ ಯಡಿಯೂರಪ್ಪ ಅವರಿಗೆ ಯಾವ ಪರಿ ಇಷ್ಟವಾಯಿತು ಎಂದರೆ ಇವತ್ತು ರಾಘವೇಂದ್ರ, ವಿಜಯೇಂದ್ರ ಅವರ ರಾಜಕೀಯ ಭವಿಷ್ಯದ ಬಗ್ಗೆ ಅವರು ಹೇಗೆ ಯೋಚಿಸುತ್ತಾರೋ, ಅದೇ ರೀತಿ ಕಾರಜೋಳ್ ವಿಷಯದಲ್ಲೂ ಯೋಚಿಸುತ್ತಾರೆ. ಈ ಸಲವೂ ಅಷ್ಟೇ ಕಾರಜೋಳ್ ಅವರನ್ನು ಹೇಗಾದರೂ ಮೋದಿ ಬ್ರಿಗೇಡ್ ಗೆ ಸೇರಿಸಿದರೆ ತಮ್ಮ ಜವಾಬ್ದಾರಿ ಮುಗಿದಂತೆ ಎಂದವರು ಭಾವಿಸಿದ್ದಾರೆ.
ಕೈ ಪಾಳಯದ ಕನಸು
ಈ ಮಧ್ಯೆ ಚುನಾವಣೆಯ ಕಾವು ಮೆಲ್ಲಗೆ ಏರುತ್ತಿದ್ದಂತೆ ಕಾಂಗ್ರೆಸ್ ಪಾಳಯದ ರಣೋತ್ಸಾಹ ಹೆಚ್ಚತೊಡಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದಲ್ಲಿ ಮೋದಿ ಅಲೆ ವರ್ಕ್ ಔಟ್ ಆಗುವುದಿಲ್ಲ, ಅದೇ ಕಾಲಕ್ಕೆ ಬಿಜೆಪಿಯಲ್ಲಿ ಶುರುವಾಗಿರುವ ಭಿನ್ನರ ಕಾಟ ತಣ್ಣಗಾಗುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ಕೈ ಪಾಳಯ,ರಾಜ್ಯದ ಹದಿನೇಳು ಲೋಕಸಭಾ ಕ್ಷೇತ್ರಗಳಲ್ಲಿ ತಮ್ಮ ಕ್ಯಾಂಡಿಡೇಟುಗಳು ಗೆಲುವು ಗಳಿಸಲಿದ್ದಾರೆ ಎಂಬ ತೀರ್ಮಾನಕ್ಕೆ ಬಂದಿದೆ.
ರಾಯಚೂರು, ಕೊ ಪ್ಪಳ, ಬಳ್ಳಾರಿ, ಗುಲ್ಬರ್ಗ, ಬೆಳಗಾವಿ, ಚಿಕ್ಕೋಡಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ದಾವಣಗೆರೆ, ತುಮಕೂರು, ಚಿತ್ರದುರ್ಗ, ಉತ್ತರ ಕನ್ನಡ ಕ್ಷೇತ್ರಗಳಲ್ಲಿ ತಾವು ಗೆಲುವು ಗಳಿಸುವುದು ಗ್ಯಾರಂಟಿ ಎಂಬ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್, ಇನ್ನಷ್ಟು ಬಲ ನೀಡಿದರೆ ಮೈಸೂರು, ಮಂಡ್ಯ, ಶಿವಮೊಗ್ಗ, ಉಡುಪಿ-ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಕೋಲಾರ ಲೋಕಸಭಾ ಕ್ಷೇತ್ರಗಳಲ್ಲೂ ಗೆಲುವು ಗಳಿಸಬಹುದು ಎಂಬ ಲೆಕ್ಕಾಚಾರದಲ್ಲಿದೆ.
ಆದರೆ ಇಂತಹ ಲೆಕ್ಕಾಚಾರಗಳಿಗೆ ಮೋದಿ ಅಲೆ ಇಲ್ಲ ಮತ್ತು ಬಿಜೆಪಿಗೆ ಭಿನ್ನರ ಕಾಟ ತಪ್ಪುವುದಿಲ್ಲ ಎಂಬ ಅಂಶ ಕುಮ್ಮಕ್ಕು ನೀಡಿದೆ.
ಆದರೆ ಅವರ ನಿರೀಕ್ಷೆ ಮೀರಿ ಮೋದಿ ಅಲೆ ವರ್ಕ್ ಔಟ್ ಆದರೆ, ಬಿಜೆಪಿಯನ್ನು ಕಾಡುತ್ತಿರುವ ಭಿನ್ನರ ಕಾಟ ಕಡಿಮೆಯಾದರೆ ಕೈ ಪಾಳಯದ ಲೆಕ್ಕಾಚಾರ ಉಲ್ಟಾ ಆಗಬಹುದು.
ಕರ್ನಾಟಕಕ್ಕೆ ‘ಅದಾನಿ’ ಎಂಟ್ರಿ?
ಅಂದ ಹಾಗೆ ದೇಶದ ಪವರ್ ಫುಲ್ ಉದ್ಯಮಿ ಗೌತಮ್ ಅದಾನಿ ಹೆಸರು ಕರ್ನಾಟಕಕ್ಕೆ ಎಂಟ್ರಿ ಆಗಿದೆ. ಬಿಜೆಪಿ ಮೂಲಗಳ ಪ್ರಕಾರ,ಮಾಜಿ ಸಚಿವರೊಬ್ಬರಿಗೆ ಬಿಜೆಪಿ ಟಿಕೆಟ್ ಸಿಗಲು ಅದಾನಿ ಕಾರಣರಂತೆ.
ಬೆಂಗಳೂರಿಗೆ ಹತ್ತಿರವಿರುವ ಲೋಕಸಭಾ ಕ್ಷೇತ್ರವೊಂದರ ಟಿಕೆಟ್ಟಿಗಾಗಿ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿದ್ದ ನಾಯಕರೊಬ್ಬರು ಪಟ್ಟು ಹಿಡಿದಿದ್ದರು. ಇದಕ್ಕೆ ಪ್ರತಿಯಾಗಿ ಪವರ್ ಫುಲ್ ಶಾಸಕರೊಬ್ಬರ. ಪುತ್ರನಿಗೆ ಟಿಕೆಟ್ ಕೊಡುವಂತೆ ಖುದ್ದು ಯಡಿಯೂರಪ್ಪ ಹಠ ಹಿಡಿದಿದ್ದರು.
ಹೀಗೆ ಟಿಕೆಟ್ಟಿಗಾಗಿ ಶುರುವಾದ ಕದನ ಯಾವ ಲೆವೆಲ್ಲಿಗೆ ತಲುಪಿತು ಎಂದರೆ ಶಾಸಕರ ಪುತ್ರನಿಗೆ ಟಿಕೆಟ್ ಸಿಗುವುದು ಬಹುತೇಕ ಪಕ್ಕಾ ಆಗಿತ್ತು.ಆದರೆ ಇದ್ದಕ್ಕಿದ್ದಂತೆ ಬಿಜೆಪಿ ವರಿಷ್ಟರು, ಇಲ್ಲ,ಇಲ್ಲ,ಶಾಸಕರ ಪುತ್ರನಿಗೆ ಇನ್ನೂ ಚಿಕ್ಕ ವಯಸ್ಸು.ಹೀಗಾಗಿ ಮುಂದಿನ ದಿನಗಳಲ್ಲಿ ಅವರಿಗೆ ಭವಿಷ್ಯವಿದೆ. ಹೀಗಾಗಿ ಮಾಜಿ ಸಚಿವರಿಗೇ ಟಿಕೆಟ್ ಕೊಡೋಣ ಎನ್ನತೊಡಗಿದರು.
ಹೀಗೆ ವರಿಷ್ಟರ ಧ್ವನಿ ಇದ್ದಕ್ಕಿದ್ದಂತೆ ಬದಲಾಗಲು ಏನು ಕಾರಣ ಅಂತ ಯಡಿಯೂರಪ್ಪ ಕ್ಯಾಂಪು ಚೆಕ್ ಮಾಡಿದರೆ, ಉದ್ಯಮಿ ಗೌತಮ್ ಅದಾನಿ ಅವರಿಂದ ಬಂದ ಫೋನ್ ಕರೆಯೇ ಕಾರಣ ಎಂಬ ಮಾಹಿತಿ ದೊರಕಿತಂತೆ.
ಮೂಲಗಳ ಪ್ರಕಾರ, ಈ ಮಾಜಿ ಸಚಿವರಿಗೇ ಟಿಕೆಟ್ ಕೊಡಬೇಕು ಅಂತ ಬಿಜೆಪಿ ವರಿಷ್ಟರಿಗೆ ಅದಾನಿ ಶಿಫಾರಸ್ಸು ಮಾಡಿದ್ದಾರೆ.ಕಾರಣ, ಅಧಿಕಾರದಲ್ಲಿದ್ದಾಗ ಈ ಮಾಜಿ ಸಚಿವರು ಅದಾನಿ ಅವರ ಅಪಾರ ವಿಶ್ವಾಸ ಗಳಿಸಿದ್ದರಂತೆ.
ಜಮೀರ್:ಸೌತ್ ಇಂಡಿಯನ್ ಸ್ಟಾರ್
ಇನ್ನು ಸಚಿವ ಜಮೀರ್ ಅಹ್ಮದ್ ಖಾನ್ ಸೌತ್ ಇಂಡಿಯನ್ ಮುಸ್ಲಿಂ ಸ್ಟಾರ್ ಆಗಿ ಹೊರಹೊಮ್ಮುತ್ತಿದ್ದಾರೆ. ಕಾರಣ, ಕೇರಳದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಕೆ.ಸಿ.ವೇಣುಗೋಪಾಲ್ ಅವರು ,ಜಮೀರ್ ನಮ್ಮ ಪರವಾಗಿ ಪ್ರಚಾರಕ್ಕೆ ಬರಲಿ ಎಂದಿದ್ದಾರೆ.
ತೆಲಂಗಾಣ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜಮೀರ್ ಅಹ್ಮದ್ ಅವರು ಮಾಡಿರುವ ಜಾದೂ ಇದಕ್ಕೆ ಕಾರಣ.
ಹೀಗೆ ಪಕ್ಷದ ವರಿಷ್ಟರೇ ತಮ್ಮ ಶಕ್ತಿಯನ್ನು ಗುರುತಿಸಿರುವುದರಿಂದ ಖುಷಿಯಾಗಿರುವ ಜಮೀರ್ ಅಹ್ಮದ್ ಈ ವಾರ ಕೇರಳದ ವಿಮಾನ ಹತ್ತಲಿದ್ದಾರೆ.
ಅಲೆಪ್ಪಿ, ವಯನಾಡು ಸೇರಿದಂತೆ ಕೇರಳದ ಪ್ರಮುಖ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿರುವ ಜಮೀರ್ ಅಹ್ಮದ್ ಅವರಿಗೆ ನೆರೆಯ ತೆಲಂಗಾಣದಿಂದಲೂ ಬೇಡಿಕೆ ಬಂದಿದೆ. ಪರಿಣಾಮ, ಅಲ್ಲಿನ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಅವರು ಪ್ರವಾಸ ಮಾಡಲಿದ್ದಾರೆ.
ಈ ಮಧ್ಯೆ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಜಮೀರ್, ಜಮೀರ್ ಎಂಬ ಕೂಗು ಕೇಳುತ್ತಿದೆ.ಜಮೀರ್ ಅಹ್ಮದ್ ಸೌತ್ ಇಂಡಿಯನ್ ಮುಸ್ಲಿಂ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ.
ಕಾಂಗ್ರೆಸ್ಸಿಗೆ ಸುಮಲತಾ ಕಿರಿಕಿರಿ
ಈ ಮಧ್ಯೆ ಸುಮಲತಾ ಅಂಬರೀಷ್ ನಡೆ ಕಾಂಗ್ರೆಸ್ ಪಾಲಿಗೆ ತಲೆನೋವಾಗುವ ಸಾಧ್ಯತೆಗಳಿವೆ.
ಅಂದ ಹಾಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಲು ಹರಸಾಹಸ ಮಾಡಿದ್ದ ಸುಮಲತಾ, ತಮ್ಮ ಯತ್ನ ವಿಫಲವಾದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವುದು ನಿಜ. ಹಾಗಂತ ಅವರು ಪಕ್ಷೇತರರಾಗಿ ಕಣಕ್ಕಿಳಿದರೆ ಅದರಿಂದ ಡ್ಯಾಮೇಜ್ ಆಗುವುದು ಮೈತ್ರಿಕೂಟದ ಕ್ಯಾಂಡಿಡೇಟ್ ಕುಮಾರಸ್ವಾಮಿ ಅವರಿಗಲ್ಲ, ಬದಲಿಗೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ. ಇದಕ್ಕೆ ಸುಮಲತಾ ಹಿಂದಿರುವ ಮತಗಳೇ ಕಾರಣ. ಅರ್ಥಾತ್, ಸುಮಲತಾ ಹಿಂದಿರುವುದು ಅಂಬಿ ಅಭಿಮಾನಿಗಳು ಮತ್ತು ಜೆಡಿಎಸ್ ವಿರೋಧಿಗಳು. ಇವತ್ತು ಸುಮಲತಾ ಸ್ಪರ್ಧಿಸಿದರೆ ಈ ಮತಗಳು ಅವರತ್ತ ಸರಿಯುತ್ತವೆ.ಹಾಗೇನಾದರೂ ಆದರೆ ಕಾಂಗ್ರೆಸ್ಸಿಗೆ ಬರುವ ಮತಗಳು ಕಡಿಮೆಯಾಗಿ ಕುಮಾರಸ್ವಾಮಿ ಅವರಿಗೆ ಅನುಕೂಲವಾಗುತ್ತದೆ. ಒಂದು ವೇಳೆ ಅವರು ಸ್ಪರ್ಧಿಸದೆ ಕುಮಾರಸ್ವಾಮಿ ಜತೆ ನಿಂತರೆ ಒಂದು ಗುಂಪು ಅವರ ಹಿಂದೆ ಹೋಗಿ ಕುಮಾರಸ್ವಾಮಿ ಅವರನ್ನು ಬೆಂಬಲಿಸುತ್ತದೆ.
ಇದೇ ಕಾರಣಕ್ಕಾಗಿ ಸುಮಲತಾ ವಿಷಯದಲ್ಲಿ ಕಿರಿಕಿರಿ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕರು,ಮೇಡಂ,ನೀವು ತಟಸ್ಥರಾಗಿ ಉಳಿಯಿರಿ ಅಂತ ಪದೇ ಪದೇ ಮೆಸೇಜು ಕಳಿಸತೊಡಗಿದ್ದಾರೆ. ಆದರೆ ಭಾನುವಾರ ತಮ್ಮನ್ನು ಭೇಟಿ ಮಾಡಿದ ಕುಮಾರಸ್ವಾಮಿ ಅವರ ಜತೆ ಮಾತುಕತೆ ನಡೆಸಿರುವ ಸುಮಲತಾ ಈಗ ತಟಸ್ಥರಾಗುವ ಸಾಧ್ಯತೆ ಕಡಿಮೆ.
ಆರ್.ಟಿ.ವಿಠ್ಠಲಮೂರ್ತಿ