ಬೆಂಗಳೂರು:ಟಿಕೆಟ್ ವಂಚಿತರಾಗಿ ಬಂಡಾಯ ಎದ್ದರಿರುವವರಿಗೆ ಎಚ್ಚರಿಕೆ ಹಾಗೂ ರಾಜ್ಯ ನಾಯಕರಿಗೆ ಒಗ್ಗಟ್ಟಿನ ಮಂತ್ರ ಬೋಧಿಸಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.
ಡಿಕೆ ಸಹೋದರರ ನೆಲದಿಂದಲೇ ಚುನಾವಣಾ ಪ್ರಚಾರಕ್ಕೆ ಅಮಿತ್ ಷಾ, ಚಾಲನೆ ನೀಡಲಿದ್ದಾರೆ. ನಾಳೆ ಬೆಳಗ್ಗೆ ಅರಮನೆ ಮೈದಾನದಲ್ಲಿ ಮೊದಲ ಹಂತದ 11 ಕ್ಷೇತ್ರಗಳ ಅಭ್ಯರ್ಥಿಗಳು ಹಾಗೂ ಮುಖಂಡರ ಜೊತೆ ಅಮಿತ್ ಷಾ ಸುದೀರ್ಘ ಸಮಾಲೋಚನೆ ನಡೆಸಲಿದ್ದಾರೆ.
ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ಅಪಸ್ವರ
ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ಶಾಸಕರು, ಮುಖಂಡರು ಅಪಸ್ವರ ಎತ್ತಿದ್ದಾರೆ.
ಶಿವಮೊಗ್ಗ, ಬೆಳಗಾವಿ ಸೇರಿದಂತೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲೂ ಪಕ್ಷದಲ್ಲಿ ಗೊಂದಲವಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಲೋಕಸಭಾ ಉಸ್ತುವಾರಿ ರಾಧಾ ಮೋಹನದಾಸ್ ಅಗರವಾಲ್, ಅಭ್ಯರ್ಥಿಗಳ ಆಯ್ಕೆ ನಂತರ ಎದ್ದಿರುವ ಗೊಂದಲ ನಿವಾರಣೆಗೆ ನಡೆಸಿದ ಯತ್ನ ಫಲಪ್ರದವಾಗಿಲ್ಲ.
ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಪಕ್ಷದ ಪ್ರಭಾವಿ ಶಾಸಕರೇ ತಿರುಗಿ ಬಿದ್ದಿದ್ದಾರೆ, ಇದನ್ನು ಮನಗಂಡ ವರಿಷ್ಠರು ಅಮಿತ್ ಷಾ ಮೂಲಕವೇ ಇದಕ್ಕೆ ಇತಿಶ್ರೀ ಹಾಡಲು ಬಯಸಿದ್ದಾರೆ.
ಮುಖಂಡರ ಜೊತೆ ಚರ್ಚೆ
ನಾಳೆ ಕೆಲವು ಮುಖಂಡರ ಜೊತೆ ಷಾ, ಚರ್ಚೆ ಮಾಡಲಿದ್ದಾರೆ. ಪಕ್ಷದ ತೀರ್ಮಾನಕ್ಕೆ ವಿರುದ್ಧ ಹೋಗುವವರಿಗೆ ಮುಖಂಡರ ಸಭೆಯಲ್ಲೇ ಎಚ್ಚರಿಕೆ ನೀಡುವುದಲ್ಲದೆ, ಕಠಿಣ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೇ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡಿ ಕಳೆದ ಬಾರಿಯಂತೆ ಈ ಬಾರಿಯೂ ಕರ್ನಾಟಕದಿಂದ ಹೆಚ್ಚು ಸ್ಥಾನಗಳನ್ನು ಕೊಡುಗೆಯಾಗಿ ನೀಡುವಂತೆ ತಿಳಿಸಲಿದ್ದಾರೆ.
ಸಭೆಯ ನಂತರ ವಿಶೇಷ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚನ್ನಪಟ್ಟಣಕ್ಕೆ ತೆರಳಿ ರೋಡ್ ಶೋ ನಡೆಸಲಿದ್ದಾರೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಇದೊಂದೇ ಕ್ಷೇತ್ರದಲ್ಲಿ ಖಾತೆ ತೆರೆದಿದ್ದು, ಈ ಕ್ಷೇತ್ರವನ್ನು ಈ ಬಾರಿ ಕಸಿದುಕೊಳ್ಳಲೆಂದೇ ಡಿಕೆ ಸಹೋದರರ ನೆಲದಿಂದಲೇ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದಾರೆ.
ಬೃಹತ್ ರೋಡ್ ಶೋ
ಪಕ್ಷದ ಅಭ್ಯರ್ಥಿ ಡಾ.ಮಂಜುನಾಥ್ ಜೊತೆಗೂಡಿ ಚನ್ನಪಟ್ಟಣ ಹೊರವಲಯದ ಶೆಟ್ಟಳ್ಳಿಯಿಂದ ಟೌನ್ ಪೊಲೀಸ್ ಠಾಣೆವರೆಗೂ ಸಂಜೆ ಬೃಹತ್ ರೋಡ್ ಶೋ ನಡೆಸಲಿದ್ದಾರೆ.
ರೋಡ್ ಶೋ ನಂತರ ಠಾಣಾ ವೃತ್ತದಲ್ಲಿ ಕಾರ್ಯಕರ್ತರು ಮತ್ತು ಸಾರ್ವಜನಿಕರ ಬೃಹತ್ ಸಮಾವೇಶ ನಡೆಸಿ ಮಾತನಾಡಲಿದ್ದಾರೆ.
ಸಾರ್ವಜನಿಕ ಭಾಷಣದಲ್ಲಿ ಯಾವ ಸಂದೇಶ ನೀಡುತ್ತಾರೆಂಬ ಬಗ್ಗೆ ಬಿಜೆಪಿ ಮುಖಂಡರಲ್ಲೇ ಕುತೂಹಲ ಇದೆ.
ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ರೋಡ್ ಶೋ ಮತ್ತು ಸಮಾವೇಶ ನಡೆಸುತ್ತಿದ್ದು ಸ್ಥಳೀಯ ಶಾಸಕ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಂಡ್ಯ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವೇದಿಕೆ ಹಂಚಿಕೊಳ್ಳಲಿದ್ದಾರೆ.
ನಂತರ ಶೆಟ್ಟಳ್ಳಿಗೆ ಹಿಂತಿರುಗಿ ಹೆಲಿಕಾಪ್ಟರ್ ಮೂಲಕ ನಗರಕ್ಕೆ ಧಾವಿಸಿ ವಿಶೇಷ ವಿಮಾನದಲ್ಲಿ ದೆಹಲಿಗೆ ಹಿಂತಿರುಗಲಿದ್ದಾರೆ.
2 comments
[…] All ರಾಜಕೀಯ ರಾಜಕೀಯ […]
[…] ರಾಜಕೀಯ […]