ಕನ್ನಡಿಗರು ಮಾಡಿರುವ ಅನ್ಯಾಯವಾದರೂ ಏನು?
ಬೆಂಗಳೂರು:ಅಮಿತ್ ಷಾ ಅವರು ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡುವುದಕ್ಕೋ, ಕಿತ್ತುಕೊಳ್ಳುವುದಕ್ಕೋ, ಬರ ಪರಿಹಾರಕ್ಕೆ ಮನವಿ ಮಾಡಿ ನಾಲ್ಕು ತಿಂಗಳು ಕಳೆದಿದೆ ನಯಾಪೈಸೆ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಟೀಕಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಳೆ ಕೊರತೆಯಿಂದಾಗಿ ರಾಜ್ಯದ 223 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ, 33,770 ಕೋಟಿ ರೂ. ಹಾನಿಯಾಗಿದೆ, ಕನಿಷ್ಠ 17,901 ಕೋಟಿ ರೂ. ಪರಿಹಾರ ನೀಡಬೇಕೆಂಬುದು ರಾಜ್ಯದ ಬೇಡಿಕೆಯಾಗಿದೆ ಎಂದಿದ್ದಾರೆ.
ಬಿಜೆಪಿ ಸರ್ಕಾರದಲ್ಲೂ ಪರಿಹಾರ ನೀಡಲಿಲ್ಲ
ರಾಜ್ಯದಲ್ಲಿ 2019ರಲ್ಲಿ ಬಿಜೆಪಿ ಸರ್ಕಾರವಿದ್ದಾಗಲೂ ಅತಿವೃಷ್ಟಿಯಿಂದಾದ ಹಾನಿಗೆ ಪರಿಹಾರ ನೀಡಲಿಲ್ಲ, ಕನ್ನಡಿಗರು ನಿಮಗೆ ಏನು ಅನ್ಯಾಯ ಮಾಡಿದ್ದಾರೆ.
ಬೇರಾವ ಭಾಷೆಗೂ ವಿರೋಧ ಇಲ್ಲ, ಕನ್ನಡ ಭಾಷೆಗೆ ಮೊದಲ ಪೂಜೆ ಸಲ್ಲಬೇಕೆನ್ನುವುದು ಮಾತ್ರ ಕನ್ನಡಿಗರ ನಿಲುವು, ಕನ್ನಡ ಧ್ವಜ ರೂಪಿಸಿ ಅಂಗೀಕಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕಳಿಸಿ ಆರು ವರ್ಷಗಳಾಗುತ್ತಾ ಬಂದರೂ ಇದುವರೆಗೆ ಅನುಮೋದನೆ ನೀಡಿಲ್ಲ.
ಕೇಂದ್ರ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡಿ
ರಾಷ್ಟ್ರೀಕೃತ ಬ್ಯಾಂಕ್, ರೈಲ್ವೆ ಇಲಾಖೆ ಸೇರಿದಂತೆ ಕೇಂದ್ರ ಸರ್ಕಾರಿ ಸ್ವಾಮ್ಯದ ಎಲ್ಲ ಸಂಸ್ಥೆಗಳ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನೂ ಮಾಧ್ಯಮವಾಗಿ ಬಳಸಲು ಅವಕಾಶ ಇರಬೇಕೆಂಬುದು ಕನ್ನಡಿಗರ ಬಹುವರ್ಷಗಳ ಬೇಡಿಕೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆಯ ಆಧಾರದಲ್ಲಿ ಮತ ಕೇಳುವ ವಿಶ್ವಾಸ ನಿಮಗೆ ಇಲ್ಲ, ಮಾಡಿರುವ ತಪ್ಪುಗಳನ್ನು ಒಪ್ಪಿಕೊಳ್ಳುವ ಸಹೃದಯತೆಯೂ ನಿಮಗೆ ಇಲ್ಲ.
ರಾಜಕೀಯ ಲಾಭಕ್ಕಾಗಿ ಸಮಾಜದ ಶಾಂತಿ-ಸೌಹಾರ್ದತೆ ಕೆಡಿಸಬಾರದೆಂಬ ಒಳ್ಳೆಯತನದ ವಿವೇಕವೂ ಇಲ್ಲ, ತಾವು ಗಲಭೆ ನಡೆಸುತ್ತಿರುವುದಾಗಿ ಮೈಸೂರಿನ ಮಾಜಿ ಸಂಸದರೊಬ್ಬರು ಬಹಿರಂಗ ಹೇಳಿಕೆ ನೀಡಿದ್ದಾರೆ.
ರಾಜ್ಯದ ಶಾಂತಿ ಮತ್ತು ನೆಮ್ಮದಿಯನ್ನು ಕೆಡಿಸಬೇಡಿ, ನಿಮ್ಮ ಸರ್ಕಾರದ ಸಾಧನೆಯನ್ನು ಜನತೆಯ ಮುಂದಿಟ್ಟು ಮತಯಾಚನೆ ಮಾಡಿ, ಅಡ್ಡ ಮಾರ್ಗದ ಮೂಲಕ ಚುನಾವಣೆ ಎದುರಿಸಲು ಹೊರಟರೆ ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶವೇ ಲೋಕಸಭಾ ಚುನಾವಣೆಯಲ್ಲಿ ಪುನರಾವರ್ತನೆಯಾಗುವುದು ಖಂಡಿತ ಎಂದಿದ್ದಾರೆ.
2 comments
[…] ರಾಜಕೀಯ […]
[…] ರಾಜಕೀಯ […]