ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಸಚಿವ ಅಮಿತ್ ಷಾ ತರಾಟೆ
ಬೆಂಗಳೂರು:ಕರ್ನಾಟಕದಲ್ಲಿ ಒಬ್ಬರು ಕುರ್ಚಿ ಉಳಿಸಿಕೊಳ್ಳಲು ಹೋರಾಟ ನಡೆಸಿದರೆ, ಇನ್ನೊಬ್ಬರು ಕುರ್ಚಿ ಕಿತ್ತುಕೊಳ್ಳಲು ಹೋರಾಟ ಮಾಡಿಕೊಂಡು ಜನರನ್ನು ಮರೆತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಇಲ್ಲಿನ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಸಿದ್ದರಾಮಯ್ಯ ಪ್ರತಿನಿತ್ಯ ಅಧಿಕಾರ ಉಳಿಸಿಕೊಳ್ಳಲು ತಲ್ಲೀನರಾಗುತ್ತಾರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಗಾದಿ ಹೇಗೆ ಪಡೆಯಬೇಕೆಂಬ ಚಿಂತನೆಯಲ್ಲಿರುತ್ತಾರೆ, ಇಂತಹವರು ಒಳ್ಳೆ ಸರ್ಕಾರ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಬರ ತಾಂಡವವಾಡುತ್ತಿದೆ, ಜನ ಸಂಕಷ್ಟದಲ್ಲಿ ಇದ್ದಾರೆ, ಅತ್ತ ಗಮನ ಕೊಡದ ಈ ನಾಯಕರು ಕುರ್ಚಿಯನ್ನು ಒಬ್ಬರು ಮೇಲೆ ಹಿಡಿದುಕೊಂಡರೆ, ಇನ್ನೊಬ್ಬರು ಕೆಳಗೆ ಹಿಡಿದುಕೊಂಡಿದ್ದಾರೆ, ಇವರು ಜನರ ಕಷ್ಟಕ್ಕೆ ಸ್ಪಂದಿಸುತ್ತಾರಾ ಎಂದರು.
ಅಭಿವೃದ್ಧಿ ಕಡೆ ಗಮನವೇ ಇಲ್ಲ
ಬೆಳಗಾದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವುದನ್ನು ಬಿಟ್ಟರೆ ಅಭಿವೃದ್ಧಿ ಕಡೆ ಗಮನವೇ ಹರಿಸುವುದಿಲ್ಲ ಎಂದು ಸಿದ್ದರಾಮಯ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಭ್ರಚ್ಟಾಚಾರ ತಾಂಡವವಾಡುತ್ತಿದೆ, ಇದನ್ನು ಕರ್ನಾಟಕದ ಜನತೆ ಸಹಿಸುವುದಿಲ್ಲ, ಒಬ್ಬರು ಸಂಸದರ ಮನೆಯಲ್ಲಿ ಮೂರೂವರೆ ಕೋಟಿ ರೂ. ಸಿಕ್ಕರೆ, ಇನ್ನೊಬ್ಬರ ಮನೆಯಲ್ಲಿ 51 ಕೋಟಿ ರೂ. ಸಿಕ್ಕಿದೆ, ಇಷ್ಟಾದರೂ ಶಿವಕುಮಾರ್ ಅವರಿಗೆ ಏನೂ ಅನಿಸುವುದೇ ಇಲ್ಲ, ಭ್ರಷ್ಟರನ್ನು ಜೈಲಿಗೆ ಕಳುಹಿಸದೆ ಮನೆಯಲ್ಲಿ ಇಟ್ಟುಕೊಳ್ಳಬೇಕೆ ಎಂದರು.
ಅರಮನೆ ಆವರಣದಲ್ಲಿ ಐದು ಲೋಕಸಭಾ ಕ್ಷೇತ್ರಗಳ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಭಾಷಣದ ಉದ್ದಕ್ಕೂ ಕಾಂಗ್ರೆಸ್ ಆಡಳಿತದಲ್ಲಿನ ಭ್ರಷ್ಟಾಚಾರ ಹಾಗೂ ಕುರ್ಚಿಗಾಗಿ ಕಚ್ಚಾಡುವುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.
ಮನಮೋಹನ್ ಸಿಂಗ್ ನೇತೃತ್ವದ 10 ವರ್ಷಗಳ ಆಡಳಿತದಲ್ಲಿ ಕರ್ನಾಟಕಕ್ಕೆ 1.42 ಲಕ್ಷ ಕೋಟಿ ರೂ. ನೀಡಿದರೆ. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 4.91 ಲಕ್ಷ ಕೋಟಿ ರೂ. ನೀಡಿದೆ.
ಬೆಂಗಳೂರಿಗೆ ಕೊಡುಗೆ ನೀಡಿದ್ದೇವೆ
ನಾವು ಬೆಂಗಳೂರಿನ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದೇವೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೊ ರೈಲು, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ನಮ್ಮ ಸರ್ಕಾರ ಮಾಡಿದೆ ಎಂದರು.
ಕರ್ನಾಟಕದಲ್ಲಿ 3.5 ಕೋಟಿ ಜನ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿದ್ದಾರೆ, ಈ ಅಂಕಿ-ಅಂಶಗಳನ್ನು ಮುಚ್ಚಿಟ್ಟು ಸಿದ್ದರಾಮಯ್ಯ ಕೇಂದ್ರದ ಮೇಲೆ ಗೂಬೆ ಕೂರಿಸಿ ತಮ್ಮ ಸರ್ಕಾರದ ಹುಳುಕುಗಳನ್ನು ಮುಚ್ಚಿಡುವ ಕೆಲಸ ಮಾಡುತ್ತಿದ್ದಾರೆ.
ಇವರು ಅಧಿಕಾರಕ್ಕೆ ಬಂದ ನಂತರ ಹತ್ತು ಹಲವು ಸಮಸ್ಯೆಗಳನ್ನು ರಾಜ್ಯದ ಜನತೆ ಎದುರಿಸುತ್ತಿದ್ದಾರೆ, ಯಾವ ಸಮಸ್ಯೆಯನ್ನೂ ಪರಿಹರಿಸಿಲ್ಲ, ಕುರ್ಚಿ ಉಳಿವಿಗಾಗಿ ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ ಎಂದು ಅಮಿತ್ ಷಾ ಟೀಕಿಸಿದರು.
ಕೇಂದ್ರ ಸರ್ಕಾರ ದಲಿತರು, ಬಡವರು, ಆದಿವಾಸಿಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ, 2014ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಗೆ ಶೇಕಡ 43ರಷ್ಟು ಮತ ನೀಡಿದೆ, 2019ರಲ್ಲಿ ಶೇಕಡ 51ರಷ್ಟು ಮತ ನೀಡಿದ್ದು, ಈ ಬಾರಿ ಶೇಕಡ 60ರಷ್ಟು ಮತ ನೀಡುವ ಮೂಲಕ ಎಲ್ಲಾ 28 ಕ್ಷೇತ್ರಗಳಲ್ಲೂ ಎನ್‌ಡಿಎ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಮೋದಿ ಅವರ ’ಈ ಬಾರಿ 400 ಮೀರಿ’ ಗುರಿ ಮುಟ್ಟಲು ಸಹಕರಿಸಿ ಎಂದು ಮನವಿ ಮಾಡಿದರು.
12 ಲಕ್ಷ ಕೋಟಿ ರೂ. ಭ್ರಷ್ಟಾಚಾರ
ಕೇಂದ್ರದಲ್ಲಿ ಯುಪಿಎ ಸರ್ಕಾರದ 10 ವರ್ಷಗಳ ಅವಧಿಯಲ್ಲಿ 12 ಲಕ್ಷ ಕೋಟಿ ರೂ.ಗಳ ಭ್ರಷ್ಟಾಚಾರ ನಡೆದಿತ್ತು, ಗುಜರಾತ್‌ನ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರ 23 ವರ್ಷಗಳ ಆಡಳಿತ ಕಾಲದಲ್ಲಿ 25 ಪೈಸೆ ಭ್ರಷ್ಟಾಚಾರ ಆರೋಪವನ್ನೂ ಹೊರಿಸಲು ಸಾಧ್ಯವಾಗಲಿಲ್ಲ.
ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮತ್ತು ಐಎನ್‌ಡಿಐಎ ನಡುವೆ ಭ್ರಷ್ಟಾಚಾರ ವಿರೋಧಿಗಳು ಮತ್ತು ಭ್ರಷ್ಟಾಚಾರಿಗಳ ನಡುವೆ ಹೋರಾಟ ನಡೆದಿದೆ.
80 ಕೋಟಿ ಜನರಿಗೆ ಉಚಿತ ಆಹಾರಧಾನ್ಯ
ಕೇಂದ್ರದ ಮೋದಿ ಸರ್ಕಾರ, 25 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತಿದೆ, 80 ಕೋಟಿ ಜನರಿಗೆ ಉಚಿತವಾಗಿ ಆಹಾರಧಾನ್ಯ ನೀಡುತ್ತಿದೆ, 12 ಕೋಟಿ ಶೌಚಾಲಯಗಳನ್ನು ನಿರ್ಮಿಸಿದೆ, ಬಡವರಿಗಾಗಿ 4 ಕೋಟಿ ಮನೆಗಳನ್ನು ನಿರ್ಮಾಣ ಮಾಡಿದೆ, 10 ಕೋಟಿ ಮಹಿಳೆಯರಿಗೆ ಉಚಿತ ಅಡುಗೆ ಅನಿಲ (ಎಲ್‌ಪಿಜಿ) ಸಂಪರ್ಕ ಒದಗಿಸಿದೆ, 14 ಕೋಟಿ ಮನೆಗಳಿಗೆ ಕೊಳಾಯಿ ನೀರು ತಲುಪಿಸಿದೆ, ದೇಶದ 60 ಕೋಟಿ ಜನರು ಆಯಷ್ಮಾನ್ ಆರೋಗ್ಯ ವಿಮೆಯಡಿ ವರ್ಷಕ್ಕೆ ಐದು ಲಕ್ಷ ರೂ.ವರೆಗೆ ವೈದ್ಯಕೀಯ ಚಿಕಿತ್ಸೆ ಲಾಭ ಪಡೆಯುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕೇಂದ್ರದಲ್ಲಿನ ಮೋದಿ ಸರ್ಕಾರ ವಿಕಸಿತ ಭಾರತಕ್ಕಾಗಿ ಕಳೆದ 10 ವರ್ಷಗಳಿಂದ ಶ್ರಮಿಸುತ್ತಿದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಸೌಲಭ್ಯ ತಲುಪಿಸುವಲ್ಲಿ ಶ್ರಮ ವಹಿಸಿದೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ 10 ತಿಂಗಳಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ, ದಲಿತರು, ರೈತರು, ಬಡವರಿಗೆ ಅನ್ಯಾಯ ಮಾಡುತ್ತಿದೆ, ಮತದಾರರು ಶಾಪ ಹಾಕುತ್ತಿದ್ದಾರೆ, ಇದು ಅಭಿವೃದ್ಧಿ ಶೂನ್ಯ ಸರ್ಕಾರ ಎಂದು ಟೀಕಿಸಿದರು.
2 comments
[…] All ರಾಜಕೀಯ ರಾಜಕೀಯ […]
[…] ರಾಜಕೀಯ […]