ಬೆಂಗಳೂರು:ಲೋಕಸಭಾ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿರುವ ಸಂಸದೆ ಸುಮಲತಾ ಅಂಬರೀಷ್ ಮಂಡ್ಯದಲ್ಲಿ ಎನ್‌ಡಿಎ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಬಲಿಸುವುದಾಗಿ ಘೋಷಣೆ ಮಾಡಿದ್ದಾರೆ.
ಚುನಾವಣಾ ಕಣಕ್ಕಿಳಿಯುವ ಬಗ್ಗೆ ಕಳೆದ ಆರು ತಿಂಗಳಿಂದ ಗೊಂದಲದಲ್ಲಿದ್ದ ಸುಮಲತಾ ದೆಹಲಿ ಬಿಜೆಪಿ ನಾಯಕರ ಮಾತಿಗೆ ಮಣಿದು ಈ ತೀರ್ಮಾನ ಕೈಗೊಂಡಿದ್ದಾರೆ.
ಬಿಜೆಪಿಯನ್ನು ಬೆಂಬಲಿಸುತ್ತೇನೆ
ಸ್ಪರ್ಧಾ ಕಣದಿಂದ ಹಿಂದೆ ಸರಿಯುವುದಕ್ಕೂ ಮುನ್ನ ತಮ್ಮ ಆಪ್ತರು ಮತ್ತು ಬೆಂಬಲಿಗರ ಸಭೆ ನಡೆಸಿ ಈ ಚುನಾವಣೆಯಲ್ಲಿ ಕಣಕ್ಕಿಳಿಯುವುದಿಲ್ಲ ಬಿಜೆಪಿಯನ್ನು ಬೆಂಬಲಿಸುತ್ತೇನೆ. ಹಾಗೆಂದು ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಯುವುದಿಲ್ಲ ಎಂಬರ್ಥ ಅಲ್ಲ, ಸದ್ಯದ ಪರಿಸ್ಥಿತಿಯಲ್ಲಿ ಈ ತೀರ್ಮಾನ ಕೈಗೊಂಡಿದ್ದೇನೆ.
ಕಳೆದ ಚುನಾವಣೆಯಲ್ಲಿ ಮಂಡ್ಯದ ಮತದಾರರು ನನ್ನನ್ನು ಪಕ್ಷೇತರ ಅಭ್ಯರ್ಥಿಯಾಗಿ ಸಂಸತ್‌ಗೆ ಕಳುಹಿಸಿಕೊಟ್ಟರು, ಅವರಿಗೆ ನಾನು ಋಣಿಯಾಗಿದ್ದೇನೆ, ನಾನು ಎಂದಿಗೂ ಈ ಜಿಲ್ಲೆಯಲ್ಲೇ ರಾಜಕಾರಣ ಮಾಡುವವಳು.
ಪ್ರಧಾನಿ ಮೋದಿ ಅವರಿಗೆ ಚಿರಋಣಿ
ನಾನು ಪಕ್ಷೇತರರಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಕ್ಷೇತ್ರಕ್ಕೆ 4.000 ಕೋಟಿ ರೂ. ಅನುದಾನ ನೀಡಿದ್ದಾರೆ, ಅವರಿಗೆ ನಾನು ಚಿರಋಣಿ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದೆ, ಮುಂದೆ ಆ ಪಕ್ಷದ ಜೊತೆ ಇರುತ್ತೇನೆ ಎನ್ನುವ ಮೂಲಕ ಬಿಜೆಪಿ ಸೇರುವ ಮುನ್ಸೂಚನೆ ನೀಡಿದರು.
ಇದು ನನ್ನ ಕಾರ್ಯಕರ್ತರ ಹಾಗೂ ಮಂಡ್ಯ ಜಿಲ್ಲೆಯ ಜನತೆಯ ಹಿತಕ್ಕಾಗಿ ತೆಗೆದುಕೊಂಡ ನಿರ್ಧಾರವಾಗಿದೆ. ಮಂಡ್ಯವೇ ನನ್ನ ಕರ್ಮ ಭೂಮಿ. ನನ್ನ ರಾಜಕಾರಣ ಮಂಡ್ಯ ಬಿಟ್ಟು ಒಂದಿಂಚೂ ಸಾಗದು ಎಂದರು.
ಬದಲಾದ ಸನ್ನಿವೇಶ ಹಾಗೂ ಪರಿಸ್ಥಿತಿಯಲ್ಲಿ ನಾನು ಈ ತೀರ್ಮಾನವನ್ನು ತೆಗೆದಕೊಂಡಿದ್ದೇನೆ. ಪಕ್ಷೇತರವಾಗಿಯೂ ನಾನು ಸ್ಪರ್ಧೆ ಮಾಡಬಹುದಿತ್ತು, ಆದರೆ, ಇದರಿಂದ ಯಾರಿಗೆ ಲಾಭ ಆಗುತ್ತದೆ ಎಂಬುದು ಮುಖ್ಯ ಪ್ರಶ್ನೆ ಆಗುತ್ತದೆ ಎಂದರು.
ಟಿಪಿಕಲ್ ರಾಜಕಾರಣಿ ಅಲ್ಲ
ನಾನು ಎಲ್ಲರಂತೆ ಟಿಪಿಕಲ್ ರಾಜಕಾರಣಿ ಅಲ್ಲ. ನನಗೆ ಬಿಜೆಪಿ ಹೈಕಮಾಂಡ್ ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಸಾಕಷ್ಟು ಅವಕಾಶ ನೀಡಿತ್ತು, ಆದರೆ, ನನಗೆ ಮಂಡ್ಯ ಬಿಟ್ಟು ರಾಜಕಾರಣ ಮಾಡಲು ಆಗುವುದಿಲ್ಲ, ನಿಮ್ಮನ್ನು ಹಾಗೂ ಅಂಬರೀಶ್ ಅವರ ಕನಸನ್ನು ಬಿಟ್ಟು ಹೋದರೆ ಯಾರೂ ಮೆಚ್ಚಲಾರರು, ನಾನು ಮಂಡ್ಯದಲ್ಲಿಯೇ ಇರುತ್ತೇನೆ ಎಂದು ಸುಮಲತಾ ಅಂಬರೀಶ್ ಹೇಳಿದರು.
ಇಂದು ನಾನು ಸಂಸದೆ, ಆದರೆ, ನಾಳೆ ನನ್ನ ಜಾಗಕ್ಕೆ ಇನ್ನೊಬ್ಬರು ಬರುತ್ತಾರೆ, ಕೊನೆಯವರೆಗೂ ನಾನು ಅಂಬರೀಶ್ ಪತ್ನಿ ಎಂಬುದನ್ನು ಯಾರಿಂದಲೂ ಕಿತ್ತುಕೊಳ್ಳಲಾಗದು.
ನನ್ನ ಮುಂದಿನ ದಾರಿ ಏನೆಂಬುದನ್ನು ನೋಡಿದೆ, ಸ್ವತಂತ್ರ ಸ್ಪರ್ಧೆ ಮಾಡುವುದು ಸೂಕ್ತ ಅಲ್ಲ ಎನಿಸಿತು, ಕಾಂಗ್ರೆಸ್‌ನವರೇ ನನ್ನನ್ನು ಬೇಡ ಎಂದ ಮೇಲೆ ಆ ಪಕ್ಷಕ್ಕೆ ನಾನು ಎಂದೂ ಹೋಗಲಾರೆ, ಆದರೆ, ನಾನು ಪಕ್ಷೇತರವಾಗಿ ಸ್ಪರ್ಧೆ ಮಾಡಿ ಗೆದ್ದಿದ್ದರೂ ನನಗೆ ನನ್ನ ಕ್ಷೇತ್ರಕ್ಕೆ 4 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಬಿಜೆಪಿ ಕೊಟ್ಟಿದೆ.
ಮೋದಿ ನನ್ನ ಬೆಂಬಲಕ್ಕೆ ಸದಾ ಇದ್ದಾರೆ
ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಕಪ್ಪು ಚುಕ್ಕಿ ಇಲ್ಲ, ನನ್ನ ಬೆಂಬಲಕ್ಕೆ ಸದಾ ಇದ್ದಾರೆ, ಅಲ್ಲದೆ, ನಾನು ಪಕ್ಷೇತರವಾಗಿ ಸ್ಪರ್ಧೆ ಮಾಡುವುದು ಬೇಡ ಎಂದು ಸ್ವತಃ ಪ್ರಧಾನಿಯವರೇ ಕರೆದು ಹೇಳಿದ್ದಾರೆ, ಒಬ್ಬ ಪ್ರಧಾನಿಯೇ ನನಗೆ ಗೌರವ ಕೊಡುವಾಗ ನನಗೆ ಇನ್ನೇನು ಬೇಕು, ಈ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸದಿರಲು ತೀರ್ಮಾನ ಕೈಗೊಂಡಿದ್ದೇನೆ ಎಂದರು.
ನಾನು ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ, ಆದರೆ, ಅದರ ಬಗ್ಗೆ ಪ್ರಚಾರ ತೆಗೆದುಕೊಳ್ಳಲು ಹೋಗಿಲ್ಲ, ಸಾಧನೆಗಳು ನಮ್ಮ ಬಗ್ಗೆ ಮಾತನಾಡಬೇಕು, ನಾವು ಸಾಧನೆಗಳ ಬಗ್ಗೆ ಮಾತನಾಡಬಾರದು ಎಂದು ಅಂಬರೀಶ್ ಸದಾ ಹೇಳುತ್ತಿದ್ದರು, ಅದನ್ನೇ ನಂಬಿಕೊಂಡು ಬಂದವಳು ನಾನು ಎಂದರು.
ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿಯುವ ನಿರ್ಧಾರ ಕೈಗೊಂಡ ನಂತರ ಸುಮಲತಾ ಅವರ ಮನೆಗೆ ತೆರಳಿ ಬೆಂಬಲ ಕೋರಿದ್ದರು.
ಕಾರ್ಯಕರ್ತರು ಮತ್ತು ಮುಖಂಡರ ಸಭೆಯನ್ನು ಏಪ್ರಿಲ್ ೩ರಂದು ಕರೆದಿದ್ದು ಅಂದು ಒಳ್ಳೆ ನಿರ್ಧಾರ ಕೈಗೊಳ್ಳುವುದಾಗಿ ಕುಮಾರಸ್ವಾಮಿ ಅವರಿಗೆ ತಿಳಿಸಿದ್ದರು.
2 comments
[…] All ರಾಜಕೀಯ ರಾಜಕೀಯ […]
[…] ರಾಜಕೀಯ […]