ಶಾಸಕರು, ಮುಖಂಡರಿಗೆ ಎಚ್ಚರಿಕೆ
ಬೆಂಗಳೂರು:ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಲಭಿಸಿರುವ ಗೆಲುವಿನ ಮತಗಳು ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಲಭ್ಯವಾಗಬೇಕು, ಇಲ್ಲದಿದ್ದರೆ ನಿಮ್ಮನ್ನು ಪಕ್ಷದ ಕಪ್ಪುಪಟ್ಟಿಗೆ ಸೇರಿಸಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಪಕ್ಷದ ಶಾಸಕರು ಹಾಗೂ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.
ಶನಿವಾರದಿಂದ ರಾಜ್ಯಾದ್ಯಂತ ಮುಖಂಡರು ಚುನಾವಣಾ ಪ್ರವಾಸ ಕೈಗೊಳ್ಳುವುದಕ್ಕೂ ಮುನ್ನಾ ದಿನ ಪಕ್ಷದ ಕಚೇರಿಯಲ್ಲಿ ದಿನವಿಡೀ ವಿವಿಧ ಹಂತದ ಮುಖಂಡರುಗಳ ಸಭೆ ನಡೆಸಿ, ಅಭ್ಯರ್ಥಿಗಳ ಗೆಲುವಿನ ಗುರಿಯನ್ನು ಮುಖಂಡರು ಮತ್ತು ಕಾರ್ಯಕರ್ತರ ಹೆಗಲಿಗೆ ಹಾಕಿದ್ದಾರೆ.
ಕನಿಷ್ಠ 20 ಕ್ಷೇತ್ರ ಗೆಲ್ಲಲೇಬೇಕು
ರಾಜ್ಯದ 28 ಕ್ಷೇತ್ರಗಳ ಪೈಕಿ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲಲೇಬೇಕು, ನಾವು ವಿಧಾನಸಭಾ ಚುನಾವಣೆಯಲ್ಲಿ ಸಾಧಿಸಿದ್ದನ್ನು ಇಲ್ಲಿಯೂ ಸಾಧಿಸಬೇಕು.
ವಿಧಾನಸಭಾ ಚುನಾವಣೆಯಲ್ಲಿ ನಮಗೆ ಬಂದಿರುವ ಮತಗಳ ಜೊತೆಗೆ ಇನ್ನೂ ಹೆಚ್ಚಿನ ಮತಗಳನ್ನು ಪಡೆಯಲು ಕಾರ್ಯಕ್ರಮ ರೂಪಿಸಿ, ಒಂದು ವೇಳೆ ನೀವುಗಳು ಇದರಲ್ಲಿ ವಿಫಲರಾದರೆ, ನೀವು ಮುಂದೆ ಪಕ್ಷದಲ್ಲಿ ಯಾವುದೇ ಅಧಿಕಾರ ಕೇಳುವ ಹಕ್ಕು ಕಳೆದುಕೊಳ್ಳುತ್ತೀರಿ, ನಿಮ್ಮನ್ನು ಪಕ್ಷ ಕಪ್ಪುಪಟ್ಟಿಗೆ ಸೇರಿಸುತ್ತದೆ.
ಶಾಸಕರು ಮತ್ತು ಚುನಾವಣೆಯಲ್ಲಿ ಪರಾಭವಗೊಂಡವರು ನೀವು ಪಡೆದ ಮತಗಳಿಗಿಂತ ಹೆಚ್ಚಿನ ಮತಗಳನ್ನು ಗಳಿಸಲೇಬೇಕು ಎಂದು ತಾಕೀತು ಮಾಡಿದ್ದಾರೆ.
ಸಿದ್ಧತೆ ಮಾಡಿಕೊಳ್ಳಿ
ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ, ಎರಡನೇ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಕ್ಷಣಗಣನೆ ಆರಂಭಗೊಳ್ಳಲಿದೆ, ನಿಮಗೆ ಸಮಯಾವಕಾಶವಿದೆ, ನೀವು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಿ.
ಅಭ್ಯರ್ಥಿಗಳು ಮತ್ತು ಮುಖಂಡರುಗಳು ತಮ್ಮ ಸಮಯ ವ್ಯರ್ಥ ಮಾಡಬೇಡಿ, ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಿ, ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿ.
ಕೋಲಾರದ ಮುಳುಬಾಗಿಲಿನ ಕುರುಡುಮಲೆ ಗಣೇಶನಿಗೆ ಪೂಜೆ ಸಲ್ಲಿಸಿ, ಅಲ್ಲಿಂದಲೇ ನಾನು ಮತ್ತು ಶಿವಕುಮಾರ್ ಹಾಗೂ ಇತರ ಮುಖಂಡರು ಚುನಾವಣಾ ಪ್ರಚಾರ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಪ್ರತ್ಯೇಕ ತಂಡಗಳಾಗಿ ಪ್ರಚಾರ
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಮುಖಂಡರುಗಳು ಪ್ರತ್ಯೇಕ ತಂಡಗಳಾಗಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತೇವೆ.
ದೆಹಲಿಯ ಮುಖಂಡರುಗಳು ಭಾಗಿಯಾಗುತ್ತಾರೆ, ನೀವು, ನಿಮ್ಮ ಕ್ಷೇತ್ರಗಳಲ್ಲಿ ವಿಶ್ರಮಿಸದೆ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಟೊಂಕ ಕಟ್ಟಿ ನಿಲ್ಲಿ ಎಂದಿದ್ದಾರೆ.
ಮಾಜಿ ಸಚಿವ ಶಂಕರ್ ಹಾಗೂ ಇತರ ಕೆಲವು ಮುಖಂಡರುಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಎರಡನೇ ಹಂತದಲ್ಲಿ ನಡೆಯುವ ಎಲ್ಲಾ ಕ್ಷೇತ್ರಗಳ ಮುಖಂಡರ ಜೊತೆ ಸಭೆ ನಡೆಸಿದರು.
ತದನಂತರ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ತನ್ವೀರ್ ಸೇಠ್, ವಿನಯಕುಮಾರ್ ಸೊರಕೆ, ಜಿ.ಸಿ.ಚಂದ್ರಶೇಖರ್, ವಿನಯ್ ಕುಲಕರ್ಣಿ, ಮಂಜುನಾಥ್ ಭಂಡಾರಿ, ವಸಂತಕುಮಾರ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಚುನಾವಣೆಗೆ ಸಂಬಂಧಿಸಿದಂತೆ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳ ಜೊತೆಯೂ ಸಭೆ ನಡೆಸಿದ ನಾಯಕರು ಲೋಕಸಭಾ ಚುನಾವಣಾ ಗೆಲುವಿನ ಟಾರ್ಗೆಟ್ ನೀಡಿದರು.