ಬೆಂಗಳೂರು:ಆಡಳಿತಾರೂಢ ಕಾಂಗ್ರೆಸ್, ಲೋಕಸಭಾ ಚುನಾವಣೆಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಅಕ್ರಮ ಮತ್ತು ಅವ್ಯವಹಾರಗಳನ್ನು ತಡೆಗಟ್ಟಲು ಕೇಂದ್ರ ಚುನಾವಣಾ ಆಯೋಗ ಗಡಿ ಭದ್ರತಾ ಪಡೆ ಹಾಗೂ ಕೆಲವು ಅಧಿಕಾರಿಗಳ ತಂಡವನ್ನು ಕರ್ನಾಟಕಕ್ಕೆ ಕಳಹಿಸಿದೆ.
ಕೆಲವು ಕಾಂಗ್ರೆಸ್ ಅಭ್ಯರ್ಥಿಗಳು ಮತ ಪಡೆಯಲು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಅದರಲ್ಲೂ ಕೆಲವು ಜಿಲ್ಲೆಗಳಲ್ಲಿ ಇಡೀ ಆಡಳಿತವೇ ಆ ಪಕ್ಷದ ಅಭ್ಯರ್ಥಿಗಳ ಬೆನ್ನಿಗೆ ನಿಂತಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು.
ಆಡಳಿತ ದುರುಪಯೋಗ
ಬೆಂಗಳೂರು ಗ್ರಾಮಾಂತರ, ಹಾಸನ, ಮಂಡ್ಯ, ಮೈಸೂರು-ಕೊಡಗು ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಅಧಿಕಾರಸ್ತರು ಆಡಳಿತ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.
ಮತದಾರರನ್ನು ಓಲೈಸಿಕೊಳ್ಳಲು ಹಣ ಸೇರಿದಂತೆ ಉಡುಗೊರೆಗಳನ್ನು ಯತೇಚ್ಛವಾಗಿ ನೀಡುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಜಿಲ್ಲಾ ಆಡಳಿತಕ್ಕೆ ಮತ್ತು ಜಿಲ್ಲಾಧಿಕಾರಿಗಳಿಗೆ ನಾವು ನೀಡಿದ ದೂರಿಗೆ ಕಿಚ್ಚಿತ್ತೂ ಬೆಲೆಯಿಲ್ಲ.
ತಕ್ಷಣವೇ ಮಧ್ಯೆ ಪ್ರವೇಶ ಮಾಡಿ ಆಮಿಷಗಳನ್ನು ಒಡ್ಡುವುದನ್ನು ನಿಯಂತ್ರಿಸಿ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅವಕಾಶ ಮಾಡಿಕೊಂಡಬೇಕೆಂದು ದೂರು ನೀಡಿದ್ದರು.
ಕೇಂದ್ರ ಸಚಿವರ ಗಮನಕ್ಕೆ
ತದನಂತರ ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಹೇಗೆ ಆಡಳಿತವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ, ಮತದಾರರನ್ನು ಓಲೈಸಿಕೊಳ್ಳಲು ದೊಡ್ಡ ಪ್ರಮಾಣದಲ್ಲಿ ಆಮಿಷಗಳನ್ನು ಅವರ ಅಭ್ಯರ್ಥಿಗಳು ಒಡ್ಡುತ್ತಿದ್ದಾರೆ ಎಂಬುದೂ ಸೇರಿದಂತೆ ಕೆಲವು ಸೂಕ್ಷ್ಮ ಮಾಹಿತಿಗಳನ್ನು ಕೇಂದ್ರ ಸಚಿವರ ಗಮನಕ್ಕೆ ತಂದಿದ್ದರು.
ಅಷ್ಟೇ ಅಲ್ಲ, ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಯ ಕೆಲವು ನಾಯಕರೇ, ಕಾಂಗ್ರೆಸ್ ಮುಖಂಡರ ಜೊತೆ ಶಾಮೀಲಾಗಿರುವ ಬಗ್ಗೆ ವಿವರಣೆ ನೀಡಿದ್ದರು.
ಷಾ ಅವರು ದೆಹಲಿಗೆ ಹಿಂತಿರುಗುತ್ತಿದ್ದಂತೆ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಬಿಜೆಪಿ ಮುಖಂಡರಿಗೆ ಚಾಟಿ ಬೀಸುವ ಕೆಲಸ ಮಾಡಿದರು.
ದೂರಿನ ಪ್ರತಿ ರವಾನೆ
ಮತ್ತೊಂದೆಡೆ ಕೇಂದ್ರ ಚುನಾವಣಾ ಆಯೋಗ ದೇವೇಗೌಡರು ಬರೆದ ದೂರಿನ ಪ್ರತಿಯನ್ನು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳಿಗೆ ರವಾನೆ ಮಾಡಿ ಈ ಬಗ್ಗೆ ತನಿಖೆ ನಡೆಸಿ ಕಠಿಣ ಕ್ರಮ ಜರುಗಿಸುವಂತೆ ಸೂಚಿಸಿತ್ತು.
ಇದಾದ ನಂತರ ಕೇಂದ್ರ ಗಡಿ ಭದ್ರತಾ ಪಡೆಯ 16 ತುಕಡಿ ರಾಜ್ಯಕ್ಕೆ ಬಂದಿಳಿದಿದೆ, ಅವುಗಳನ್ನು ಇನ್ನೂ ಯಾವುದೇ ಕ್ಷೇತ್ರಕ್ಕೆ ನಿಯೋಜನೆ ಮಾಡಿಲ್ಲ.
ದೂರುಗಳ ಹಿನ್ನೆಲೆಯಲ್ಲಿ ಸೂಕ್ಷ್ಮ ಹಾಗೂ ಪ್ರಭಾವೀ ಕ್ಷೇತ್ರಗಳಿಗೆ ಕೇಂದ್ರ ಪಡೆಗಳನ್ನು ನಿಯೋಜಿಸಲಿದ್ದಾರೆ.