ಮುಂದಿನ ಆದೇಶದವರೆಗೆ ಕಾಯಲು ಸುಪ್ರೀಂಕೋರ್ಟ್ ಸೂಚನೆ
ನವದೆಹಲಿ:ರಾಜ್ಯ ಪಠ್ಯಕ್ರಮ ಭೋದಿಸುವ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳು ಇತ್ತೀಚೆಗೆ 5, 8, 9 ಮತ್ತು 11ನೇ ತರಗತಿಗಳಿಗೆ ನಡೆಸಿದ ಬೋರ್ಡ್ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಬಾರದು, ನ್ಯಾಯಾಲಯದ ಮುಂದಿನ ಆದೇಶದವರೆಗೆ ಕಾಯಬೇಕು ಎಂದು ಸುಪ್ರೀಂ ಕೋರ್ಟ್ ಇಂದು ಸೂಚನೆ ನೀಡಿದೆ.
ಈ ಹಿಂದೆ ರಾಜ್ಯ ಹೈಕೋರ್ಟ್ 5, 8, 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕೆ ನಡೆಸಲು ಅಸ್ತು ಎಂದಿತ್ತು. ಹೈಕೋರ್ಟ್‌ನ ಈ ಆದೇಶಕ್ಕೂ ತಡೆ ನೀಡಿರುವ ಸುಪ್ರೀಂಕೋರ್ಟ್, ಸದ್ಯ ಯಾವುದೇ ಶಾಲೆಗಳು ಬೋರ್ಡ್ ಪರೀಕ್ಷೆ ಫಲಿತಾಂಶ ಪ್ರಕಟಿಸಬಾರದು ಎಂದು ಸೂಚಿಸಿದೆ.
ಆದರೆ, ಇಂದು ಬೆಳಗ್ಗೆಯಷ್ಟೇ ಕೆಲವು ಶಾಲೆಗಳೂ ಬೋರ್ಡ್ ಪರೀಕ್ಷೆ ಫಲಿತಾಂಶಗಳನ್ನು ಪ್ರಕಟಿಸಿದ್ದು, ನಂತರ ಈ ಆದೇಶ ಹೊರಬಿದ್ದಿದೆ.
ಬಿಜೆಪಿ, ಕಾಂಗ್ರೆಸ್ ಸರ್ಕಾರಗಳ ನಿರ್ಧಾರ
ಬಿಜೆಪಿ ಆಡಳಿತದಲ್ಲಿ ಶಿಕ್ಷಣ ಸಚಿವರಾಗಿದ್ದ ಬಿ.ಸಿ ನಾಗೇಶ್ 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್ ಮಾದರಿಯ ಮೌಲ್ಯಾಂಕನ ಪರೀಕ್ಷೆ ಪದ್ಧತಿ ಜಾರಿಗೆ ತಂದಿದ್ದರು, ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ 9 ಮತ್ತು 11 ನೇ ತರಗತಿ ವಿದ್ಯಾರ್ಥಿಗಳಿಗೂ ಬೋರ್ಡ್ ಪರೀಕ್ಷೆ ನಡೆಸುವ ಚಿಂತನೆಯಿಂದ, 9 ಮತ್ತು 11ನೇ ತರಗತಿಗಳಿಗೂ ಪಬ್ಲಿಕ್ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳ ಕಲಿಕೆಯಲ್ಲಿ ಗಂಭೀರತೆ ಕಾಣಬಹುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುತ್ತೋಲೆ ಹೊರಡಿಸಿದ್ದರು.
ಈ ಸಂಬಂಧ 2023ರ ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಗಳನ್ನು ಪ್ರಶ್ನಿಸಿ, ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಸಂಘಟನೆ ಕೋರ್ಟ್ ಮೆಟ್ಟಲೇರಿತ್ತು.
ವಾದ ಆಲಿಸಿದ ಹೈಕೋರ್ಟ್ ಸರ್ಕಾರ ಸುತ್ತೋಲೆ ರದ್ದುಗೊಳಿಸಿ ಆದೇಶಿಸಿತ್ತು, ತಕ್ಷಣವೇ, ಶಿಕ್ಷಣ ಇಲಾಖೆ ಹೈಕೋರ್ಟ್‌ನ ದ್ವಿಸದಸ್ಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿತು.
ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಪರೀಕ್ಷೆ ನಡೆಸಲು ಷರತ್ತುಬದ್ಧ ಅನುಮತಿ ನೀಡಿ, ಔಟ್ ಆಫ್ ಸಿಲಬಸ್ ಪ್ರಶ್ನೆಗಳನ್ನು ಕೇಳಬಾರದು, ಯಾರನ್ನೂ ಅನುತ್ತೀರ್ಣಗೊಳಿಸಬಾರದು ಮತ್ತು ಫಲಿತಾಂಶವನ್ನು ಶಾಲಾ ಮಟ್ಟದಲ್ಲಿ ಮಾತ್ರ ಪ್ರಕಟಿಸಬೇಕು ಎಂಬ ಷರತ್ತುಗಳನ್ನು ವಿಧಿಸಿತ್ತು.