ಬೆಂಗಳೂರು:ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೊಡುವ ಮತ ಭ್ರಷ್ಟಾಚಾರಕ್ಕೆ ಮತ್ತು ದೇಶದ ಅಭದ್ರತೆಗೆ ನೀಡುವ ಮತವಾಗಿರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಅವರ ಗ್ಯಾರಂಟಿಗೆ ಮತ ನೀಡುವುದರಿಂದ ಸದೃಢ, ಸುರಕ್ಷಿತ ಭಾರತದ ಆರ್ಥಿಕ ಪ್ರಗತಿಗೆ ಹಾಗೂ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದಿದ್ದಾರೆ.
ಎನ್‌ಡಿಎ ಅಭ್ಯರ್ಥಿಗಳಿಗೆ ಮತ ಹಾಕಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಮತ ನೀಡಿದರೆ ಆಂತರಿಕ ಸುರಕ್ಷತೆಯ ಅಪಾಯಕ್ಕೆ ನಾಂದಿಯಾಗುತ್ತದೆ, ಮತ ನೀಡುವ ಮುನ್ನ ರಾಷ್ಟ್ರದ ಭದ್ರತೆ ಮತ್ತು ಐಕ್ಯತೆಯನ್ನು ಗಮನಲ್ಲಿಟ್ಟುಕೊಂಡು ಎನ್‌ಡಿಎ ಅಭ್ಯರ್ಥಿಗಳಿಗೆ ಮತ ಹಾಕಿ ಎಂದು ಮನವಿ ಮಾಡಿದರು.
ದೇಶ ವಿಭಜನೆಯ ಅಪಸ್ವರ ಎತ್ತುವವರನ್ನು, ಜನರನ್ನು ಭಾಷೆ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಒಡೆಯುವ ಇಂಡಿಯಾ ಮೈತ್ರಿಕೂಟವನ್ನು ಜನತೆ ಸಾರಾಸಗಟಾಗಿ ತಿರಸ್ಕರಿಸುವಂತೆ ಕೋರಿದರು.
ಮೋದಿ ಅವರು ಗ್ಯಾರಂಟಿ ನೀಡಿದರೆ ಅದು ಜಾರಿಗೆ ಬಂದೇ ಬರುತ್ತದೆ, ಪೊಳ್ಳು ಆಶ್ವಾಸನೆ ನೀಡುವ ಪ್ರಶ್ನೆಯೇ ಇಲ್ಲವಾಗಿದೆ ಎಂಬುದನ್ನು ರಾಷ್ಟ್ರದ ಜನತೆ ನಂಬಿದ್ದಾರೆ.
ಕಾಂಗ್ರೆಸ್ ಪಕ್ಷ ಸುಳ್ಳಿನ ಕಂತೆ
ಕಾಂಗ್ರೆಸ್ ಪಕ್ಷ ಸುಳ್ಳಿನ ಕಂತೆಯ ಪ್ರಣಾಳಿಕೆಯಂತೆ, ಬಿಜೆಪಿ ಜನರ ದಾರಿ ತಪ್ಪಿಸುವ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ರಾಜ್ಯದಲ್ಲಿ ಕಳೆದ 10 ತಿಂಗಳಲ್ಲಿ ಯಾವುದೇ ಅಭಿವೃದ್ಧಿಯನ್ನು ಮಾಡದೆ, ಸಿದ್ದರಾಮಯ್ಯ ಸರ್ಕಾರ ಬರೀ ಗ್ಯಾರಂಟಿಯಲ್ಲೇ ಜಪ ಮಾಡಿಕೊಂಡು ಕಳೆದಿದೆ, ಇಂತಹವರಿಗೆ ಮತ ನೀಡಿ ವ್ಯರ್ಥ ಮಾಡಿಕೊಳ್ಳಬೇಡಿ ಎಂದರು.
ಸಿದ್ದರಾಮಯ್ಯ ಸೇರಿದಂತೆ ಅವರ ಸಂಪುಟ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಪದೇ ಪದೆ ಹರಿಹಾಯುತ್ತಲೇ ಬಂದಿದ್ದಾರೆ, ಎರಡು ಕೋಟಿ ಉದ್ಯೋಗ ಕೊಟ್ಟರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. 2014ರಿಂದ ಈವರೆಗೂ 7 ಕೋಟಿ ಹೊಸ ಉದ್ಯೋಗ ಸೇರ್ಪಡೆಯಾಗಿದೆ, ಎಂಎಸ್‌ಎಂಇ ಸಂಖ್ಯೆ ಕೂಡ ಹೆಚ್ಚಳವಾಗಿದೆ ಎಂದರು.
ಆರು ವಂದೇ ಭಾರತ್ ರೈಲು
ರಾಷ್ಟ್ರೀಯ ಹೆದ್ದಾರಿ 3,234 ಕಿ.ಮೀ ಬಿಜೆಪಿ ಅವಧಿಯಲ್ಲಿ ಆಗಿದೆ, ಪ್ರತಿ ದಿನ 33 ಕಿ.ಮೀ ರಸ್ತೆ ಮಾಡಲಾಗುತ್ತಿದೆ, ಕರ್ನಾಟಕದಲ್ಲಿ ರೈಲ್ವೇ ಯೋಜನೆಯನ್ನು ವಿದ್ಯುದೀಕರಣ ಮಾಡಲಾಗಿದೆ. ಆರು ವಂದೇ ಭಾರತ್ ರೈಲು ಸಂಚಾರ ಮಾಡುತ್ತಿವೆ.
ರಾಜ್ಯದ 54 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಆರು ಸಾವಿರ ರೂ. ಕೊಡಲಾಗುತ್ತಿದೆ. ಇದರೊಂದಿಗೆ ಬಿಜೆಪಿ ಅಧಿಕಾರದಲ್ಲಿದ್ದಾಗ ಹೆಚ್ಚುವರಿಯಾಗಿ ನಾಲ್ಕು ಸಾವಿರ ರೂ. ರೈತರಿಗೆ ನೀಡುತ್ತಿದ್ದೆವು, ಈಗಿನ ರಾಜ್ಯ ಸರ್ಕಾರ ಅದನ್ನು ನಿಲ್ಲಿಸಿದೆ.
ಕೇಂದ್ರದ ಹತ್ತು ವರ್ಷಗಳ ಸಾಧನೆ ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ, ವಿಶ್ವದ ಆರ್ಥಿಕ ಅಭಿವೃದ್ಧಿಯಲ್ಲಿ ಐದನೇ ಸ್ಥಾನದಲ್ಲಿ ಭಾರತ ಇದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ.
ಸಂವಿಧಾನ ವಿಧಿ 370 ರದ್ದು
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಕೇದಾರನಾಥ ಜೀರ್ಣೋದ್ಧಾರ, ಎಕ್ಸ್‌ಪ್ರೆಸ್ ಕಾರಿಡಾರ್, ಸಂವಿಧಾನ ವಿಧಿ 370 ರದ್ದು, 21 ಲಕ್ಷ ನಿವೃತ್ತ ಯೋಧರಿಗೆ ಒಂದು ಶ್ರೇಣಿ ಒಂದು ಪೆನ್ಷನ್.
ಕೇಂದ್ರದಿಂದ ರಾಜ್ಯಕ್ಕೆ 1.85 ಲಕ್ಷ ಕೋಟಿ ರೂ. ತೆರಿಗೆ ಹಣ ಪಾವತಿಯಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿ ಲಕ್ಷಾಂತರ ಮನೆಗೆ ನಲ್ಲಿ ನೀರು ಹರಿಸಲಾಗಿದೆ, ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೆ ತರಲಾಗಿದೆ.
ಗರೀಬ್ ಕಲ್ಯಾಣ ಯೋಜನೆ ಮೂಲಕ 70 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯ ಬಿಡುಗಡೆ ಮಾಡಲಾಗಿದೆ.
ರಾಜ್ಯದಲ್ಲಿ ಐಐಡಿ, ವಿಧಿ ವಿಜ್ಞಾನ ಪ್ರಯೋಗಾಲಯಗಳನ್ನು ತೆರೆಯಲಾಗಿದೆ, ಬೆಂಗಳೂರಿನಲ್ಲಿ ಸ್ಯಾಟಲೈಟ್ ರಿಂಗ್ ರೋಡ್ ನಿರ್ಮಾಣಕ್ಕೆ ಭಾರತ್ ಮಾಲಾ ಯೋಜನೆಯಡಿ ಹಣ ಬಿಡುಗಡೆಗೆ ತಯಾರಿ ನಡೆಯುತ್ತಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್-2 ಕಾರ್ಯಾರಂಭವಾಗಿದೆ ಎಂದು ಯಡಿಯೂರಪ್ಪ ಕೇಂದ್ರದಿಂದ ರಾಜ್ಯಕ್ಕೆ ನೀಡಲಾದ ಕಾರ್ಯಕ್ರಮಗಳ ಪಟ್ಟಿ ನೀಡಿದರು.